ADVERTISEMENT

`ಹೆಣ್ಣಿನ ಕಡೆಗಣನೆ-ಉದ್ಧಾರ ಅಸಾಧ್ಯ'

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2012, 6:16 IST
Last Updated 5 ಡಿಸೆಂಬರ್ 2012, 6:16 IST

ಉಡುಪಿ: `ಹೆಣ್ಣು ಮಕ್ಕಳ ಮೇಲೆ ಶೋಷಣೆ ನಡೆಯುತ್ತಿರುವುದು ನಾಚಿಗೇಡಿನ ಸಂಗತಿ. ಹೆಣ್ಣನ್ನು ಕಡೆಗಣಿಸಿದರೆ, ಆಕೆಯ ಮೇಲೆ ದೌರ್ಜನ್ಯ ನಡೆಸಿದರೆ ಸಮಾಜದ ಉದ್ಧಾರ ಅಸಾಧ್ಯ' ಎಂದು ಉಡುಪಿ ನಗರಸಭೆ ಅಧ್ಯಕ್ಷ ಕಿರಣ್ ಕುಮಾರ್ ಅಭಿಪ್ರಾಯಪಟ್ಟರು.

ವಿಶ್ವ ಮಾನವ ಹಕ್ಕುಗಳ ಪಕ್ಷಾಚರಣೆ ಅಂಗವಾಗಿ ಜಿಲ್ಲಾ ಕೊರಗಾಭಿವೃದ್ಧಿ ಸಂಘಗಳ ಒಕ್ಕೂಟದ ವತಿಯಿಂದ ಮಂಗಳವಾರ ಆದಿಉಡುಪಿಯ ಅಂಬೇಡ್ಕರ್ ಭವನದಲ್ಲಿ ನಡೆದ `ಹೆಣ್ಣು ಮಕ್ಕಳು ಮತ್ತು ಮಹಿಳೆಯರ ಮೇಲೆ ನಡೆಯುವ ಹಿಂಸೆಯ ವಿರುದ್ಧದ ಅಭಿಯಾನ' ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಹೆಣ್ಣೊಂದು ತನ್ನ ಶಕ್ತಿ ಹಾಗೂ ತನ್ನಲ್ಲಿರುವ ಮಾನಸಿಕ ಸ್ಥೈರ್ಯದಲ್ಲಿ ಕುಗ್ಗಿದಾಗ ದೌರ್ಜನ್ಯಕ್ಕೆ ಒಳಗಾಗುತ್ತಾಳೆ. ಈ ಕುರಿತು ಗಂಭೀರವಾಗಿ ಚರ್ಚಿಸಿ ಹೆಣ್ಣು ಮಕ್ಕಳ ಮನೋಬಲವನ್ನು ಹೆಚ್ಚಿಸುವ ಕಾರ್ಯ ಮಾಡಬೇಕು. ಮನೆಯಲ್ಲಿಯೇ ಆಗುವ ದೌರ್ಜನ್ಯಕ್ಕೂ ಸಮಾಜದಲ್ಲಾಗುವ ದೌರ್ಜನ್ಯಕ್ಕೂ ವ್ಯತ್ಯಾಸವಿದೆ. ಗಂಡಸರ ದೌರ್ಜನ್ಯ ಅದು ಕುಟುಂಬದೊಳಗಿನ ಕಲಹ. ಅದನ್ನು ಸರಿಪಡಿಸಲು ಸಾಧ್ಯ. ಸಮಾಜದಲ್ಲಾಗುವ ದೌರ್ಜನ್ಯಗಳನ್ನು ತೀವ್ರವಾಗಿ ಪ್ರತಿಭಟಿಸಿ ತಡೆಗಟ್ಟಬೇಕು ಎಂದು ಹೇಳಿದರು.

`ದೇವದಾಸಿ ಪದ್ಧತಿ ಹೊರ ಜಿಲ್ಲೆಗಳಲ್ಲಿ ಜೀವಂತವಿದ್ದರೂ ಹಂತ ಹಂತವಾಗಿ ಕಡಿಮೆಯಾಗುತ್ತಿವೆ. ಆದರೆ ವರದಕ್ಷಿಣೆ ಪಿಡುಗು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಕಾನೂನುಗಳನ್ನು ಜಾರಿಗೆ ತರುವ ಮೂಲಕ ಸರ್ಕಾರ ಅದನ್ನು ನಿವಾರಿಸುವ ಪ್ರಯತ್ನ ಮಾಡುತ್ತಿದೆ. ಹೆಣ್ಣು ಭ್ರೂಣ ಹತ್ಯೆಯನ್ನು ಸಂಪೂರ್ಣವಾಗಿ ತಡೆಗಟ್ಟುವ ಪ್ರಯತ್ನವನ್ನು ಎಲ್ಲರೂ ಮಾಡಬೇಕು' ಎಂದು ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ವೆರೋನಿಕಾ ಕರ್ನೇಲಿಯೊ  ಹೇಳಿದರು.

ಪೆರ್ನಾಲು ಸಮಗ್ರ ಗ್ರಾಮೀಣ ಆಶ್ರಮದ ಅಧ್ಯಕ್ಷೆ ಶಶಿಕಲಾ ಕೊರಗ ಸಚ್ಚೇರಿಪೇಟೆ ಅಧ್ಯಕ್ಷತೆ ವಹಿಸಿದ್ದರು. ತಾಲ್ಲೂಕು ಕೊರಗ ಸಮಿತಿ ಅಧ್ಯಕ್ಷ ರಾಜು ಕೊರಗ ಹಾಗೂ ಕೊರಗಾಭಿವದ್ಧಿ ಸಂಘಗಳ ಒಕ್ಕೂಟದ ಮಾಜಿ ಅಧ್ಯಕ್ಷೆ ಗೌರಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.