ADVERTISEMENT

ಹೆಲ್ಮೆಟ್‌: ಸವಾರರ ಉತ್ಸಾಹ, ಹಿಂಬದಿ ನಿರುತ್ಸಾಹ!

ಉಡುಪಿ: ಕಡ್ಡಾಯ ಆದೇಶ ಪಾಲನೆಗೆ ಹರಸಾಹಸ

ಎಂ.ನವೀನ್ ಕುಮಾರ್
Published 21 ಜನವರಿ 2016, 5:15 IST
Last Updated 21 ಜನವರಿ 2016, 5:15 IST
ಕೆಲವು ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್‌ ಧರಿಸಿದ್ದ ಇನ್ನೂ ಕೆಲವರು ಹಾಕದೆ ವಾಹನ ಚಾಲನೆ ಮಾಡಿದ ದೃಶ್ಯ ಉಡುಪಿ ನಗರದಲ್ಲಿ ಬುಧವಾರ ಕಂಡುಬಂತು. ಪ್ರಜಾವಾಣಿ ಚಿತ್ರ
ಕೆಲವು ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್‌ ಧರಿಸಿದ್ದ ಇನ್ನೂ ಕೆಲವರು ಹಾಕದೆ ವಾಹನ ಚಾಲನೆ ಮಾಡಿದ ದೃಶ್ಯ ಉಡುಪಿ ನಗರದಲ್ಲಿ ಬುಧವಾರ ಕಂಡುಬಂತು. ಪ್ರಜಾವಾಣಿ ಚಿತ್ರ   

ಉಡುಪಿ: ದ್ವಿಚಕ್ರ ವಾಹನ ಸವಾರ ಹಾಗೂ ಹಿಂಬದಿ ಸವಾರ ಇಬ್ಬರಿಗೂ ಹೆಲ್ಮೆಟ್‌ ಕಡ್ಡಾಯ ಮಾಡಲಾಗಿದ್ದು , ಉಡುಪಿ ನಗರದಲ್ಲಿ ಹಿಂಬದಿ ಸವಾರರಿಂದ ಇದಕ್ಕೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಆದರೆ ವಾಹನ ಸವಾರರು ಮಾತ್ರ ಹೆಚ್ಚಿನ ಸಂಖ್ಯೆಯಲ್ಲಿ ಹೆಲ್ಮೆಟ್‌ ಧರಿಸುತ್ತಿದ್ದಾರೆ.

ರಸ್ತೆ ಅಪಘಾತಗಳಲ್ಲಿ ಸವಾರರು ಹಾಗೂ ಹಿಂಬದಿ ಸವಾರರು ಹೆಚ್ಚಿನ ಸಂಖ್ಯೆಯಲ್ಲಿ ಸಾವನ್ನಪ್ಪುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿದ್ದ ಸುಪ್ರೀಂ ಕೋರ್ಟ್ ಇಬ್ಬರಿಗೂ ಹೆಲ್ಮೆಟ್‌ ಕಡ್ಡಾಯ ಮಾಡುವಂತೆ ನಿರ್ದೇಶನ ನೀಡಿತ್ತು. ಜನವರಿ 1ರಿಂದಲೇ ಹೆಲ್ಮೆಟ್‌ ಕಡ್ಡಾಯ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು. ಆದರೆ ಆದೇಶದ ಪ್ರತಿ ಜಿಲ್ಲೆಗಳಿಗೆ ತಡವಾಗಿ ತಲುಪಿದ್ದರಿಂದ ಒಂದು ವಾರದ ಹಿಂದೆ ಪತ್ರಿಕಾಗೋಷ್ಠಿ ನಡೆಸಿದ್ದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೆ. ಅಣ್ಣಾಮಲೈ ಜನವರಿ 20ರಿಂದ ಕಡ್ಡಾಯವಾಗಿ ಹೆಲ್ಮೆಟ್‌ ಧರಿಸಬೇಕು. ನಿಯಮ ಪಾಲಿಸದವರಿಗೆ ದಂಡ ವಿಧಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದರು. ಮಕ್ಕಳಿಗೂ ಹೆಲ್ಮೆಟ್‌ ಹಾಕಬೇಕು ಎಂದು ಸ್ಪಷ್ಟಪಡಿಸಿದ್ದರು.

ನಿಯಮ ಜಾರಿಯ ಬಗ್ಗೆ ತಿಳಿದುಕೊಳ್ಳಲು ‘ಪ್ರಜಾವಾಣಿ’ ನಗರದಲ್ಲಿ ಬುಧವಾರ ಒಂದು ಸುತ್ತುಹಾಕಿ ವಾಸ್ತವಾಂಶ ಅರಿಯಲು ಪ್ರಯತ್ನಿಸಿದಾಗ ಹೆಚ್ಚಿನ ಸಂಖ್ಯೆಯಲ್ಲಿ ವಾಹನ ಸವಾರರು ಹೆಲ್ಮೆಟ್‌ ಧರಿಸಿದ್ದು ಕಂಡುಬಂತು. ಹಿಂಬದಿ ಸವಾರರು ಹೆಲ್ಮೆಟ್‌ ಧರಿಸಿದ್ದ ದೃಶ್ಯ ತೀರ ಅಪರೂಪವಾಗಿತ್ತು.

ಹೆಲ್ಮೆಟ್‌ಗಳ ಕೊರತೆ ಇರುವುದರಿಂದ ಎಲ್ಲ ವಾಹನ ಸವಾರರಿಗೆ ಖರೀದಿಸಲು ಸಾಧ್ಯವಾಗುತ್ತಿಲ್ಲ. ಅಲ್ಲದೆ ಬೆಲೆಯೂ ಏರಿಕೆಯಾಗಿರುವುದರಿಂದ ಖರೀದಿಸಲು ಹಿಂದೇಟು ಹಾಕುವ ಪರಿಸ್ಥಿತಿ ಇದೆ. ಮಕ್ಕಳು ಧರಿಸುವಂತಹ ಹೆಲ್ಮೆಟ್‌ಗಳ ಕೊರತೆ ಇರುವುದರಿಂದ ಖರೀದಿಸಬೇಕೆಂದರೂ ಸಿಗುತ್ತಿಲ್ಲ. ಈ ಎಲ್ಲ ಕಾರಣಗಳಿಂದ ಪೊಲೀಸರು ಸಹ ಈಗಲೇ ತೀರ ಕಟ್ಟುನಿಟ್ಟಾಗಿ ನಿಯಮ ಜಾರಿಗೊಳಿಸಲು ಮುಂದಾಗುತ್ತಿಲ್ಲ.

ಇನ್ನೂ ಕೆಲವು ದಿನಗಳ ಕಾಲ ಅವಕಾಶ ನೀಡಿ, ವಾಹನ ಸವಾರರು ಹಾಗೂ ಹಿಂಬದಿ ಸವಾರರಲ್ಲಿ ಜಾಗೃತಿ ಮೂಡಿಸಿ ಫೆಬ್ರುವರಿ 1ರಿಂದ ನಿಯಮವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ನಿರ್ಧರಿಸಿದ್ದಾರೆ. ಹೆಲ್ಮೆಟ್‌ ಇಲ್ಲದ ಸವಾರ ಹಾಗೂ ಹಿಂಬದಿ ಸವಾರನಿಗೆ ತಲಾ ₹100 ದಂಡ ವಿಧಿಸಲಾಗುತ್ತದೆ ಎಂದು ತಿಳಿದು ಬಂದಿದೆ.

ಎಂದಿನಂತೆ ಬುಧವಾರವೂ ನಗರದ ಪ್ರಮುಖ ಜಂಕ್ಷನ್‌ಗಳಲ್ಲಿ ವಾಹನಗಳ ದಾಖಲೆಗಳನ್ನು ಪರಿಶೀಲಿಸಿ ದಂಡ ವಿಧಿಸುತ್ತಿದ್ದ ಸಂಚಾರ ಠಾಣೆ ಪೊಲೀಸರು ಹೆಲ್ಮೆಟ್‌ ನಿಯಮದ ಬಗ್ಗೆಯೂ ತಿಳಿವಳಿಕೆ ನೀಡುತ್ತಿದ್ದದ್ದು ಕಂಡುಬಂತು.

ಕಾಲೇಜು ವಿದ್ಯಾರ್ಥಿಗಳಿಗೆ ಹೆಲ್ಮೆಟ್‌ ಕಡ್ಡಾಯ ಮಾಡುವಂತೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಈ ಹಿಂದೆ ಕಾಲೇಜುಗಳ ಮುಖ್ಯಸ್ಥರಿಗೆ ಪತ್ರ ಬರೆದಿದ್ದರು. ಕಾಲೇಜು ಮುಖ್ಯಸ್ಥರಿಂದ ಇದಕ್ಕೆ ಉತ್ತಮವಾದ ಪ್ರತಿಕ್ರಿಯೆ ವ್ಯಕ್ತವಾಗಿತ್ತು.

ಕೆಲವು ಕಾಲೇಜುಗಳ ವಿದ್ಯಾರ್ಥಿಗಳೂ ಈ ಬಗ್ಗೆ ಜಾಗೃತಿಯನ್ನೂ ಮೂಡಿಸಿದ್ದರು. ಆದರೂ ಹೇಳಿಕೊಳ್ಳುವಂತಹ ಯಶಸ್ಸು ಸಿಕ್ಕಿರಲಿಲ್ಲ. ಈಗ ಸರ್ಕಾರವೇ ಆದೇಶ ಹೊರಡಿಸಿರುವುದರಿಂದ ಹೆಲ್ಮೆಟ್‌ ಧರಿಸುವುದು ಅನಿವಾರ್ಯವಾಗಲಿದೆ. ಇಲ್ಲದಿದ್ದರೆ ದಂಡ ಕಟ್ಟಬೇಕಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.