ADVERTISEMENT

‘ಅನುಮತಿ ಇಲ್ಲದ ಕರಪತ್ರ ನಿಷೇಧ’

​ಪ್ರಜಾವಾಣಿ ವಾರ್ತೆ
Published 12 ಮಾರ್ಚ್ 2014, 6:30 IST
Last Updated 12 ಮಾರ್ಚ್ 2014, 6:30 IST

ಉಡುಪಿ: ಚುನಾವಣಾಧಿಕಾರಿಗಳ ಪೂರ್ವಾನುಮತಿ ಇಲ್ಲದೆ ಯಾವುದೇ ಕರಪತ್ರ ಪೋಸ್ಟರ್ ಇತ್ಯಾದಿಗಳನ್ನು ಪ್ರಕಟಿಸಬಾರದು ಎಂದು ಜಿಲ್ಲಾಧಿಕಾರಿ ಡಾ.ಮುದ್ದುಮೋಹನ್‌ ಹೇಳಿದರು.

ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಮಂಗಳವಾರ ನಡೆದ ಜಿಲ್ಲೆಯ ಎಲ್ಲಾ ಪ್ರಿಂಟರ್ಸ್‌ ಹಾಗೂ ಪ್ರಕಾಶಕರ ಸಭೆಯಲ್ಲಿ ಅವರು ಮಾತನಾಡಿದರು.

ಭಾರತ ಚುನಾವಣಾ ಆಯೋಗವು ಲೋಕಸಭೆಗೆ ಸಾರ್ವತ್ರಿಕ ಚುನಾವಣೆಯನ್ನು ಘೋಷಿಸಿರುವ ಹಿನ್ನಲೆಯಲ್ಲಿ ಕರಪತ್ರ, ಪೋಸ್ಟರ್ ಇತ್ಯಾದಿಗಳ ಮುದ್ರಣಕ್ಕೆ ಪೂರ್ವಾನುಮತಿ ಅಗತ್ಯ. ಪ್ರತಿಯೊಂದು ಕರಪತ್ರಗಳ ಕೆಳಭಾಗದಲ್ಲಿ ಮುದ್ರಕರ ವಿವರ, ಪ್ರಮಾಣ ಹಾಗೂ ದಿನಾಂಕವನ್ನು ತಪ್ಪದೆ ನಮೂದಿಸಲು ಅವರು ಸೂಚಿಸಿದರು.

ಮುದ್ರಿಸಿ ಪ್ರಕಟಿಸಿದ ಪ್ರತಿಯೊಂದು ಕರಪತ್ರ, ವಗೈರೆಯ ವಿವರವನ್ನು ಅನುಬಂಧ-ಬಿ ಯಲ್ಲಿ ಘೋಷಣಾ ಪತ್ರದೊಂದಿಗೆ ಪ್ರಕಟಿಸಿರುವ ಕರಪತ್ರ ವಗೈರೆಯ ೪ ಪ್ರತಿಗಳೊಂದಿಗೆ ಜಿಲ್ಲಾ ಚುನಾವಣಾ­ಧಿಕಾರಿ ಉಡುಪಿ ಅವರಿಗೆ ಮದ್ರಿಸಲ್ಪಟ್ಟ ೩ ದಿನಗ­ಳೊಳಗೆ ಸಲ್ಲಿಸಬೇಕು. ಈ ಸೂಚನೆಯನ್ನು ಪಾಲಿಸದೆ ಇದ್ದಲ್ಲಿ ಅಂತಹ ತಪ್ಪಿತಸ್ಥ ಪ್ರಿಂಟರ್–ಪ್ರಕಾಶಕರ ವಿರುದ್ಧ ಪ್ರಜಾಪ್ರತಿನಿಧಿ ಕಾಯ್ದೆ ೧೯೫೧ ರ ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಖರ್ಚು ವೆಚ್ಚ ನಿಗಾಕ್ಕೆ ಆದ್ಯತೆ ನೀಡಿ: ಪೊನ್ನುರಾಜ್
ಚುನಾವಣೆ ವೇಳೆ ಅಭ್ಯರ್ಥಿಗಳ ಖರ್ಚು ವೆಚ್ಚ ಸಂಬಂಧ ಹೆಚ್ಚಿನ ನಿಗಾವಹಿಸಬೇಕು ಹಾಗೂ ಇದಕ್ಕಾಗಿ ನೇಮಿಸಿರುವ ತಂಡಗಳು ನಿಗಾ ವಹಿಸಬೇಕು ಎಂದು ಚುನಾವಣಾ ಆಯೋಗದ ಖರ್ಚು ವೆಚ್ಚ ವಿಭಾಗದ ವಿಶೇಷಾಧಿಕಾರಿ ಪೊನ್ನುರಾಜ್ ಹೇಳಿದರು.

ಜಿಲ್ಲೆಯ ಜಿಲ್ಲಾ ಚುನಾವಣಾಧಿಕಾರಿಗಳು ಹಾಗೂ ಸ್ವೀಪ್ ಅಧ್ಯಕ್ಷರಾದ ಸಿಇಒ ಅವರೊಂದಿಗೆ ನಡೆಸಿದ ವಿಡಿಯೋ ಕಾನ್ಪರೆನ್ಸ್‌ನಲ್ಲಿ ನಿರ್ದೇಶನ ನೀಡಿದರು.

ಖರ್ಚು ವೆಚ್ಚ ವಿವರವನ್ನು ಪ್ರತಿದಿನ ನಿರ್ವಹಿಸಿ ನಿಗದಿತ ನಮೂನೆಯಲ್ಲಿ ಚುನಾವಣಾ ಆಯೋಗಕ್ಕೆ ಸಲ್ಲಿಸಬೇಕು. ಶ್ಯಾಡೋ ರಿಜಿಸ್ಟರ್ ನಿರ್ವಹಿಸುವ ರೀತಿಯನ್ನು ವಿವರಿಸಿದ ಅವರು, ಖರ್ಚು ವೆಚ್ಚ ನಿಗಾದ ಅಗತ್ಯವನ್ನು ಅಧಿಕಾರಿಗಳು ಮನಗಂಡು ಉತ್ತಮವಾಗಿ ಕಾರ್ಯನಿರ್ವಹಿಸಬೇಕು ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.