ADVERTISEMENT

‘ಪ್ರಜೆಗಳು ಹಕ್ಕು ಚಲಾವಣೆ ಮರೆಯಬಾರದು’

ಮೂಡಿಗೆರೆ: ಮತದಾನ ಜಾಗೃತಿಗಾಗಿ ಬೈಕ್‌ ಜಾಥಾ

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2014, 5:23 IST
Last Updated 12 ಏಪ್ರಿಲ್ 2014, 5:23 IST

ಮೂಡಿಗೆರೆ: ದೇಶದ ಪ್ರಜೆಗಳಿಗೆ ಮತದಾನ ಬಹುಮುಖ್ಯ ಹಕ್ಕಾಗಿದ್ದು, ಯಾರೊಬ್ಬ ಪ್ರಜೆಯೂ ಹಕ್ಕು ಚಲಾವಣೆಯನ್ನು ಮರೆಯದೇ ಮತದಾನದಲ್ಲಿ ಪಾಲ್ಗೊಂಡು ದೇಶದ ಆಡಳಿತಕ್ಕೆ ಕೈಜೋಡಿಸಬೇಕು ಎಂದು ತಹಶೀಲ್ದಾರ್‌ ಶಾರದಾಂಬಾ ತಿಳಿಸಿದರು.

ಜಿಲ್ಲಾ ಸ್ವೀಪ್‌ ಸಮಿತಿ ವತಿಯಿಂದ ಶುಕ್ರವಾರ ಪಟ್ಟಣದ ಲಯನ್ಸ್‌ ವೃತ್ತದಲ್ಲಿ ಏರ್ಪಡಿಸಿದ್ದ ಮತದಾನದ ಜಾಗೃತಿಗಾಗಿ ಬೈಕ್‌ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದರು. ದೇಶದ ಆಡಳಿತದಲ್ಲಿ ಪ್ರತಿಯೊಬ್ಬ ಪ್ರಜೆಯೂ ಪಾಲ್ಗೊಳ್ಳಬೇಕು ಎಂಬ ನಿಟ್ಟಿನಲ್ಲಿ ಭಾರತ ಸಂವಿಧಾನವು ಎಲ್ಲಾ ಪ್ರಜೆಗಳಿಗೆ ಮತದಾನದ ಹಕ್ಕನ್ನು ನೀಡಿದ್ದು, ಇಂತಹ ಪವಿತ್ರ ಹಕ್ಕನ್ನು ಯಾರೂ ಸಹ ಮರೆಯಬಾರದು.
ಮತದಾನದ ಮೂಲಕ ದೇಶದ ಆಡಳಿತವನ್ನು ರೂಪಿಸಲು ಎಲ್ಲಾ ಹಕ್ಕುದಾರರು ಮುಂದಾಗಬೇಕು, ಈ ಹಕ್ಕನ್ನು ಯಾರೂ ಮರೆಯದೇ ಇದೇ 17 ರಂದು ನಡೆಯಲಿರುವ ಸಾರ್ವತ್ರಿಕ ಚುನಾವಣೆಯಲ್ಲಿ ಭಾಗವಹಿಸಿ ಶೇ 100 ಮತದಾನವಾಗಲು ಮುಂದಾಗಬೇಕು ಎಂದರು.

ಮತದಾನದ ದಿನವನ್ನು ಸಾರ್ವತ್ರಿಕ ರಜೆ ದಿನವನ್ನಾಗಿ ಸರ್ಕಾರದಿಂದ ಘೋಷಿಸಲಾಗಿದೆ, ಆದ್ದರಿಂದ ಯಾರೂ ಸಹ ಚುನಾವಣೆಗೆ ರಜೆಯಾಗುತ್ತದೆ ಎಂಬ ಭಾವನೆ ತಾಳದೇ, ಎಲ್ಲರೂ ಮತಗಟ್ಟೆಗೆ ತೆರಳಿ ಹಕ್ಕನ್ನು ಚಲಾಯಿಸಬೇಕು ಎಂದರು. ಮತದಾನದ ಹಕ್ಕನ್ನು ದೇಶದ ಎಲ್ಲಾ ಪ್ರಜೆಗಳೂ ಅನುಭವಿಸುವಂತಾಗಲು ದೇಶದಲ್ಲಿನ ಶಿಕ್ಷಿತರು ಮತ್ತು ಸಂಘ ಸಂಸ್ಥೆಗಳ ನೆರವು ಅಗತ್ಯವಾಗಿದ್ದು, ಮತದಾನದ ಮಹತ್ವವನ್ನು ತಾವೂ ಅರಿಯುವ ಮೂಲಕ, ತಮ್ಮ ಸುತ್ತಮುತ್ತಲ ಹಕ್ಕುದಾರರಿಗೂ ತಿಳಿಸಿ, ಮತದಾನದಲ್ಲಿ ಪಾಲ್ಗೊಳ್ಳುವಂತೆ ಮಾಡಬೇಕಿದೆ.

ಮಲೆನಾಡಿನಲ್ಲಿ ಕಾಫಿ ಎಸ್ಟೇಟ್‌ಗಳು ಹೆಚ್ಚಿನ ಸಂಖ್ಯೆಯಲ್ಲಿರುವುದರಿಂದ ಎಸ್ಟೇಟ್‌ ಮಾಲೀಕರು ತಮ್ಮಲ್ಲಿ­ರುವ ಕಾರ್ಮಿಕರುಗಳಲ್ಲಿ ಮತದಾನದ ಮಹತ್ವ ಸಾರಿ ಮತದಾನದಲ್ಲಿ ಪಾಲ್ಗೊಳ್ಳುವಂತೆ ಮಾಡಬೇಕು ಎಂದು ಮನವಿ ಮಾಡಿದರು. ಕಾರ್ಯಕ್ರಮದ ಅಂಗವಾಗಿ ಪಟ್ಟಣದ ವಿವಿಧ ರಸ್ತೆಗಳಲ್ಲಿ ಸರ್ಕಾರಿ ನೌಕರರು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಬೈಕ್‌ ಜಾಥಾದ ಮೂಲಕ ಮತದಾನದ ಮಹತ್ವವನ್ನು ಸಾರುವ ಘೋಷಣೆಗಳನ್ನು ಕೂಗಿ ಸಾಗಿದರು. ಸಂತೆಯಲ್ಲಿ ಮತದಾನ ಮಾಡುವಂತೆ ಪ್ರೇರೇಪಿಸುವ ಕರಪತ್ರಗಳನ್ನು ಹಂಚಲಾಯಿತು. ಜಾಥಾದಲ್ಲಿ  ತಾಲ್ಲೂಕು ಸ್ವೀಪ್‌ ಸಮಿತಿ ಅಧ್ಯಕ್ಷ ರಾಜಪ್ಪ, ಅಧಿಕಾರಿಗಳಾದ ನೀಲಕಂಠಪ್ಪ, ಚಂದ್ರಮೌಳಿ ಮುಂತಾದವರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT