ADVERTISEMENT

1ಲಕ್ಷ ಲೀ. ಹಾಲು ಕೊರತೆ

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2011, 5:35 IST
Last Updated 13 ಅಕ್ಟೋಬರ್ 2011, 5:35 IST

ಕಾರ್ಕಳ: `ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಬೇಡಿಕೆಗೆ ತಕ್ಕಂತೆ ಹಾಲು ಉತ್ಪಾದನೆಯಾಗುತ್ತಿಲ್ಲ. ದಿನಕ್ಕೆ ಸುಮಾರು ಒಂದು ಲಕ್ಷ ಲೀಟರ್ ಹಾಲಿನ ಕೊರತೆ ಇದೆ~ ಎಂದು ನಬಾರ್ಡ್‌ನ ದ.ಕ, ಉಡುಪಿ ಜಿಲ್ಲೆಯ ಅಭಿವೃದ್ಧಿ ವ್ಯವಸ್ಥಾಪಕ ಪ್ರಸಾದ ರಾವ್ ತಿಳಿಸಿದರು.

ಭಾರತೀಯ ಕಿಸಾನ್ ಸಂಘದ ತಾಲ್ಲೂಕು ಸಮಿತಿ ಇಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಹೈನುಗಾರಿಕಾ ಮಾಹಿತಿ ಶಿಬಿರದಲ್ಲಿ ಅವರು ಮಾತನಾಡಿದರು.

`ಕೊರತೆ ನೀಗಿಸಿ ಇನ್ನು ಮೂರು ವರ್ಷದೊಳಗೆ ಕರಾವಳಿ ಜಿಲ್ಲೆಗಳಲ್ಲಿ ಬೇಡಿಕೆಗಿಂತ ಹೆಚ್ಚಿನ ಹಾಲು ಉತ್ಪಾದಿಸುವ ಗುರಿಯನ್ನು ಇಟ್ಟು ಯೋಜನೆ ರೂಪಿಸಲಾಗುವುದು.  ಹಾಲು ಉತ್ಪಾದಕರು 2ರಿಂದ 10 ದನಗಳೊಂದಿಗೆ ಮಿನಿ ಡೇರಿ ಆರಂಭಿಸಲು ಬ್ಯಾಂಕಿನಿಂದ ಸಾಲ ಪಡೆಯಬಹುದು. ನಬಾರ್ಡ್‌ನಿಂದ ಮಿನಿ ಡೇರಿಗೆ ಶೇ 25  ಸಹಾಯಧನ ನೀಡಲಾಗುವುದು~ ಎಂದರು.

`ಡೇರಿ ಯೋಜನೆಯ ಶೇ 10ರಷ್ಟನ್ನು ಹೈನುಗಾರರು ಭರಿಸಬೇಕು. ಅದಕ್ಕೆ ಬೇಕಾದ ಯೋಜನಾ ವರದಿ ಸಿದ್ಧಗೊಳಿಸಿ ಬ್ಯಾಂಕಿನಿಂದ ಸಾಲ ಪಡೆದುಕೊಳ್ಳುವ ನಾಲ್ಕು ಮಂದಿಯ ಗುಂಪು ರಚಿಸಿ ಅವುಗಳ ಮೂಲಕ ಸಾಲ ಪಡೆಯಬಹುದು. ಪ್ರತಿಗ್ರಾಮದ್ಲ್ಲಲೂ ರೈತಕೂಟ ರಚಿಸಿಕೊಂಡು ಅದರ ಮೂಲಕ ಸಾಲ ಪಡೆದು ಡೈರಿ ಆರಂಭಿಸಬಹುದು. ಇದಕ್ಕೂ ನಬಾರ್ಡ್‌ನಿಂದ ಶೇ.25 ಸಹಾಯಧನ ಪಡೆದುಕೊಳ್ಳಬಹುದು~ ಎಂದರು.

ಸಂಘದ ಅಧ್ಯಕ್ಷ ನವೀನಚಂದ್ರ ಜೈನ್ ಮಾತನಾಡಿ, `ಆಸಕ್ತ ಹೈನುಗಾರರು ಸಂಘದ ಕಾರ್ಯಾಲಯವನ್ನು ಭೇಟಿ ಮಾಡಿ ಮಾಹಿತಿ ಪಡಕೊಳ್ಳಬಹುದು~ ಎಂದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸತ್ಯನಾರಾಯಣ ಉಡುಪ, ವಿಶ್ವನಾಥ ಶೆಟ್ಟಿ, ಶ್ರೀನಿವಾಸ ಭಟ್, ಗೋವಿಂದ ರಾಜ್ ಕಡ್ತಲ, ಪಾಂಡುರಂಗ ನಾಯಕ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.