ADVERTISEMENT

12 ಸಾವಿರ ಫಲಾನುಭವಿಗಳಿಗೆ ಸವಲತ್ತು: ಸಚಿವ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2013, 9:36 IST
Last Updated 19 ಸೆಪ್ಟೆಂಬರ್ 2013, 9:36 IST

ಉಡುಪಿ: ‘ಜನರು ಕಚೇರಿಗಳಿಗೆ ಅಲೆಯುವುದನ್ನು ತಪ್ಪಿಸಿ, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಜನರ ನಡುವೆ ಸೇತುವೆಯಾಗಿ ಕೆಲಸ ನಿರ್ವಹಿಸಲು ಗ್ರಾಮ ಸಭೆ, ಜನಸ್ಪಂದನ ಸಭೆಗಳಿಗೆ ಹೆಚ್ಚಿನ ಒತ್ತು ನೀಡಲಾಗುವುದು’ ಎಂದು ಸಚಿವ ವಿನಯ್‌ಕುಮಾರ್‌ ಸೊರಕೆ ಹೇಳಿದರು.

ಉಡುಪಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಸಂಯುಕ್ತವಾಗಿ ನಗರದ ಪುರಭವನದಲ್ಲಿ ಬುಧವಾರ ಏರ್ಪಡಿಸಿದ್ದ ಸರ್ಕಾರದ ವಿವಿಧ ಸವಲತ್ತುಗಳ ವಿತರಣಾ ಸಮಾರಂಭ­ವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಕೇವಲ ಕಚೇರಿಗೆ ಸೀಮಿತವಾಗದೆ ಜನರ ಹತ್ತಿರ ತೆರಳಿ ಸಮಸ್ಯೆಗಳಿಗೆ ಸ್ಪಂದಿಸಬೇಕು ಹಾಗೂ ಯೋಜನೆಗಳ ಮಾಹಿತಿ ನೀಡಬೇಕು. ಜಿಲ್ಲೆಯಲ್ಲಿ ವಿವಿಧ ಯೋಜನೆಗಳ ಮೂಲಕ ಸುಮಾರು 12ಸಾವಿರ ಫಲಾನುಭವಿಗಳಿಗೆ ಸವಲತ್ತು ನೀಡಲಾಗಿದೆ ಎಂದರು.

ಸರ್ಕಾರದ ಅನ್ನ ಭಾಗ್ಯ ಯೋಜನೆಯಿಂದ ಜಿಲ್ಲೆಯಲ್ಲಿ ಒಂದು ಲಕ್ಷ ಹನ್ನೆರಡು ಸಾವಿರ ಕುಟುಂಬಗಳಿಗೆ ಅಕ್ಕಿ ವಿತರಿಸಲಾಗುತ್ತಿದೆ. ನಿವೇಶನ ರಹಿತರಿಗೆ ತ್ವರಿತವಾಗಿ ಮನೆ ನಿವೇಶನ ನೀಡಲು ಕ್ರಮ ಕೈಗೊಳ್ಳಲಾಗುವುದು. ವಾರಾಹಿ ಯೋಜನೆ ಶೀಘ್ರವಾಗಿ ಪೂರ್ಣಗೊಳಿಸಲು ಅಧಿಕಾರಿಗಳ ಮೂರು ಸಭೆ ನಡೆಸಲಾಗಿದೆ. ಬ್ರಹ್ಮಾವರ ಸಕ್ಕರೆ ಕಾರ್ಖಾನೆ ರೈತರ, ಕಾರ್ಮಿಕರ ಮತ್ತು ಸಹಕಾರಿ ಸಂಸ್ಥೆಗಳ ಬಾಕಿ ಪಾವತಿಗೆ 12ಕೋಟಿ ಬಿಡುಗಡೆ ಮಾಡಲಾಗಿದೆ. ಸಕ್ಕರೆ ಕಾರ್ಖಾನೆ ಪುನಶ್ಚೇತನಕ್ಕೆ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗಿದೆ ಎಂದು ಅವರು ಹೇಳಿದರು.

ಉಡುಪಿ, ದಕ್ಷಿಣ ಕನ್ನಡ, ಉತ್ತರಕನ್ನಡ, ಶಿವಮೊಗ್ಗ ಹಾಗೂ ಕೊಡಗು ಜಿಲ್ಲೆಗಳಿಗೆ ಭೂ ಪರಿವರ್ತನೆ ನಮೂನೆ 9 ರಿಂದ 11ರ ಸಮಸ್ಯೆಯಿಂದ ವಿನಾಯಿತಿ ನೀಡಲು ಸಂಪುಟ ಸಭೆಯಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.
‘ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆಗಳ ಮಾಹಿತಿ ನೀಡುವ ಫಲಕಗಳನ್ನು ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ಅಳವಡಿಸಬೇಕು. ಪಿಡಿಒ ಮತ್ತು ಕಾರ್ಯದರ್ಶಿ ಇಬ್ಬರೂ ಒಂದೇ ಗ್ರಾಮ ಪಂಚಾಯಿತಿಯಲ್ಲಿ ಕೆಲಸ ನಿರ್ವಹಿಸದೇ ಹುದ್ದೆ ಖಾಲಿ ಇರುವ ಗ್ರಾಮ ಪಂಚಾಯಿತಿಗಳಲ್ಲಿ ಕರ್ತವ್ಯ ನಿರ್ವಹಿಸಬೇಕು’ ಎಂದು ಸಂಸದ ಕೆ.ಜಯಪ್ರಕಾಶ್‌ ಹೆಗ್ಡೆ ಸಲಹೆ ನೀಡಿದರು.

‘ನರೇಗಾ’ ಯೋಜನೆ ಅನುಷ್ಠಾನದಲ್ಲಿ ಉಡುಪಿ ಜಿಲ್ಲೆ ಹಿಂದಿದ್ದು, ಜನರು ಆ ಯೋಜನೆ ಮೂಲಕ ಕೈಗೊಳ್ಳಬೇಕಾದ ಕೆಲಸಗಳ ಬಗ್ಗೆ ಅಧಿಕಾರಿಗಳು ಸರಿಯಾದ ಮಾಹಿತಿ ನೀಡಬೇಕು. ಆಧಾರ್‌ ಮತ್ತು ಎನ್‌ಪಿಆರ್‌ ಕಾರ್ಡ್‌ ಗೊಂದಲ ಬೇಡ. ಎನ್‌ಪಿಆರ್‌ ಕಾರ್ಡ್‌ ಪಡೆದವರು ಆಧಾರ್‌ ಪಡೆಯುವ ಅವಶ್ಯಕತೆಯಿಲ್ಲ. ಆಧಾರ್‌ ಕಾರ್ಡ್‌ ಬಯೋಮೆಟ್ರಕ್‌ ನೀಡಲು ಉಡುಪಿ ಕೇಂದ್ರಕ್ಕೆ ನಾಲ್ಕು ಕಂಪ್ಯೂಟರ್‌ ನೀಡಲಾಗಿದೆ. ಕುಂದಾಪುರ ಮತ್ತು ಕಾರ್ಕಳದಲ್ಲಿ ಹೆಚ್ಚಿನ ಕೇಂದ್ರ ತೆರೆಯಲಾಗುವುದು ಎಂದು ಅವರು ಭರವಸೆ ನೀಡಿದರು.

ಕಂದಾಯ ಇಲಾಖೆ, ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ ರಾಜ್‌, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕೃಷಿ, ತೋಟಗಾರಿಕೆ, ಶಿಕ್ಷಣ ಇಲಾಖೆ (ಅಕ್ಷರದಾಸೋಹ), ಸಮಾಜ ಕಲ್ಯಾಣ, ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆ, ಹಿಂದುಳಿದ ಮತ್ತು ಅಲ್ಪ ಸಂಖ್ಯಾತರ ಇಲಾಖೆ ಹಾಗೂ ಅಭಿವೃದ್ಧಿ ನಿಗಮ, ಜಲಾನಯನ ಅಭಿವೃದ್ಧಿ, ನಗರ ಸಭೆ, ಪಶುಸಂಗೋಪನೆ, ಮೀನುಗಾರಿಕಾ, ಕಾರ್ಮಿಕ ಮತ್ತು ಅರಣ್ಯ ಇಲಾಖೆ ಯೋಜನೆಗಳ 8,616 ಫಲಾನುಭವಿಗಳಿಗೆ 11,98,20,000 ರೂಪಾಯಿ ಮೌಲ್ಯದ ಸವಲತ್ತುಗಳನ್ನು  ವಿತರಿಸಲಾಯಿತು.

ಶಾಸಕ ಪ್ರಮೋದ್‌ ಮಧ್ವರಾಜ್‌ ಅಧ್ಯಕ್ಷತೆ ವಹಿಸಿದ್ದರು.ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಉಪೇಂದ್ರ ನಾಯಕ್‌, ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ಅರುಣ್‌ ಶೆಟ್ಟಿ ಪಾದೂರು, ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಎಸ್‌.ಎ.ಪ್ರಭಾಕರ ಶರ್ಮ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಗೌರಿ ವಿ ಪೂಜಾರಿ, ಉಪಾಧ್ಯಕ್ಷ ರಾಮ ಕುಲಾಲ್‌, ನಗರಸಭೆ ಅಧ್ಯಕ್ಷ ಯುವರಾಜ್‌, ಉಪಾಧ್ಯಕ್ಷೆ ಅಮೃತಾ ಕೃಷ್ಣಮೂರ್ತಿ, ಪೌರಾಯುಕ್ತ ಶ್ರೀಕಾಂತ ರಾವ್‌, ಹೆಚ್ಚುವರಿ ಜಿಲ್ಲಾಧಿಕಾರಿ ಕುಮಾರ್‌ ಮತ್ತಿತರರು ಉಪಸ್ಥಿತರಿದ್ದರು.

ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಮಂಜುನಾಥಯ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು. ತಹಶೀಲ್ದಾರ್‌ ಗುರುಪ್ರಸಾದ್‌ ಸ್ವಾಗತಿಸಿದರು. ಕುದಿ ವಸಂತ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.