ADVERTISEMENT

`25 ದೇವಸ್ಥಾನಗಳಲ್ಲಿ ಗೋಶಾಲೆ ತೆರೆಯಲು ಯೋಜನೆ'

ಮುಂಡಾಡಿ ದೇವಸ್ಥಾನ ಊರ್ಧ್ವಛಾವಣಿ ಕಾರ್ಯಕ್ಕೆ ಸಚಿವ ಪೂಜಾರಿ ಚಾಲನೆ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2012, 9:06 IST
Last Updated 3 ಡಿಸೆಂಬರ್ 2012, 9:06 IST

ಬ್ರಹ್ಮಾವರ: ರಾಜ್ಯದ ಪ್ರಮುಖ 25 ದೇವಸ್ಥಾನಗಳಲ್ಲಿ ಗೋಶಾಲೆ ತೆರೆಯಲು ಯೋಜನೆಯನ್ನು ರೂಪಿಸಲಾಗಿದ್ದು, ಅದಕ್ಕಾಗಿ ಪ್ರತಿಯೊಂದು ದೇವಸ್ಥಾನದ ವ್ಯಾಪ್ತಿಯಲ್ಲಿ 5ರಿಂದ10 ಎಕರೆ ಜಾಗ ಇದ್ದಲ್ಲಿ ಮುಜರಾಯಿ ಇಲಾಖೆ ತೆಗೆದುಕೊಂಡು ಆ ಸ್ಥಳದಲ್ಲಿ ಗೋಶಾಲೆ ನಿರ್ಮಿಸಲು ಉದ್ದೇಶಿಸಿದೆ ಎಂದು ರಾಜ್ಯ ಮುಜರಾಯಿ ಹಾಗೂ ಧಾರ್ಮಿಕ ದತ್ತಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಕೊಕ್ಕರ್ಣೆ ಸಮೀಪದ ಮುಂಡಾಡಿ ಬ್ರಹ್ಮಲಿಂಗೇಶ್ವರ ದೇವಸ್ಥಾನ ಹೊಸ ಕಟ್ಟೆಯಲ್ಲಿ ನೂತನವಾಗಿ ಆರಂಭಿಸಿರುವ ಮುಖ್ಯ ಮೂರು ಗುಡಿಗಳ ಮತ್ತು ತೀರ್ಥ ಮಂಟಪದ ಊರ್ಧ್ವಛಾವಣಿ ಕಾರ್ಯಕ್ಕೆ ಅವರು ಭಾನುವಾರ ಚಾಲನೆ ನೀಡಿ ಮಾತನಾಡಿದರು.
ಉತ್ತಮ ಸಮಾಜವನ್ನು ರೂಪಿಸುವ ಕಾರ್ಯ ದೇವಸ್ಥಾನಗಳಿಂದ ಆಗುತ್ತಿದೆ.

ವಿವಿಧ ಇಲಾಖೆಗಳ ಅನುದಾನ ದುರುಪಯೋಗವಾಗುತ್ತಿದ್ದರೂ, ದೇವಸ್ಥಾನಗಳಿಗೆ ನೀಡುವ ಅನುದಾನ ದುರುಪಯೋಗವಾಗುತ್ತಿಲ್ಲ. ನಮ್ಮ ಕಲೆ, ಸಂಸ್ಕೃತಿ ಉಳಿಸಲು ಮತ್ತು ಮಕ್ಕಳಲ್ಲಿ ಉತ್ತಮ ಸಂಸ್ಕಾರ ಬೆಳೆಸಲು ರಾಜ್ಯದ ಕೆಲವು ದೇವಸ್ಥಾನಗಳಲ್ಲಿ ಹರಿಕಥೆ, ಭಜನೆ, ಭಗವದ್ಗೀತ ಸಂದೇಶ ತಿಳಿಸುವಂತಹ ಕಾರ್ಯಕ್ರಮಗಳನ್ನು ಮುಜರಾಯಿ ಇಲಾಖೆ ಹಮ್ಮಿಕೊಂಡಿದೆ ಎಂದು ಹೇಳಿದರು.

ಸಮಾವೇಶ 8ಕ್ಕೆ : ಅರ್ಚಕರ ಬೇಡಿಕೆಗಳ ಬಗ್ಗೆ ಸರ್ಕಾರಕ್ಕೆ ಸಹಾನು ಭೂತಿ ಹೊಂದಿದೆ. ಅರ್ಚಕರಿಗೆ ಸೂಕ್ತ ತರಬೇತಿ ನೀಡಲಾಗುವುದು. ಈ ಹಿನ್ನೆಲೆಯಲ್ಲಿ ಇದೇ 8ರಂದು ಮಂಗಳೂರಿನಲ್ಲಿ ಜಿಲ್ಲಾ ಅರ್ಚಕರ ಸಮಾವೇಶ ನಡೆಯಲಿದೆ ಎಂದರು.
ಇದಲ್ಲದೇ ರಾಜ್ಯದ ವಿವಿಧ ದೇವಸ್ಥಾನಗಳಲ್ಲಿ ವೃದ್ಧಾಶ್ರಮ ನಿರ್ಮಿಸುವ ಯೋಜನೆ ಇದೆ ಎಂದರು.

ಇಲಾಖೆಯ ಸಿಬ್ಬಂದಿಗೆ ಹೆಚ್ಚಿದ ವೇತನ: ರಾಜ್ಯ ಸರ್ಕಾರಿ ನೌಕರರ ಆರನೇ ವೇತನ ಆಯೋಗದ ವೇತನ ಪರಿಷ್ಕರಣೆ ಆದೇಶದಂತೆ  ಮುಜರಾಯಿ ಇಲಾಖೆಯಲ್ಲಿ ಕೆಲಸ ಮಾಡುವ ಸಿಬ್ಬಂದಿಗೂ ಈ ತಿಂಗಳಿನಿಂದ ಅನ್ವಯವಾಗುತ್ತದೆ ಎಂದರು.

ಮಂದಾರ್ತಿ ದುರ್ಗಾಪರಮೇಶ್ವರಿ ದೇವಸ್ಥಾನದ  ಎಚ್.ಧನಂಜಯ ಶೆಟ್ಟಿ, ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷ ಬಾಲಕೃಷ್ಣ ಹೆಗ್ಡೆ, ಕಾರ್ಯದರ್ಶಿ ವಿಶ್ವನಾಥ ಶೆಟ್ಟಿ, ನರಸಿಂಹ ಬಾಯರಿ, ಉದ್ಯಮಿಗಳಾದ ನವೀನ್ ಕುಮಾರ್ ಶೆಟ್ಟಿ, ತೋನ್ಸೆ ಮನೋಹರ್ ಶೆಟ್ಟಿ, ಉಪನ್ಯಾಸಕ ಡಾ.ರವಿರಾಜ್ ಶೆಟ್ಟಿ, ಭೋಜರಾಜ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.