ADVERTISEMENT

ಮನಸ್ಸಿನ ವಿಕಾಸಕ್ಕೆ ಸಾಹಿತ್ಯ ಅಗತ್ಯ: ವೈದೇಹಿ

​ಪ್ರಜಾವಾಣಿ ವಾರ್ತೆ
Published 17 ಜನವರಿ 2018, 6:38 IST
Last Updated 17 ಜನವರಿ 2018, 6:38 IST

ಉಡುಪಿ: ‘ಮನುಷ್ಯ ಸಮಾಜಕ್ಕೆ ತೆರೆದುಕೊಳ್ಳಲು ಸಾಹಿತ್ಯ ಕಮ್ಮಟಗಳು ಪ್ರೇರಕ’ ಎಂದು ಲೇಖಕಿ ವೈದೇಹಿ ಅಭಿಪ್ರಾಯಪಟ್ಟರು. ಮಣಿಪಾಲ ಯುನಿವರ್ಸಲ್ ಪ್ರೆಸ್ ಮಂಗಳವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಲೇಖಕ ಟಿ.ಪಿ. ಅಶೋಕ ಅವರ ‘ಕೃತಿ ಜಗತ್ತು’ ಪುಸ್ತಕವನ್ನು ಬಿಡುಗಡೆಗೊಳಿಸಿ  ಅವರು ಮಾತನಾಡಿದರು.

‘ಸಾಹಿತ್ಯ ಉಪನ್ಯಾಸ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದರಿಂದ ಸಮಾಜದಲ್ಲಿರುವ ಕಷ್ಟ ಹಾಗೂ ಜನಸಾಮಾನ್ಯರ ಜೀವನವನ್ನು ಅರ್ಥ ಮಾಡಿಕೊಳ್ಳಬಹುದು. ಸಮಸ್ಯೆಗಳನ್ನು ಪರಿಹರಿಸಲು ಸಹ ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತಾಗಬೇಕು ’ಎಂದು ಹೇಳಿದರು.

‘ಸಮಗ್ರ ವಿಶ್ವ ಸಾಹಿತ್ಯದ ಪರಿಚಯವೇ ‘ಕೃತಿ ಜಗತ್ತು’ ಪುಸ್ತಕದಲ್ಲಿದೆ. ದುರಂತ, ದುಃಖ, ಸಂತೋಷವೆಲ್ಲವನ್ನೂ ವಿಶ್ಲೇಷಿಸಿ, ವಿಮರ್ಶಿಸಿ, ಅರ್ಥೈಸಿರುವ ಒಟ್ಟು 26 ಲೇಖನಗಳನ್ನು ಒಳಗೊಂಡಿದೆ. ಪುಸಕ್ತ ಓದಲು ಆರಂಭಿಸಿದರೆ ಓದುವ ಹಂಬಲ ಹೆಚ್ಚುತ್ತ ಹೋಗುತ್ತದೆ’ ಎಂದರು.

ADVERTISEMENT

ಕೃತಿ ಪರಿಚಯಿಸಿ ಮಾತನಾಡಿದ ಚಿಂತಕ ಜಿ. ರಾಜಶೇಖರ್, ಆಧುನಿಕ ಭಾರತ ಸ್ಥಿತಿ, ಸಾಧ್ಯತೆ, ಸಮಸ್ಯೆಗಳನ್ನು ಈ ಪುಸ್ತಕ ಬಿಂಬಿಸುತ್ತದೆ. ಭವಿಷ್ಯದ, ಗತಕಾಲದ ವೈಭವ ಮತ್ತು ಬೌದ್ಧಿಕ, ಧಾರ್ಮಿಕ ಆಗುಹೋಗುಗಳನ್ನು ಅತ್ಯಂತ ಸುಂದರವಾಗಿ ಸಂಗ್ರಹಿಸಲಾಗಿದೆ ಎಂದರು.

ಮಣಿಪಾಲ ಅಕಾಡೆಮಿ ಆಫ್ ಜನರಲ್ ಎಜುಕೇಶನ್ ಕುಲಪತಿ ಡಾ. ಎಚ್. ವಿನೋದ್ ಭಟ್. ಟಿ.ಪಿ. ಅಶೋಕ ಉಪಸ್ಥಿತರಿದ್ದರು. ಮಣಿಪಾಲ ಯೂನಿವರ್ಸಲ್ ಪ್ರೆಸ್‌ನ ಅಶ್ವಿನಿ ಕಾರ್ಯಕ್ರಮ ನಿರೂಪಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.