ADVERTISEMENT

ಶೇ. 85ರಷ್ಟು ಬೂತ್‌ಮಟ್ಟದ ಸಮಿತಿ ರಚನೆ ಕಾರ್ಯ ಪೂರ್ಣ

ಜಿಲ್ಲಾ ಬಿಜೆಪಿಯ ಸಾಂಸ್ಥಿಕ ಚುನಾವಣೆಗೆ ಭರದ ಸಿದ್ಧತೆ–ಮಟ್ಟಾರು

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2019, 15:25 IST
Last Updated 8 ಅಕ್ಟೋಬರ್ 2019, 15:25 IST
ಕಡಿಯಾಳಿಯ ಬಿಜೆಪಿ ಕಚೇರಿಯಲ್ಲಿ ಮಂಗಳವಾರ ಕರೆದ ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಮಾತನಾಡಿದರು.ಪ್ರಜಾವಾಣಿ ಚಿತ್ರ
ಕಡಿಯಾಳಿಯ ಬಿಜೆಪಿ ಕಚೇರಿಯಲ್ಲಿ ಮಂಗಳವಾರ ಕರೆದ ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಮಾತನಾಡಿದರು.ಪ್ರಜಾವಾಣಿ ಚಿತ್ರ   

ಉಡುಪಿ: ಜಿಲ್ಲೆಯ ಆರು ಮಂಡಲ ಹಾಗೂ ಐದು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಶೀಘ್ರವೇ ಬಿಜೆಪಿಯ ಸಾಂಸ್ಥಿಕ ಚುನಾವಣೆ ನಡೆಯಲಿದೆ. ಇದಕ್ಕಾಗಿ ಬೂತ್‌ಮಟ್ಟದ ಸಮಿತಿ ರಚನೆ ಕಾರ್ಯ ಶೇ 85ರಷ್ಟು ಪೂರ್ಣಗೊಂಡಿದೆ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಹೇಳಿದರು.

ಕಡಿಯಾಳಿಯ ಬಿಜೆಪಿ ಕಚೇರಿಯಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಕಳ ವಿಧಾನಸಭಾ ಕ್ಷೇತ್ರದಲ್ಲಿ ಶೇ 95ರಷ್ಟು ಬೂತ್‌ ಸಮಿತಿ ರಚನೆ ಕಾರ್ಯ ಮುಗಿದಿದ್ದು, ಮೊದಲ ಸ್ಥಾನದಲ್ಲಿದೆ. ಉಳಿದಂತೆ ಅ 10ರೊಳಗೆ ಸಮಿತಿ ರಚನೆ ಕಾರ್ಯ ಪೂರ್ಣಗೊಳ್ಳಲಿದೆ. ಬಳಿಕ ಮಂಡಲಗಳ ಸಮಿತಿ ರಚನೆ ಹಾಗೂ ಅಧ್ಯಕ್ಷರ ಚುನಾವಣೆ ನಡೆಯಲಿದೆ. ನಂತರ ಚುನಾವಣಾ ಪ್ರಕ್ರಿಯೆ ಆರಂಭಗೊಳ್ಳಲಿದೆ ಎಂದರು.

ಗಾಂಧೀಜಿ ಅವರ 150ನೇ ಜನ್ಮದಿನಾಚರಣೆ ಪ್ರಯುಕ್ತ ಅ.2ರಿಂದ 30ರವರೆಗೆ ಸಂಸದರ ನೇತೃತ್ವದಲ್ಲಿ 15 ಕಿ.ಮೀ ಕಾಲ್ನಡಿಗೆ ಅಭಿಯಾನ ಹಮ್ಮಿಕೊಂಡಿದ್ದು, ಕಾಪುವಿನಲ್ಲಿ ಚಾಲನೆ ನೀಡಲಾಗಿದೆ. ಅಭಿಯಾನದ ಜತೆಗೆ ಸ್ವಚ್ಛತಾ ಕಾರ್ಯಕ್ರಮಕ್ಕೂ ಆದ್ಯತೆ ನೀಡಲಾಗಿದ್ದು, ಕಾರ್ಕಳದಲ್ಲಿ ಹೆಚ್ಚು ತ್ಯಾಜ್ಯ ಸಂಗ್ರಹ ಮಾಡಲಾಗಿದೆ ಎಂದರು.

ADVERTISEMENT

ಕೇಂದ್ರದ ಎನ್‌ಡಿಆರ್‌ಎಫ್‌ ಯೋಜನೆಯಡಿ ರಾಜ್ಯಕ್ಕೆ ₹ 1,200 ಕೋಟಿ ನೆರೆ ಪರಿಹಾರ ಬಿಡುಗಡೆಯಾಗಿದ್ದು, ಎರಡನೇ ಹಂತದಲ್ಲಿ ₹ 3000 ಕೋಟಿ ಬಿಡುಗಡೆಯಾಗುವ ನಿರೀಕ್ಷೆ ಇದೆ. ಹಿಂದಿನ ಯುಪಿಎ ಸರ್ಕಾರ ನೆರೆಯಿಂದಾದ ನಷ್ಟವನ್ನು ಅಧ್ಯಯನ ಮಾಡಿ ನೀಡುವ ವರದಿಯ ಆಧಾರದ ಮೇಲೆ ಪರಿಹಾರ ನೀಡಬೇಕು ಎಂಬ ನಿಯಮಾವಳಿ ಮಾಡಿದ್ದರಿಂದ ನೆರೆ ಪರಿಹಾರ ನೀಡಲು ವಿಳಂಬವಾಗಿದೆ ಎಂದರು.

ತುರ್ತಾಗಿ ನೆರೆ ಪರಿಹಾರ ನೀಡಲು ಅಡ್ಡಿಯಾಗಿರುವ ನಿಯಮವನ್ನು ಬದಲಾವಣೆ ಮಾಡಲು ಕೇಂದ್ರ ಸರ್ಕಾರ ಚಿಂತನೆ ನಡೆಸುತ್ತಿದೆ ಎಂದರು.

ಜಿಲ್ಲೆಯ ಪ್ರಾಕೃತಿಕ ವಿಕೋಪ ಪರಿಹಾರಕ್ಕೆ ₹ 25 ಕೋಟಿ ಬಿಡುಗಡೆಯಾಗಿದೆ. ಪರಿಹಾರ ಬಿಡುಗಡೆ ಮಾಡುವಾಗ ಎಲ್ಲ ರೈತರನ್ನು ಪರಿಗಣಿಸಿಲ್ಲ. ಸಾಕಷ್ಟು ಭತ್ತದ ಬೆಳೆಗೆ ಹಾನಿಯಾಗಿದೆ. ತೆಂಗು, ಅಡಿಕೆ ಸೇರಿದಂತೆ ತೋಟಗಾರಿಕಾ ಬೆಳೆಗಳಿಗೂ ಹಾನಿಯಾಗಿದೆ. ಎಕರೆಗೆ ₹ 3 ರಿಂದ ₹4 ಸಾವಿರ ಪರಿಹಾರ ನೀಡಬೇಕು. ರೈತರಿಗೆ ಹೆಚ್ಚುವರಿ ಪರಿಹಾರ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.

ಜಿಲ್ಲೆಯಲ್ಲಿ ಮೂರು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಮರಳು ಸಮಸ್ಯೆ ಬಗೆಹರಿದಿದೆ. ಸಿಆರ್‌ಝೆಡ್‌ ವ್ಯಾಪ್ತಿಯಲ್ಲಿ ಮರಳುಗಾರಿಕೆ ಆರಂಭವಾಗಿದ್ದು, ಜನರಿಗೆ ಕಡಿಮೆ ದರದಲ್ಲಿ ಸುಲಭವಾಗಿ ಮರಳು ಸಿಗಲಿದೆ. ಕುಂದಾಪುರ ವಿಭಾಗದ ನಾನ್‌ ಸಿಆರ್‌ಝೆಡ್‌ ವ್ಯಾಪ್ತಿಯಲ್ಲಿ ಅ.16ರಿಂದ ಮರಳುಗಾರಿಕೆಗೆ ಚಾಲನೆ ಸಿಗಲಿದೆ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಮುಖಂಡರಾದ ಯಶ್‌ಪಾಲ್‌ ಸುವರ್ಣ, ಪ್ರಭಾಕರ ಪೂಜಾರಿ, ಸಂಧ್ಯಾ ರಮೇಶ್‌, ರವಿ ಅಮೀನ್‌, ಗುರುಪ್ರಸಾದ್‌ ಶೆಟ್ಟಿ, ಶಿವಕುಮಾರ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.