ADVERTISEMENT

‘ಲಿಂಗತ್ವ ಅಲ್ಪಸಂಖ್ಯಾತರಿಗೆ ಅಗೌರವ ತೋರಿದರೆ ಕ್ರಮ’: ಜಿಲ್ಲಾಧಿಕಾರಿ

​ಪ್ರಜಾವಾಣಿ ವಾರ್ತೆ
Published 6 ಜೂನ್ 2025, 14:16 IST
Last Updated 6 ಜೂನ್ 2025, 14:16 IST
ಲಿಂಗತ್ವ ಅಲ್ಪಸಂಖ್ಯಾತರ ಕುರಿತು ಸಂವೇದನೆ ಮೂಡಿಸಲು ಮಣಿಪಾಲದ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಮಾಹಿತಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿತ್ತು 
ಲಿಂಗತ್ವ ಅಲ್ಪಸಂಖ್ಯಾತರ ಕುರಿತು ಸಂವೇದನೆ ಮೂಡಿಸಲು ಮಣಿಪಾಲದ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಮಾಹಿತಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿತ್ತು    

ಉಡುಪಿ: ಸಾಂವಿಧಾನಿಕವಾಗಿ ಯಾವುದೇ ಜಾತಿ, ಸಮುದಾಯ, ಲಿಂಗದ ಆಧಾರದಲ್ಲಿ ತಾರತಮ್ಯ ಮಾಡುವಂತಿಲ್ಲ. ಲಿಂಗತ್ವ ಅಲ್ಪಸಂಖ್ಯಾತರು ಕಚೇರಿಗಳಿಗೆ ಬಂದಾಗ ಅವರೊಂದಿಗೆ ಅಗೌರವದಿಂದ ವರ್ತಿಸಿದ್ದಲ್ಲಿ ಅಂತಹ ಸರ್ಕಾರಿ ನೌಕರರ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಕೆ. ವಿದ್ಯಾಕುಮಾರಿ ತಿಳಿಸಿದರು.

ಲಿಂಗತ್ವ ಅಲ್ಪಸಂಖ್ಯಾತರ ಕುರಿತು ಸಂವೇದನೆ ಮೂಡಿಸಲು ಮಣಿಪಾಲದ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಮಾಹಿತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ಲಿಂಗತ್ವ ಅಲ್ಪಸಂಖ್ಯಾತರು ತಮ್ಮ ಕೆಲಸ ಕಾರ್ಯ ನಿಮಿತ್ತ ಸರ್ಕಾರಿ ಕಚೇರಿಗಳಿಗೆ ಭೇಟಿ ನೀಡುವ ಸಂದರ್ಭದಲ್ಲಿ ಅವರೊಂದಿಗೆ ಗೌರವಯುತವಾಗಿ ವರ್ತಿಸಿ, ನಿಯಮಾನುಸಾರ ಕೆಲಸ ಕಾರ್ಯಗಳನ್ನು ಮಾಡಿಕೊಡಬೇಕು ಎಂದರು.

ADVERTISEMENT

ಸರ್ಕಾರ ಲಿಂಗತ್ವ ಅಲ್ಪಸಂಖ್ಯಾತರ ಶ್ರೇಯೋಭಿವೃದ್ಧಿಗೆ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಆ ಯೋಜನೆಗಳ ಬಗ್ಗೆ ಅರಿವು ಮೂಡಿಸಿ ಅವರನ್ನು ಅದರ ಫಲಾನುಭವಿಗಳನ್ನಾಗಿಸಬೇಕು. ಗ್ಯಾರಂಟಿ ಯೋಜನೆಗಳ ಪ್ರಯೋಜನ ಪಡೆಯಲು ಅವರು ಅರ್ಹರಿದ್ದು, ಅವರನ್ನು ಫಲಾನುಭವಿಗಳನ್ನಾಗಿಸಬೇಕು ಎಂದು ಹೇಳಿದರು.

ಅವರಿಗೆ ವಾಸಿಸಲು ಮನೆ, ಉದ್ಯೋಗ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಕಲ್ಪಿಸುವಂತೆ ಕೋರಿಕೆಗಳೂ ಇವೆ. ಅವುಗಳನ್ನು ಆದ್ಯತೆಯ ಮೇಲೆ ನೀಡಲು ಮುಂದಾಗಬೇಕು ಎಂದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್ ಮಾತನಾಡಿ, ಲಿಂಗತ್ವ ಅಲ್ಪಸಂಖ್ಯಾತರು ನಿವೇಶನ ಅಥವಾ ವಸತಿ ಸೌಲಭ್ಯ ಪಡೆಯಲು ಗ್ರಾಮ ಪಂಚಾಯಿತಿಗಳಲ್ಲಿ ಅರ್ಜಿ ಸಲ್ಲಿಸಿದ್ದಲ್ಲಿ, ಅಂತಹವರಿಗೆ ಆದ್ಯತೆಯ ಮೇಲೆ ನೀಡಲು ಅವಕಾಶ ಕಲ್ಪಿಸಲಾಗುವುದು. ಸರ್ಕಾರದ ಹೊರಗುತ್ತಿಗೆ ಸಂಘದಲ್ಲಿ ವಿದ್ಯಾರ್ಹತೆ ಹೊಂದಿದವರಿಗೆ ಉದ್ಯೋಗ ನಿರ್ವಹಿಸಲು ಅವಕಾಶ ಕಲ್ಪಿಸುವುದಾಗಿ ತಿಳಿಸಿದರು.

ಒಂದೆಡೆ ಸಂಸ್ಥೆಯ ಸ್ಥಾಪಕಿ ಅಕ್ಕೈ ಪದ್ಮಾಶಾಲಿ ಮಾತನಾಡಿ, ಸಾಧನೆಗೆ ಲಿಂಗತಾರತಮ್ಯವಿಲ್ಲ. ಭಾರತದ ನ್ಯಾಯಾಂಗ ವ್ಯವಸ್ಥೆಯು ಲಿಂಗತ್ವ ಅಲ್ಪಸಂಖ್ಯಾತರ ಸಮುದಾಯದವರ ಹಕ್ಕುಗಳನ್ನು ಎತ್ತಿ ಹಿಡಿಯುವುದರೊಂದಿಗೆ ಸ್ವತಂತ್ರವಾಗಿ ಜೀವಿಸಲು ಸಹಕಾರ ನೀಡುತ್ತಿದೆ. ಲಿಂಗತ್ವ ಅಲ್ಪಸಂಖ್ಯಾತ ಸಮುದಾಯದವರು ಶಿಕ್ಷಣವಂತರಾಗಿ, ಉನ್ನತ ಹುದ್ದೆಗಳನ್ನು ಅಲಂಕರಿಸುವ ಅವಕಾಶ ಕಲ್ಪಿಸಬೇಕು ಎಂದರು.

ಸಂವಾದದಲ್ಲಿ ಲಿಂಗತ್ವ ಅಲ್ಪಸಂಖ್ಯಾತರು ಮಾತನಾಡಿ, ನಾವು ಪ್ರೌಢಾವಸ್ಥೆಗೆ ಬಂದಂತಹ ಸಂದರ್ಭದಲ್ಲಿ ಅನಿವಾರ್ಯವಾಗಿ ಕುಟುಂಬವನ್ನು ತ್ಯಜಿಸುವುದು ಹಾಗೂ ಹುಟ್ಟಿದ ಊರನ್ನು ಬಿಟ್ಟು ಬೇರೆ ಊರಿಗೆ ಹೋಗಿ ನೆಲೆಸಬೇಕಾಗುತ್ತದೆ. ಅಲ್ಲಿ ನಮಗೆ ವಾಸಿಸಲು ಮನೆಗಳು ಸಿಗುವುದಿಲ್ಲ.  ಉತ್ತಮ ಶಿಕ್ಷಣ ಹೊಂದಿದ್ದರೂ ಸಹ ಉದ್ಯೋಗಾವಕಾಶಗಳು ಸಿಗುವುದು ಕಡಿಮೆ. ಆಗ ಭಿಕ್ಷಾಟನೆ ಅನಿವಾರ್ಯವಾಗುತ್ತದೆ. ನಮಗೆ ಉದ್ಯೋಗ ಕೈಗೊಳ್ಳಲು, ಮನೆ ಹೊಂದಲು ಅವಕಾಶಗಳನ್ನು ಕಲ್ಪಿಸಬೇಕು ಎಂದು ಮನವಿ ಮಾಡಿದರು.

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಯೋಗೇಶ್ ಪಿ.ಆರ್., ಎಎಸ್‌ಪಿ ಪಿ.ಎ.ಹೆಗಡೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಶ್ಯಾಮಲಾ ಸಿ.ಕೆ., ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ನಾರಾಯಣ ಸ್ವಾಮಿ, ಡಿಡಿಪಿಐ ಅಶೋಕ್ ಕಾಮತ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.