ADVERTISEMENT

ಪ್ರಕೃತಿಯೊಂದಿಗೆ ಬದುಕುವುದು ಇಂದಿನ ಅಗತ್ಯ: ಈಶಪ್ರಿಯ ತೀರ್ಥ ಸ್ವಾಮೀಜಿ

ಅದಮಾರು ಮಠದ ಈಶಪ್ರಿಯ ತೀರ್ಥ ಸ್ವಾಮೀಜಿ ಕಿವಿಮಾತು

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2021, 15:27 IST
Last Updated 26 ಸೆಪ್ಟೆಂಬರ್ 2021, 15:27 IST
ಭಾನುವಾರ ಕೃಷ್ಣಮಠದ ರಾಜಾಂಗಣದಲ್ಲಿ ಗೊಡ್ಡ ಮೊಗೇರ ಸಮಾಜದ ಕುಲ ಕಸುಬಿನ ಪುನರುತ್ಥಾನದ ಅಂಗವಾಗಿ ಚಾಪೆ ಹೆಣೆಯುವ ಕಾರ್ಯಾಗಾರವನ್ನು ಅದಮಾರು ಮಠಾಧೀಶರಾದ ಈಶಪ್ರಿಯ ತೀರ್ಥ ಸ್ವಾಮೀಜಿ ಉದ್ಘಾಟಿಸಿ, ಚಾಪೆ ಹೆಣೆಯುವ ಕಲೆಯನ್ನು ವೀಕ್ಷಿಸಿದರು.
ಭಾನುವಾರ ಕೃಷ್ಣಮಠದ ರಾಜಾಂಗಣದಲ್ಲಿ ಗೊಡ್ಡ ಮೊಗೇರ ಸಮಾಜದ ಕುಲ ಕಸುಬಿನ ಪುನರುತ್ಥಾನದ ಅಂಗವಾಗಿ ಚಾಪೆ ಹೆಣೆಯುವ ಕಾರ್ಯಾಗಾರವನ್ನು ಅದಮಾರು ಮಠಾಧೀಶರಾದ ಈಶಪ್ರಿಯ ತೀರ್ಥ ಸ್ವಾಮೀಜಿ ಉದ್ಘಾಟಿಸಿ, ಚಾಪೆ ಹೆಣೆಯುವ ಕಲೆಯನ್ನು ವೀಕ್ಷಿಸಿದರು.   

ಉಡುಪಿ: ಪ್ರಕೃತಿಯೊಂದಿಗೆ ಜೀವನ ಮಾಡುವುದನ್ನು ಕಲಿಯಬೇಕಾಗಿರುವುದು ಇಂದಿನ ತುರ್ತು ಅಗತ್ಯ ಎಂದು ಅದಮಾರು ಮಠದ ಈಶಪ್ರಿಯ ತೀರ್ಥ ಸ್ವಾಮೀಜಿ ಹೇಳಿದರು.

ಪರ್ಯಾಯ ಅದಮಾರು ಮಠದ ಆಶ್ರಯದಲ್ಲಿ ಭಾನುವಾರ ರಾಜಾಂಗಣದಲ್ಲಿ ಗೊಡ್ಡ ಮೊಗೇರ ಸಮಾಜದ ಕುಲ ಕಸುಬಿನ ಪುನರುತ್ಥಾನ ಅಂಗವಾಗಿ ಚಾಪೆ ಹೆಣೆಯುವ ಕಾರ್ಯಾಗಾರವ ಉದ್ಘಾಟಿಸಿ ಸ್ವಾಮೀಜಿ ಮಾತನಾಡಿದರು.

ದೇಶದ ಪ್ರತಿಯೊಂದು ಪ್ರದೇಶದ ವಾತಾವರಣಕ್ಕನುಗುಣವಾಗಿ ವಿವಿಧ ಸಸ್ಯ ಗಿಡ–ಮರಗಳು ಬೆಳೆಯುತ್ತದೆ. ಹಿರಿಯರು ಪ್ರಕೃತಿದತ್ತವಾಗಿ ದೊರೆಯುವ ಉತ್ಪನ್ನಗಳನ್ನು ಬಳಸಿಕೊಂಡು ಜೀವನ ಸಾಗಿಸುತ್ತಿದ್ದರು. ಪ್ರಸ್ತುತ ಮನುಷ್ಯ ಬಾಹ್ಯ ಆಕರ್ಷಣೆಗೆ ಮರಳಾಗಿದ್ದು, ಪ್ರಾಕೃತಿಕ ಉತ್ಪನ್ನಗಳನ್ನು ಕಡೆಗಣಿಸಿದ್ದಾರೆ ಎಂದರು.

ADVERTISEMENT

ಪ್ರಕೃತಿಗೆ ಮಾರಕವಾದ ಆಕರ್ಷಕ ಉತ್ಪನ್ನಗಳ ಬಳಕೆಯಿಂದ ಸ್ವಂತಿಕೆ, ಹಣ, ಬದುಕು ವ್ಯರ್ಥವಾಗುತ್ತಿದೆ. ಪ್ರಕೃತಿಯೊಂದಿಗೆ ನಾವೆಲ್ಲರೂ ಜೀವಿಸಬೇಕಾಗಿದ್ದು, ಪ್ರಾಚೀನ ಕುಶಲ ಕಲೆಗಳನ್ನು ಉಳಿಸಲು ಸಹಕಾರ ನೀಡಬೇಕು. ಚಾಪೆ ಹೆಣೆಯುವ ಕಾರ್ಯಾಗಾರ ಯಶಸ್ಸಾಗಲಿ, ಎಲ್ಲರಿಗೂ ಇದರ ಪ್ರಯೋಜನ ದಕ್ಕಲಿ ಎಂದು ಆಶಿಸಿದರು.

ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಹಿಂದಿನ ಕುಲಕಸುಬುಗಳು ನಶಿಸದಂತೆ ಮುಂದಿನ ಜನಾಂಗಕ್ಕೆ ತಲುಪಿಸಬೇಕಾದ ಹೊಣೆಗಾರಿಕೆ ಇದೆ. ಕರಕುಶಲ ವಸ್ತುಗಳಿಗೆ ಆಧುನಿಕ ಸ್ಪರ್ಶ ನೀಡಿ ವೃತ್ತಿಪರರ ಬದುಕಿಗೆ ನೆರವು ನೀಡಬೇಕು. ಸರ್ಕಾರದಿಂದ ಕರಕುಶಲ ವಸ್ತುಗಳಿಗೆ ಅಗತ್ಯ ಮಾರುಕಟ್ಟೆ ವ್ಯವಸ್ಥೆ ಮಾಡುವ ಮೂಲಕ ಸಬ್ಸಿಡಿ ನೀಡುವ ಬಗ್ಗೆ ಚಿಂತನೆ ನಡೆಸಲಾಗುವುದು ಎಂದರು.

ಉಡುಪಿ ಶಾಸಕರಾದ ಕೆ.ರಘುಪತಿ ಭಟ್, ಕಾಪು ಶಾಸಕ, ಲಾಲಾಜಿ ಆರ್. ಮೆಂಡನ್, ನಬಾರ್ಡ್‌ನ ಮಂಗಳೂರಿನ ಪ್ರಧಾನ ವ್ಯವಸ್ಥಾಪಕ ಅರುಣ್ ತಲ್ಲೂರ್ ಕರಕುಶಲ ಕಲೆಗೆ ಹಾಗೂ ಕುಶಲಕರ್ಮಿಗಳಿಗೆ ಸಹಕಾರ ನೀಡುವುದಾಗಿ ತಿಳಿಸಿದರು.

ಜಗನ್ನಾಥ ಬಂಗೇರ ಮಟ್ಟು, ರಾಜಶೇಖರ ಜಿ.ಎಸ್.ಮಟ್ಟು, ಪರ್ಯಾಯ ಮಠದ ವ್ಯವಸ್ಥಾಪಕರಾದ ಗೋವಿಂದರಾಜ್, ಶ್ರೀಕೃಷ್ಣ ಬಳಗದ ವೈ.ಎನ್.ರಾಮಚಂದ್ರ ರಾವ್, ಶ್ರೀಗಳ ಆಪ್ತ ಕಾರ್ಯದರ್ಶಿ ರೋಹಿತ್ ತಂತ್ರಿ, ಪ್ರಮುಖ ಸಲಹೆಗಾರ ಪುರುಷೋತ್ತಮ ಅಡ್ವೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.