ADVERTISEMENT

ಉಡುಪಿ|ಕೃಷಿಕಾಲೇಜು ರೈತರ ದಶಕದ ಬೇಡಿಕೆ:ಬಜೆಟ್‌ನಲ್ಲಿ ಸಾಕಾರಗೊಳ್ಳುವುದೇ ನಿರೀಕ್ಷೆ

ನವೀನ್ ಕುಮಾರ್ ಜಿ.
Published 4 ಜನವರಿ 2026, 3:58 IST
Last Updated 4 ಜನವರಿ 2026, 3:58 IST
ಬ್ರಹ್ಮಾವರದ ಕೃಷಿ ವಿಜ್ಞಾನ ಕೇಂದ್ರ
ಬ್ರಹ್ಮಾವರದ ಕೃಷಿ ವಿಜ್ಞಾನ ಕೇಂದ್ರ   

ಉಡುಪಿ: ಕರಾವಳಿ ಜಿಲ್ಲೆಗಳಲ್ಲಿ ಕೃಷಿ ಪದವಿ ಕಾಲೇಜುಗಳ ಕೊರತೆ ಇರುವುದರಿಂದ ಬ್ರಹ್ಮಾವರದಲ್ಲಿ ಕೃಷಿ ಕಾಲೇಜು ಸ್ಥಾಪಿಸಬೇಕೆಂಬುದು ಜಿಲ್ಲೆಯ ರೈತರ ಹಲವು ವರ್ಷಗಳ ಬೇಡಿಕೆಯಾಗಿದ್ದು, ಪ್ರತಿ ಬಜೆಟ್‌ ಬರುವಾಗಲೂ ಈ ಬೇಡಿಕೆ ಈಡೇರುವುದೋ ಎಂದು ಇಲ್ಲಿನ ಜನರು ಕಾತರದಿಂದ ಕಾಯುತ್ತಿದ್ದಾರೆ.

ಜಿಲ್ಲೆಯಲ್ಲಿ ಕೃಷಿ ಕಾಲೇಜು ಸ್ಥಾಪನೆಯಾದರೆ ಈ ಭಾಗದ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ಮತ್ತು ಯುವಜನರನ್ನು ಕೃಷಿ ಕ್ಷೇತ್ರಗಳತ್ತವೂ ಆಕರ್ಷಿಸಲು ಸಾಧ್ಯವಾಗಬಹುದು ಎಂಬುದು ಇಲ್ಲಿನ ರೈತರ ಅಭಿಮತವಾಗಿದೆ. ಈ ಹಿಂದೆ ರೈತರು ಈ ಬೇಡಿಕೆಯನ್ನು ಮುಂದಿಟ್ಟಿದ್ದಾಗ ಜನಪ್ರತಿನಿಧಿಗಳು ಭರವಸೆ ನೀಡಿದ್ದು ಬಿಟ್ಟರೆ ಅದು ಕಾರ್ಯರೂಪಕ್ಕೆ ಬಂದಿಲ್ಲ ಎನ್ನುತ್ತಾರೆ ಜಿಲ್ಲೆಯ ಜನ.

ಪ್ರಸ್ತುತ ಬ್ರಹ್ಮಾವರದಲ್ಲಿರುವ ಕೃಷಿ ಡಿಪ್ಲೊಮಾ ಕಾಲೇಜಿನ ಜಾಗವನ್ನೇ ಬಳಸಿಕೊಂಡು ಕೃಷಿ ಪದವಿ ಕಾಲೇಜು ಆರಂಭಿಸಬೇಕೆಂಬುದು ರೈತರ ಬೇಡಿಕೆಯಾಗಿದೆ. ಈ ಭಾಗದ ರೈತರು ವಿವಿಧ ವಿಷಯಗಳಿಗೆ ಸಂಬಂಧಿಸಿ ಪ್ರತಿ ಭಾರಿ ಪ್ರತಿಭಟನೆ ನಡೆಸುವಾಗಲೂ ಈ ಬೇಡಿಕೆಯನ್ನು ಮುಂದಿಡುತ್ತಿದ್ದಾರೆ.

ADVERTISEMENT

ಈಗಿರುವ ಕೃಷಿ ಡಿಪ್ಲೊಮಾ ಕಾಲೇಜಿನ ಜಾಗವನ್ನು ಬಳಸಿಕೊಂಡು ಅಲ್ಲಿ ಕಾಲೇಜು ಪ್ರಾರಂಭಿಸಿದರೆ ಕೃಷಿ ಚಟುವಟಿಕೆಗಳಿಗೂ ಉತ್ತೇಜನ ಸಿಗಬಹುದು ಎಂಬುದು ರೈತರ ಆಶಯವಾಗಿದೆ.

ಬ್ರಹ್ಮಾವರದಲ್ಲಿರುವ ಕೃಷಿ ಡಿಪ್ಲೊಮಾ ಕಾಲೇಜನ್ನೇ ಪೂರ್ಣ ಪ್ರಮಾಣದ ಕೃಷಿ ಪದವಿ ಕಾಲೇಜಾಗಿ ಉನ್ನತೀಕರಿಸಬೇಕು ಅದಕ್ಕಾಗಿ ಬಜೆಟ್‌ನಲ್ಲಿ ಅನುದಾನ ಮೀಸಲಿಡಬೇಕು. ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದಲ್ಲಿ ಸುಸಜ್ಜಿತ ಕಟ್ಟಡ, ಪ್ರಯೋಗಾಲಯ, ವಿದ್ಯಾರ್ಥಿನಿಲಯ ಮೊದಲಾದ ಸೌಕರ್ಯವಿರುವುದರಿಂದ ಕಾಲೇಜು ಆರಂಭಿಸಲು ಅನುಕೂಲತೆ ಇದೆ. ಆದರೆ ಜನಪ್ರತಿನಿಧಿಗಳು ಇಚ್ಛಾಶಕ್ತಿ ತೋರಿಸಬೇಕಾಗಿದೆ ಎನ್ನುತ್ತಾರೆ ರೈತರು.

ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದಲ್ಲಿ ಸಾಕಷ್ಟು ಜಾಗ ಇರುವುದರಿಂದ, ಭತ್ತದ ಬೆಳೆ ಹಾಗೂ ತೋಟಗಾರಿಕಾ ಬೆಳೆಯಾದ ತೆಂಗು, ಅಡಿಕೆ ಮೊದಲಾದವುಗಳ ಬಗ್ಗೆ ಪ್ರಾಯೋಗಿಕವಾಗಿ ಸಂಶೋಧನೆ ನಡೆಸಲು ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಎಂದೂ ಕೃಷಿಕರು ಅಭಿಪ್ರಾಯಪಡುತ್ತಾರೆ.

‘ಬಜೆಟ್‌ನಲ್ಲಿ ಕರಾವಳಿಯ ಕೃಷಿಕ್ಷೇತ್ರಕ್ಕೆ ಪ್ರತ್ಯೇಕ ಅನುದಾನ ಮೀಸಲಿರಿಸಬೇಕು. ಯಾಕೆಂದರೆ ಇಲ್ಲಿ ನೀರಾವರಿ ಸೇರಿದಂತೆ ಕೃಷಿಗೆ ಬೇಕಾದ ಎಲ್ಲಾ ವ್ಯವಸ್ಥೆಗಳನ್ನು ಕೃಷಿಕರೇ ಮಾಡಬೇಕಾಗಿದೆ’ ಎಂದು ಉಡುಪಿ ಜಿಲ್ಲಾ ಕೃಷಿಕ ಸಂಘದ ಕಾರ್ಯದರ್ಶಿ ರವೀಂದ್ರ ಗುಜ್ಜರಬೆಟ್ಟು ಹೇಳಿದರು.

‘ಹೈನುಗಾರಿಕಾ ಕ್ಷೇತ್ರಕ್ಕೂ ಉತ್ತೇಜನ ನೀಡುವ ನಿಟ್ಟಿನಲ್ಲಿ ಬಜೆಟ್‌ನಲ್ಲಿ ಅನುದಾನ ಮೀಸಲಿರಿಸಬೇಕು. ಜೊತೆಗೆ ಯುವಜನರನ್ನು ಕೃಷಿಯ ಕಡೆಗೆ ಆಕರ್ಷಿಸಲು ಯೋಜನೆ ರೂಪಿಸಿ ಅದನ್ನು ಕಾರ್ಯಗತಗೊಳಿಸಬೇಕು’ ಎಂದೂ ಅವರು ತಿಳಿಸಿದರು.

‘ಈ ಪ್ರದೇಶದಲ್ಲಿ ಕಿಂಡಿ ಅಣೆಕಟ್ಟು ನಿರ್ಮಿಸುವಾಗ ಸ್ಥಳೀಯ ರೈತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಇಲ್ಲದಿದ್ದೆ ಅದು ಅವೈಜ್ಞಾನಿಕವಾಗಿ ಸಮಸ್ಯೆ ಉಂಟಾಗುತ್ತದೆ. ಯೋಜನೆಗಳನ್ನು ರೂಪಿಸುವಾಗ ಅದನ್ನು ಗಮನದಲ್ಲಿಟ್ಟುಕೊಳ್ಳಬೇಕು. ಕರಾವಳಿಯಲ್ಲಿ ತುಂಡುಭೂಮಿ ಇದ್ದರೂ ಕೃಷಿಯಲ್ಲಿ ಆಸಕ್ತಿ ಇರುವವರು ಇದ್ದಾರೆ. ಆದ್ದರಿಂದ ಕೃಷಿ ಕಾರಿಡಾರ್‌ ಯೋಜನೆಯನ್ನು ಬಜೆಟ್‌ನಲ್ಲಿ ಘೋಷಿಸಿ ಅದಕ್ಕೆ ಪೂರಕವಾದ ಯೋಜನೆಗಳನ್ನು ರೂಪಿಸಬೇಕು’ ಎಂದೂ ಅವರು ಆಗ್ರಹಿಸಿದ್ದಾರೆ.

‘ಕೃಷಿ ಪದವಿ ಕಾಲೇಜು ಅತ್ಯಗತ್ಯ’

ಕರಾವಳಿಯಲ್ಲಿ ಕೃಷಿ ಪದವಿ ಕಾಲೇಜು ಇಲ್ಲದ ಕಾರಣ ಬ್ರಹ್ಮಾವರದಲ್ಲಿ ಕೃಷಿ ಪದವಿ ಕಾಲೇಜು ಸ್ಥಾಪಿಸುವ ಅಗತ್ಯ ಇದೆ. ಈಗಿರುವ ಕೃಷಿ ಕಾಲೇಜಿಗೆ ಸುಮಾರು 360 ಎಕ್ರೆ ಜಾಗ ಇದೆ. ಅದನ್ನು ಬಳಸಿಕೊಂಡು ಕಾಲೇಜು ಸ್ಥಾಪಿಸಬಹುದು ಎಂದು ಉಡುಪಿ ಜಿಲ್ಲಾ ಕೃಷಿಕ ಸಂಘದ ಕಾರ್ಯದರ್ಶಿ ರವೀಂದ್ರ ಗುಜ್ಜರಬೆಟ್ಟು ಹೇಳಿದರು. ಈ ಭಾಗದಲ್ಲಿ ಕೃಷಿ ಕಾಲೇಜು ಸ್ಥಾಪನೆಯಾದರೆ ಕೃಷಿ ಆಸಕ್ತರಿಗೆ ಹೆಚ್ಚಿನ ಅನುಕೂಲವಾಗಲಿದೆ. ಈ ಬಾಗಕ್ಕೆ ಸೂಕ್ತವಾಗಿರುವ ಬೆಳೆಗಳ ಬಗ್ಗೆ ಸಂಶೋಧನೆ ನಡೆಸಲೂ ಹೆಚ್ಚಿನ ಅವಕಾಶ ಸಿಗಬಹುದು ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.