ADVERTISEMENT

ಆಂಬುಲೆನ್ಸ್‌ ಸಮಸ್ಯೆ: ರೋಗಿಗಳಿಗೆ ಸಂಕಷ್ಟ

ತುರ್ತು ಸಂದರ್ಭದಲ್ಲಿ ಗಂಟೆಗಟ್ಟಲೆ ಕಾಯಬೇಕಾದ ಪರಿಸ್ಥಿತಿ: ಜನರ ಆರೋಪ

​ಪ್ರಜಾವಾಣಿ ವಾರ್ತೆ
Published 10 ಡಿಸೆಂಬರ್ 2025, 4:19 IST
Last Updated 10 ಡಿಸೆಂಬರ್ 2025, 4:19 IST
108 ಆಂಬುಲೆನ್ಸ್‌ 
108 ಆಂಬುಲೆನ್ಸ್‌    

ಉಡುಪಿ: ಜಿಲ್ಲೆಯಲ್ಲಿ ತುರ್ತು ಸಂದರ್ಭಗಳಲ್ಲಿ 108 ಆಂಬುಲೆನ್ಸ್‌ ಸೇವೆ ಸಮರ್ಪಕವಾಗಿ ಸಿಗದೆ ರೋಗಿಗಳು ಸಮಸ್ಯೆ ಅನುಭವಿಸುವಂತಾಗಿದೆ.

108 ಆಂಬುಲೆನ್ಸ್‌ಗೆ ತುರ್ತು ಸಂದರ್ಭದಲ್ಲಿ ಕರೆ ಮಾಡಿದರೆ ವಿಳಂಬವಾಗಿ ಬರುತ್ತಿರುವುದರಿಂದ ಆಂಬುಲೆನ್ಸ್‌ಗಳಿದ್ದೂ ರೋಗಿಗಳ ಉಪಯೋಗಕ್ಕಿಲ್ಲದಂತಾಗಿದೆ ಎಂದು ಜನರು ದೂರಿದ್ದಾರೆ.

ಈಚೆಗೆ ತೀವ್ರವಾಗಿ ಅಸ್ವಸ್ಥಗೊಂಡಿದ್ದ ಉದ್ಯಾವರದ ರೋಗಿಯೊಬ್ಬರನ್ನು ಸಾಮಾಜಿಕ ಕಾರ್ಯಕರ್ತ ವಿಷು ಶೆಟ್ಟಿ ಅಂಬಲಪಾಡಿ ಅವರು ಗೂಡ್ಸ್‌ ಟೆಂಪೊದಲ್ಲಿ ಆಸ್ಪತ್ರೆಗೆ ಕರೆದೊಯ್ದಿದ್ದರು.

ADVERTISEMENT

108 ಆಂಬುಲೆನ್ಸ್‌ ದಿನದ 24 ಗಂಟೆಯೂ ಸೇವೆ ನೀಡುವ ಉದ್ದೇಶವನ್ನು ಹೊಂದಿದೆ. ಆದರೆ ಅದು ಪಾಲನೆಯಾಗುತ್ತಿಲ್ಲ. ತುರ್ತು ಸಂದರ್ಭದಲ್ಲಿ ಆಂಬುಲೆನ್ಸ್ ಸಿಗದಂತಾಗಿದೆ ಎಂದು ಜನರು ದೂರಿದ್ದಾರೆ.

'108 ಆಂಬುಲೆನ್ಸ್‌ ಜಿಲ್ಲೆಯಲ್ಲಿ 18 ಇದ್ದರೂ ಆರು ಮಾತ್ರವೇ ಓಡಾಡುತ್ತಿವೆ. ಚಾಲಕ, ವೈದ್ಯಕೀಯ ಸಿಬ್ಬಂದಿ ಕೊರತೆಯಿಂದಾಗಿ ಅದರ ಸೇವೆ ಸಮರ್ಪಕವಾಗಿ ಸಿಗುತ್ತಿಲ್ಲ’ ಎಂದು ವಿಷು ಶೆಟ್ಟಿ ತಿಳಿಸಿದ್ದಾರೆ.

‘ಹಿಂದೆ 108 ಸಿಬ್ಬಂದಿ ಎರಡು ಪಾಳಿಯಲ್ಲಿ ಕೆಲಸ ಮಾಡುತ್ತಿದ್ದರು. ಈಗ ಮೂರು ಪಾಳಿ ಮಾಡಲಾಗಿದೆ. ಕೆಲವು ಪಾಳಿಯಲ್ಲಿ ಸಿಬ್ಬಂದಿ ಇರುವುದಿಲ್ಲ ಇದರಿಂದಾಗಿ ಸಮಸ್ಯೆಯಾಗುತ್ತಿದೆ’ ಎಂದೂ ಅವರು ತಿಳಿಸಿದ್ದಾರೆ.

‘ಇತರ ಸರ್ಕಾರಿ ಆಸ್ಪತ್ರೆಗಳಿಗೂ ಕರೆ ಮಾಡಿ’

‘108 ಆಂಬುಲೆನ್ಸ್‌ ವ್ಯವಸ್ಥೆಯಲ್ಲಿ ಸಿಬ್ಬಂದಿ ಕೊರತೆ ಇರುವುದು ನಿಜ. ಸಿಬ್ಬಂದಿಯನ್ನು ಒದಗಿಸುವಂತೆ ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಈಗಾಗಲೇ ನಾವು ಪತ್ರ ಬರೆದಿದ್ದೇವೆ. ಜನರು ತುರ್ತು ಸಂದರ್ಭದಲ್ಲಿ 108 ಆಂಬುಲೆನ್ಸ್‌ ಸಿಗದಿದ್ದರೆ ಹತ್ತಿರದ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಸರ್ಕಾರಿ ಆಸ್ಪತ್ರೆಗೆ ಅಲ್ಲಿನ ವೈದ್ಯಾಧಿಕಾರಿಗಳಿಗೆ ಕರೆ ಮಾಡಿ ಅಲ್ಲಿನ ಆಂಬುಲೆನ್ಸ್ ಅನ್ನು ಬಳಸಿಕೊಳ್ಳಬಹುದು’ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಬಸವರಾಜ್ ಜಿ ಹುಬ್ಬಳ್ಳಿ ತಿಳಿಸಿದರು.

‘ಶೀಘ್ರ ಸಮಸ್ಯೆ ಪರಿಹರಿಸಿ’

ಸಕಾಲಕ್ಕೆ 108 ಆಂಬುಲೆನ್ಸ್ ಸಿಗದಿರುವ ಕಾರಣಕ್ಕೆ ಜಿಲ್ಲಾಸ್ಪತ್ರೆಯಿಂದ ಹೆಚ್ಚಿನ ಚಿಕಿತ್ಸೆಗಾಗಿ ರೋಗಿಗಳನ್ನು ಮಂಗಳೂರಿನ ವೆನ್ಲಾಕ್‌ ಆಸ್ಪತ್ರೆಗೆ ಕರೆದೊಯ್ಯಲು ಸಮಸ್ಯೆಯಾಗುತ್ತಿದೆ. ಕಳೆದ ಒಂದು ವರ್ಷದಿಂದ ಸಮಸ್ಯೆ ಇದ್ದರೂ ಅದನ್ನು ಪರಿಹರಿಸಲು ಸಂಬಂಧಪಟ್ಟವರು ಮುಂದಾಗಿಲ್ಲ. ಇದರಿಂದ ಬಡ ರೋಗಿಗಳಿಗೆ ತೊಂದರೆಯಾಗಿದೆ. ಜಿಲ್ಲಾಡಳಿತವು 108 ಆಂಬುಲೆನ್ಸ್‌ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಪರಿಹರಿಸಬೇಕು ಎಂದು ವಿಷು ಶೆಟ್ಟಿ ಅಂಬಲಪಾಡಿ ಅವರು ಆಗ್ರಹಿಸಿದ್ದಾರೆ. 108 ಆಂಬುಲೆನ್ಸ್‌ ದಿನದ 24 ಗಂಟೆಯೂ ಕಾರ್ಯ ನಿರ್ವಹಿಸುವಂತಾಗಬೇಕು. ತುರ್ತು ಸಂದರ್ಭದಲ್ಲಿ ಕರೆ ಮಾಡಿದರೆ ಆಂಬುಲೆನ್ಸ್ ದೂರದ ಪ್ರದೇಶಗಳಿಂದ ಬರಬೇಕಾಗುತ್ತದೆ. ಇದರಿಂದ ರೋಗಿಗಳಿಗೆ ಹೆಚ್ಚಿನ ತೊಂದರೆಯಾಗುತ್ತದೆ ಎಂದು ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.