ADVERTISEMENT

ಸಮೀಕ್ಷಾ ಕಾರ್ಯದಿಂದ ಅನಾರೋಗ್ಯಪೀಡಿತರಿಗೆ ವಿನಾಯಿತಿ ನೀಡಿ: ಅಂಗನವಾಡಿ ನೌಕರರ ಧರಣಿ

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2025, 4:06 IST
Last Updated 30 ಸೆಪ್ಟೆಂಬರ್ 2025, 4:06 IST
ಅಂಗನವಾಡಿ ನೌಕರರ ಸಂಘದ ವತಿಯಿಂದ ಮಣಿಪಾಲದ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಧರಣಿ ನಡೆಯಿತು
ಅಂಗನವಾಡಿ ನೌಕರರ ಸಂಘದ ವತಿಯಿಂದ ಮಣಿಪಾಲದ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಧರಣಿ ನಡೆಯಿತು   

ಉಡುಪಿ: ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷಾ ಕಾರ್ಯದಿಂದ ಅನಾರೋಗ್ಯಪೀಡಿತ ಮಹಿಳೆಯರಿಗೆ ವಿನಾಯಿತಿ ನೀಡಬೇಕು ಎಂದು ಆಗ್ರಹಿಸಿ ಅಂಗನವಾಡಿ ನೌಕರರ ಸಂಘದ ವತಿಯಿಂದ ಮಣಿಪಾಲದ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಧರಣಿ ನಡೆಯಿತು.

ಅಂಗನವಾಡಿ ನೌಕರರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುಶೀಲಾ ನಾಡ ಮಾತನಾಡಿ, ಕೆಲವು ಅಂಗನವಾಡಿ ನೌಕರರು ಸಮಸ್ಯೆಗಳಿಂದಾಗಿ ಸಮೀಕ್ಷೆಯಿಂದ ವಿನಾಯಿತಿ ಕೇಳಿದರೂ ಜನಪ್ರತಿನಿಧಿ ಕಾಯ್ದೆಯಡಿ ವಜಾ ಮಾಡಲಾಗುವುದು ಎಂದು ಅಧಿಕಾರಿಗಳು ಬೆದರಿಕೆಯೊಡ್ಡುತ್ತಿದ್ದಾರೆ ಎಂದು ಆರೋಪಿಸಿದರು.

ಚುನಾವಣಾ ಆಯೋಗದ ಸುತ್ತೋಲೆಯಲ್ಲಿ ಮತಗಟ್ಟೆ ಅಧಿಕಾರಿ ಹಾಗೂ ಸಾಮಾಜಿಕ ಸಮೀಕ್ಷೆಗೆ ಸಿ ದರ್ಜೆ ನೌಕರರನ್ನು ನೇಮಿಸಿಕೊಳ್ಳಬೇಕು ಎಂದಿದ್ದರೂ ಸುತ್ತೋಲೆಯನ್ನು ಕೆಳ ಹಂತದ ಅಧಿಕಾರಿಗಳು ಕಡೆಗಣಿಸಿ ನೌಕರರನ್ನು ಜೈಲಿಗೆ ಕಳುಹಿಸುವ ಬೆದರಿಕೆಯೊಡ್ಡುತ್ತಿದ್ದಾರೆ ಎಂದರು.

ಇದರಿಂದ ಮಹಿಳೆಯರಿಗೆ ಮಾನಸಿಕ ಹಿಂಸೆಯಾಗಿದೆ. ಅಲ್ಲದೇ ಸಮೀಕ್ಷಾ ಕಾರ್ಯವನ್ನು ಸ್ಥಳೀಯವಾಗಿ ನೀಡದೇ ದೂರದ ಗ್ರಾಮಗಳಿಗೆ ನಿಯೋಜಿಸಿರುವುದು ಅಂಗನವಾಡಿ ನೌಕರರಿಗೆ ಸಮಸ್ಯೆಯಾಗಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕೂಡ ಮಹಿಳೆಯರನ್ನು ಮಾನವೀಯತೆ ಇಲ್ಲದೆ  ದುಡಿಸುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

ಹೆಚ್ಚುವರಿ ಜಿಲ್ಲಾಧಿಕಾರಿ ಧರಣಿ ಸ್ಥಳಕ್ಕೆ ಭೇಟಿ ನೀಡಿ, ಮನವಿ ಸ್ವೀಕರಿಸಿ ಸಿ ದರ್ಜೆಯ ನೌಕರರು ಜಿಲ್ಲೆಯಲ್ಲಿ ಕಡಿಮೆ ಇರುವುದರಿಂದ ಅಂಗನವಾಡಿ ನೌಕರರು ಸಮೀಕ್ಷೆಗೆ ಕೈಜೋಡಿಸಬೇಕು ಎಂದರು.

ಧರಣಿಯಲ್ಲಿ ಅಂಗನವಾಡಿ ನೌಕರರ ಸಂಘದ ಅಧ್ಯಕ್ಷೆ ಭಾರತಿ, ಯಶೋಧ ಕೆ., ಆಶಾಲತಾ, ಶಾಂತ, ಪ್ರೇಮ, ಪ್ರಮೀಳಾ ಉಡುಪಿ, ಜಯಲಕ್ಷ್ಮಿ,ಸರೋಜ, ಸರೋಜಿನಿ ಬ್ರಹ್ಮಾವರ ಪಾಲ್ಗೊಂಡಿದ್ದರು.

ಸಿಐಟಿಯು ರಾಜ್ಯ ಕಾರ್ಯದರ್ಶಿ ಸುರೇಶ್ ಕಲ್ಲಾಗರ, ಜಿಲ್ಲಾ ಅಧ್ಯಕ್ಷ ಶಶಿಧರ ಗೊಲ್ಲ, ಜಿಲ್ಲಾ ಕೋಶಾಧಿಕಾರಿ ಕವಿರಾಜ್ ಎಸ್. ಕಾಂಚನ್ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.