ಪ್ರಾಣಿಗಳನ್ನು ಸ್ಥಳಾಂತರಿಸುವ ಕಾರ್ಯಾಚರಣೆ ನಡೆಯಿತು.
ಬ್ರಹ್ಮಾವರ: ಸಾಲಿಗ್ರಾಮದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಪ್ರಾಣಿಪಾಲನ ಘಟಕಕ್ಕೆ ಜಿಲ್ಲಾಧಿಕಾರಿ ಸೂಚನೆ ಮೇರೆಗೆ ಅಧಿಕಾರಿಗಳು ದಾಳಿ ನಡೆಸಿ ಪ್ರಾಣಿಗಳನ್ನು ಸ್ಥಳಾಂತರಿಸಿದರು.
ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಈಚೆಗೆ ನಡೆದ ಉಡುಪಿ ಜಿಲ್ಲಾ ಪ್ರಾಣಿದಯಾ ಸಂಘದ ನಡಾವಳಿಯಂತೆ ಶನಿವಾರ ಪೇಟಾ ಇಂಡಿಯಾ ಸಂಸ್ಥೆಯ ದೂರಿನನ್ವಯ ಈ ಕ್ರಮಕೈಗೊಳ್ಳಲಾಗಿದೆ.
ಹಿಂದೊಮ್ಮೆ ಈ ಸಾಕಾಣಿಕೆ ಕೇಂದ್ರ ನಡೆಸುವವರ ವಿರುದ್ಧ ಕ್ರಮ ಕೈಗೊಳ್ಳಲಾಗಿತ್ತು. ಮುಂದೆ ಈ ರೀತಿ ಕಾರ್ಯ ನಿರ್ವಹಿಸದಂತೆ ಮಾಲೀಕರಾದ ಸುಧೀಂದ್ರ ಐತಾಳ ಕೆರೆಕಟ್ಟೆ ಅವರಿಗೆ ಎಚ್ಚರಿಕೆ ನೀಡಲಾಗಿತ್ತು. ಆದರೆ ಮತ್ತೆ ಹಿಂಸಾತ್ಮಕ ರೀತಿಯಲ್ಲಿ ಮತ್ತು ಶುಚಿತ್ವವಿಲ್ಲದೆ ನಾಯಿಗಳು, ಬೆಕ್ಕುಗಳು, ಸಂರಕ್ಷಿತ ವನ್ಯಜೀವಿಗಳು ಮತ್ತು ಅನಾರೋಗ್ಯಕರ ಆಕಳ ಕರುಗಳನ್ನು ಸಾಕುತ್ತಿರುವುದಾಗಿ ಪೇಟಾ ಸಂಸ್ಥೆಯವರು ದೂರಿನಲ್ಲಿ ತಿಳಿಸಿದ್ದರು.
ಅದರಂತೆ ಸ್ಥಳೀಯ ಪಶುವೈದ್ಯಾಧಿಕಾರಿಗಳು, ಪಟ್ಟಣ ಪಂಚಾಯಿತಿ, ಸಾಲಿಗ್ರಾಮ, ವಲಯ ಅರಣ್ಯಾಧಿಕಾರಿ, ವನ್ಯಜೀವಿ ವಿಭಾಗ ಹಾಗೂ ಸ್ಥಳೀಯ ಪೊಲೀಸ್ ಅಧಿಕಾರಿಗಳ ತಂಡ ಕೇಂದ್ರಕ್ಕೆ ಭೇಟಿ ನೀಡಿ ತನಿಖೆ ನಡೆಸಿದಾಗ ಪರವಾನಗಿ ಪಡೆದಿರುವುದು ಕಂಡುಬಂದಿರುವುದಿಲ್ಲ. ಈ ಕಾರಣಕ್ಕೆ ಅಲ್ಲಿದ್ದ ನಾಯಿಗಳು, ಬೆಕ್ಕುಗಳನ್ನು ಪೇಟಾ ಇಂಡಿಯಾ ಸಂಸ್ಥೆಯ ಪುನರ್ ವಸತಿ ಕೇಂದ್ರಗಳಿಗೆ, ಸಂರಕ್ಷಿತ ವನ್ಯಜೀವಿಗಳನ್ನು ಮಂಗಳೂರಿನ ಪಿಲಿಕುಳ ವನ್ಯಧಾಮಕ್ಕೆ ಹಾಗೂ ಅನಾರೋಗ್ಯ ಪೀಡಿತ ಜಾನುವಾರುಗಳನ್ನು ಗೋಶಾಲೆಗಳಿಗೆ ಹಸ್ತಾಂತರಿಸಲಾಯಿತು.
ಪ್ರಾಣಿಗಳನ್ನು ಸ್ಥಳಾಂತರಿಸುವ ವೇಳೆ ಮಾಲೀಕರಿಗೆ ಸರಿಯಾದ ನೋಟಿಸ್ ನೀಡಿಲ್ಲ ಎಂದು ಆರೋಪಿಸಿ ಸಾಮಾಜಿಕ ಕಾರ್ಯಕರ್ತ ದಿನೇಶ್ ಗಾಣಿಗ ಕೋಟ ಅವರು ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದರು. ಆದರೆ, ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡದೆ ಕ್ರಮ ಜರಗಲಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.