
ಉಡುಪಿ: ಮಾರ್ಚ್ 17ರಿಂದ 27ರವರೆಗೆ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಸೇನಾ ನೇಮಕಾತಿ ರ್ಯಾಲಿಯಲ್ಲಿ ಭಾಗವಹಿಸಲು ವಿವಿಧ ಜಿಲ್ಲೆಗಳಿಂದ 38,818 ಅಭ್ಯರ್ಥಿಗಳು ಆನ್ಲೈನ್ನಲ್ಲಿ ನೋಂದಾಯಿಸಿಕೊಂಡಿದ್ದರು. ಅವರಲ್ಲಿ 22,532 ಮಂದಿ ರ್ಯಾಲಿಯಲ್ಲಿ ಭಾಗವಹಿಸಿದ್ದರು ಎಂದು ಮಂಗಳೂರು ಬೆಟಾಲಿಯನ್ ಮುಖ್ಯಸ್ಥ ಕರ್ನಲ್ ದುಭಾಶ್ ಮಾಹಿತಿ ನೀಡಿದರು.
ಮಂಗಳವಾರ ಜಿಲ್ಲಾ ಕ್ರೀಡಾಂಗಣದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಸೇನಾ ನೇಮಕಾತಿ ರ್ಯಾಲಿ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಯ ನೆರವಿನೊಂದಿಗೆ ಯಶಸ್ವಿಯಾಗಿ ಮುಕ್ತಾಯವಾಗಿದೆ. ಸೇನೆ ಸೇರಲು ಬಂದಿದ್ದ ಯುವಕರಿಗೆ ರ್ಯಾಲಿಯಲ್ಲಿ ದೈಹಿಕ ಸಾಮರ್ಥ್ಯ ಪರೀಕ್ಷೆ ಹಾಗೂ ವೈದ್ಯಕೀಯ ಪರೀಕ್ಷೆ ನಡೆಸಿ ಅರ್ಹರನ್ನು ಮುಂದಿನ ಹಂತಕ್ಕೆ ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದರು.
ದೈಹಿಕ ಹಾಗೂ ವೈದ್ಯಕೀಯ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಮೇ 30ರಂದು ಲಿಖಿತ ಪರೀಕ್ಷೆ ನಡೆಸಲಾಗುವುದು. ಬಳಿಕ ಮೆರಿಟ್ ಆಧಾರದ ಮೇಲೆ ಸೇನೆಗೆ ನೇಮಕಾತಿ ಮಾಡಿಕೊಳ್ಳಲಾಗುವುದು ಎಂದು ದುಭಾಶ್ ಮಾಹಿತಿ ನೀಡಿದರು.
ಜಿಲ್ಲಾಧಿಕಾರಿ ಜಿ.ಜಗದೀಶ್ ಮಾತನಾಡಿ, ಸೇನಾ ನೇಮಕಾತಿ ರ್ಯಾಲಿಯಲ್ಲಿ ವಸತಿ ಹಾಗೂ ಊಟದ ವ್ಯವಸ್ಥೆ ಸಾಮಾನ್ಯವಾಗಿ ಇರುವುದಿಲ್ಲ. ಆದರೂ ಜಿಲ್ಲಾಡಳಿತ ದಾನಿಗಳ ನೆರವು ಪಡೆದು 6 ಕಡೆಗಳಲ್ಲಿ ರಾತ್ರಿ ತಂಗಲು ವ್ಯವಸ್ಥೆ ಮಾಡಲಾಗಿತ್ತು. ಕೆಇಬಿ ನೌಕರರ ಸಂಘ ಹಾಗೂ ಕೃಷ್ಣಮಠದಿಂದ ಉಪಾಹಾರ ಹಾಗೂ ಊಟದ ವ್ಯವಸ್ಥೆ ಮಾಡಲಾಗಿತ್ತು. ಶೌಚಾಲಯ ಹಾಗೂ ಕುಡಿಯುವ ನೀರಿನ ವ್ಯವಸ್ಥೆಯನ್ನು ಮಾಡಲಾಗಿತ್ತು.
ಆದರೆ, ಹೊರ ಜಿಲ್ಲೆಗಳಿಂದ ತಡರಾತ್ರಿ ನಗರಕ್ಕೆ ಬಂದಿದ್ದ ಕೆಲವು ಯುವಕರು ರಸ್ತೆ ಬದಿಯಲ್ಲಿ ಮಲಗಿದ್ದನ್ನು ಕಂಡು ಜಾಲತಾಣಗಳಲ್ಲಿ ಜಿಲ್ಲಾಡಳಿತದ ಕಾರ್ಯವೈಖರಿ ಬಗ್ಗೆ ನಕಾರಾತ್ಮಕ ಸುದ್ದಿಗಳನ್ನು ಹರಿಬಿಡಲಾಯಿತು. ನೇಮಕಾತಿ ರ್ಯಾಲಿಯಲ್ಲಿ ಭಾಗವಹಿಸಿದ್ದ ಅಭ್ಯರ್ಥಿಗಳು ಹಾಗೂ ಸೇನೆಯ ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದರೂ ಕೆಲವರು ಸುಳ್ಳು ಸುದ್ದಿ ಹರಿಬಿಟ್ಟರು ಎಂದು ಜಿಲ್ಲಾಧಿಕಾರಿ ಬೇಸರ ವ್ಯಕ್ತಪಡಿಸಿದ್ದರು.
ಉಡುಪಿ, ದಕ್ಷಿಣ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಗಳಿಂದ 2 ಸಾವಿರಕ್ಕೂ ಅಭ್ಯರ್ಥಿಗಳು ರ್ಯಾಲಿಯಲ್ಲಿ ಭಾಗವಹಿಸಿದರೆ, ಉತ್ತರ ಕರ್ನಾಟಕ ಭಾಗದ ಜಿಲ್ಲೆಗಳಿಂದ 20,000ಕ್ಕೂ ಹೆಚ್ಚು ಅಭ್ಯರ್ಥಿಗಳು ಭಾಗವಹಿಸಿದ್ದರು. ಕರಾವಳಿಯ ಯುವಕರಲ್ಲಿ ಸೇನೆ ಸೇರುವ ಆಸಕ್ತಿ ಹೆಚ್ಚಾಗಬೇಕು ಎಂಬ ಕಾರಣದಿಂದ ಈ ಬಾರಿ ಉಡುಪಿಯಲ್ಲಿ ರ್ಯಾಲಿ ಮಾಡಲಾಯಿತು ಎಂದು ಜಿ.ಜಗದೀಶ್ ತಿಳಿಸಿದರು.
ನಗರಸಭೆ ಪೌರಾಯುಕ್ತ ಉದಯ್ ಶೆಟ್ಟಿ, ಕ್ರೀಡಾ ಮತ್ತು ಯುವ ಸಬಲೀಕರಣ ಇಲಾಖೆ ಸಹಾಯಕ ನಿರ್ದೇಶಕ ರೋಶನ್ ಶೆಟ್ಟಿ ಇದ್ದರು.
‘ಹೆಚ್ಚುತ್ತಿದೆ ಸೋಂಕು: ಎಚ್ಚರವಿರಲಿ’
ಮಣಿಪಾಲದ ಎಂಐಟಿಯಲ್ಲಿ 1,000ಕ್ಕೂ ಹೆಚ್ಚು ಸೋಂಕಿತರಿದ್ದು, ಶೇ 15ರಷ್ಟು ಪಾಸಿಟಿವಿಟಿ ದರ ಕಂಡುಬಂದಿದೆ. ಜಿಲ್ಲೆಯಲ್ಲಿ ಪಾಸಿಟಿವ್ ಪ್ರಮಾಣ ಶೇ 2ರಷ್ಟಿದೆ. ಜನವರಿಯಲ್ಲಿ ಶೇ .1ರಷ್ಟಿದ್ದ ಪಾಸಿಟಿವ್ ದರ, ಫೆಬ್ರುವರಿಯಲ್ಲಿ ಶೇ 1ಕ್ಕೆ, ಮಾರ್ಚ್ನಲ್ಲಿ ಶೇ 2ಕ್ಕೆ ಹೆಚ್ಚಾಗಿದೆ. ಸಾರ್ವಜನಿಕರು ಎಚ್ಚರ ತಪ್ಪಿದರೆ ಸೋಂಕು ಹೆಚ್ಚಾಗಲಿದೆ. ಖಾಸಗಿ, ಸರ್ಕಾರಿ, ಅನುದಾನಿತ ಶಿಕ್ಷಣ ಸಂಸ್ಥೆಗಳು ಕೋವಿಡ್ ಮಾರ್ಗಸೂಚಿ ಪಾಲನೆ ಮಾಡದಿದ್ದರೆ ಕಠಿಣ ಕ್ರಮ ಜರುಗಿಸಲಾಗುವುದು. ಜ್ವರ, ಶೀತ, ಕೆಮ್ಮು ಸೇರಿದಂತೆ ಸೋಂಕಿನ ಲಕ್ಷಣಗಳಿದ್ದರೆ ಮಕ್ಕಳನ್ನು ಶಾಲೆಗೆ ಸೇರಿಸಿಕೊಳ್ಳಬಾರದು ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಹೇಳಿದರು.
‘ಮೂರು ಕಂಟೈನ್ಮೆಂಟ್ ವಲಯ’
ಸೋಂಕು ಹೆಚ್ಚು ಕಂಡುಬಂದಿರುವ ಎಂಐಟಿ, ಕುಂಜಾರುಗಿರಿ ಶಾಲೆ ಹಾಗೂ ಮಣಿಪಾಲದ ಮಾಂಡೊವಿ ಎಮರಾಲ್ಡ್ ಅಪಾರ್ಟ್ಮೆಂಟ್ ಅನ್ನು ಕಂಟೈನ್ಮೆಂಟ್ ವಲಯಗಳನ್ನಾಗಿ ಮಾಡಲಾಗಿದೆ. ಮಣಿಪಾಲದಲ್ಲಿ ವ್ಯಾಪಾರ, ವ್ಯವಹಾರ ಮಾಡುವಾಗ ಸಾರ್ವಜನಿಕರು ಸೋಂಕಿನ ಬಗ್ಗೆ ಜಾಗ್ರತೆ ವಹಿಸಬೇಕು. ಕೇರಳ ಹಾಗೂ ಮಹಾರಾಷ್ಟ್ರದಿಂದ ಬರುವವರು ಕಡ್ಡಾಯವಾಗಿ ಕೋವಿಡ್ ನೆಗೆಟಿವ್ ವರದಿ ಸಲ್ಲಿಸಬೇಕು. ಉಳಿದ ರಾಜ್ಯಗಳಿಂದ ಬರುವವರಿಗೆ ಅನ್ವಯಿಸುವುದಿಲ್ಲ.
–ಜಿ.ಜಗದೀಶ್, ಜಿಲ್ಲಾಧಿಕಾರಿ,
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.