ADVERTISEMENT

ಉಡುಪಿ: ಕರ್ತವ್ಯ ಸ್ಥಗಿತಗೊಳಿಸಿ ಆಶಾ ಕಾರ್ಯಕರ್ತೆಯರ ಪ್ರತಿಭಟನೆ

₹ 12000 ಗೌರವ ಧನಕ್ಕೆ ಬೇಡಿಕೆ

​ಪ್ರಜಾವಾಣಿ ವಾರ್ತೆ
Published 10 ಜುಲೈ 2020, 14:09 IST
Last Updated 10 ಜುಲೈ 2020, 14:09 IST
ಹಲವು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ನೇತೃತ್ವದಲ್ಲಿ ಶುಕ್ರವಾರ ಜಿಲ್ಲಾ ಆರೋಗ್ಯಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲಾಯಿತು.
ಹಲವು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ನೇತೃತ್ವದಲ್ಲಿ ಶುಕ್ರವಾರ ಜಿಲ್ಲಾ ಆರೋಗ್ಯಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲಾಯಿತು.   

ಉಡುಪಿ: ಮಾಸಿಕ ₹ 12,000 ಗೌರವ ಧನ ನೀಡಬೇಕು. ಕೋವಿಡ್‌ ವಿರುದ್ಧದ ಹೋರಾಟಕ್ಕೆ ಅಗತ್ಯ ಸುರಕ್ಷತಾ ಸಾಮಾಗ್ರಿಗಳನ್ನು ಒದಗಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ನೇತೃತ್ವದಲ್ಲಿ ಶುಕ್ರವಾರ ಜಿಲ್ಲಾ ಆರೋಗ್ಯಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.

ಕೊರೊನಾ ವಿರುದ್ಧದ ಹೋರಾಟದಲ್ಲಿ ಆಶಾ ಕಾರ್ಯಕರ್ತೆಯರ ಶ್ರಮ ಅಪಾರ ಎಂದು ಕೇಂದ್ರ ಸರ್ಕಾರ ಮೆಚ್ಚುಗೆಸ ಸೂಚಿಸಿದೆ. ಚಪ್ಪಾಳೆ, ಹೂಮಳೆ ಸುರಿಸಿ ಅಭಿನಂದನೆ ಸಲ್ಲಿಸಿದೆ. ಇದರ ಬಗ್ಗೆ ಸಂತಸವಿದೆ; ಆದರೆ, ಆಶಾ ಕಾರ್ಯಕರ್ತೆಯರ ನ್ಯಾಯಯುತ ಬೇಡಿಕೆಗಳನ್ನು ಮಾತ್ರ ಈಡೇರಿಸದಿರುವುದು ನೋವು ತಂದಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕೊರೊನಾ ಸೋಂಕು ತಡೆಯಲು ಕಾರ್ಯಕರ್ತೆಯರು ಹಗಲಿರುಳು ಶ್ರಮಿಸುತ್ತಿದ್ದಾರೆ. ಆದರೂ ಸರಿಯಾದ ವೇತನ ಸಿಗುತ್ತಿಲ್ಲ. ಸೋಂಕಿನ ವಿರುದ್ಧ ಸೂಕ್ತ ರಕ್ಷಣೆಯೂ ಇಲ್ಲ, ಸಾಫ್ಟ್‌ವೇರ್ ಅವ್ಯವಸ್ಥೆಯಿಂದ ಸಮಸ್ಯೆ ಎದುರಿಸುವಂತಾಗಿದೆ. ದುಡಿತಕ್ಕೆ ಸಮಾನ ವೇತನ ಸಿಗದೆ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ. ಸರ್ಕಾರ ಕೂಡಲೇ ಗೌರವಧನ ಹಾಗೂ ಪ್ರೋತ್ಸಾಹಧನವನ್ನು ಬಿಡುಗಡೆ ಮಾಡಬೇಕು. ಸೇವೆಗೆ ಪ್ರತಿಯಾಗಿ ಕನಿಷ್ಠ ₹ 12,000 ವೇತನ ನಿಗದಿಪಡಿಸಬೇಕು ಎಂದು ಒತ್ತಾಯಿಸಿದರು.

ADVERTISEMENT

ಆಶಾ ಕಾರ್ಯಕರ್ತೆಯರು ಜೀವವನ್ನು ಪಣಕ್ಕಿಟ್ಟು ನಿತ್ಯ ಸೋಂಕಿನ ವಿರುದ್ಧ ಸೆಣೆಸುತ್ತಿದ್ದಾರೆ. ಸೋಂಕಿತರ ನಡುವೆಯೇ ಕೆಲಸ ಮಾಡುತ್ತಿದ್ದು, ನಮ್ಮ ಆರೋಗ್ಯದ ರಕ್ಷಣೆಯ ಜವಾಬ್ದಾರಿ ಸರ್ಕಾರದ್ದು. ಸೋಂಕಿನಿಂದ ರಕ್ಷಿಸಿಕೊಳ್ಳಲು ಅಗತ್ಯ ಸುರಕ್ಷತಾ ಸಾಮಾಗ್ರಿಗಳನ್ನು ಕಾರ್ಯಕರ್ತೆಯರಿಗೆ ಒದಗಿಸಬೇಕು ಎಂದು ಆಗ್ರಹಿಸಿದರು.

ಈಗಾಗಲೇ ಹಲವು ಬಾರಿ ಸರ್ಕಾರಕ್ಕೆ ಮನವಿ ಮಾಡಿದರೂ ಪ್ರಯೋಜನವಾಗದ ಕಾರಣ ಅನಿವಾರ್ಯವಾಗಿ ಆರೋಗ್ಯ ಸೇವೆಯನ್ನು ಸ್ಥಗಿತಗೊಳಿಸಿ ಅನಿರ್ಧಿಷ್ಟಾವಧಿ ಹೋರಾಟ ಆರಂಭಿಸಿದ್ದೇವೆ. ಸರ್ಕಾರ ಕೂಡಲೇ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಈ ಸಂದರ್ಭ ಜಿಲ್ಲಾ ಆರೋಗ್ಯಾಧಿಕಾರಿಗೆ ಬೇಡಿಕೆಗಳ ಮನವಿ ಸಲ್ಲಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.