
ಉಡುಪಿ: ಪತಿ ಬಿಟ್ಟುಹೋದ ಆಸ್ತಿಯನ್ನು ಮಕ್ಕಳಿಗೆ ಸಮನಾಗಿ ಹಂಚಿದ್ದರೂ, ತನ್ನ ಪಾಲಿಗೆ ಬಂದಿದ್ದ ಆಸ್ತಿಯನ್ನೂ ಮಕ್ಕಳು ಲಪಟಾಯಿಸಿದ್ದಾರೆ ಎಂದು 85 ವರ್ಷದ ಮೋಂತಿನ್ ಡಿಸಿಲ್ವಾ ಆರೋಪಿಸಿದರು.
ಸೋಮವಾರ ವೈಕುಂಠ ಬಾಳಿಗಾ ಕಾನೂನು ಕಾಲೇಜಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಪಾಲಿಗೆ ಬಂದ ಆಸ್ತಿಯನ್ನು ಪಡೆದಮೇಲೂ ತೃಪ್ತರಾಗದ ಮಕ್ಕಳು, ನನ್ನ ಹೆಸರಿಗೆ ಬಂದಿದ್ದ ಆಸ್ತಿಯನ್ನು ಜಂಟಿ ಹೆಸರಿಗೆ ವರ್ಗಾಯಿಸಿಕೊಂಡಿದ್ದಾರೆ. ಇದರಿಂದ ಜೀವನ ನಿರ್ವಹಣೆ ಕಷ್ಟವಾಗಿದೆ’ ಎಂದು ಅಳಲು ತೋಡಿಕೊಂಡರು.
ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನದ ಅಧ್ಯಕ್ಷ ಡಾ.ರವೀಂದ್ರನಾಥ್ ಶಾನುಭಾಗ್ ಮಾತನಾಡಿ, ದಕ್ಷಿಣ ಕನ್ನಡ ಜಿಲ್ಲೆಯ ಕಲ್ಲಮಂಡ್ಕೂರು ಗ್ರಾಮದ ಮೋಂತಿನ್ ಡಿಸಿಲ್ವ ಅವರು ತಮಗಾದ ಅನ್ಯಾಯದ ವಿರುದ್ಧ 2018ರಲ್ಲಿ ಮಂಗಳೂರಿನ ಹಿರಿಯ ನಾಗರಿಕರ ನ್ಯಾಯ ಮಂಡಳಿಗೆ ದೂರು ನೀಡಿದ್ದರು. ಬಳಿಕ, ಐವರು ಮಕ್ಕಳು ತಲಾ ₹ 2,000 ಮಾಶಾಸನವಾಗಿ ನೀಡುವಂತೆ ಆದೇಶ ನೀಡಲಾಗಿತ್ತು. ಆದೇಶ ನೀಡಿ 2 ವರ್ಷ ಕಳೆದರೂ ಮಕ್ಕಳು ಮಾಸಾಶನ ನೀಡುತ್ತಿಲ್ಲ. ದಿನನಿತ್ಯದ ಖರ್ಚುಗಳಿಗೂ ಇತರರ ಮುಂದೆ ಕೈಚಾಚಬೇಕಾದ ಪರಿಸ್ಥಿತಿ ಮೋಂತಿನ್ ಡಿಸಿಲ್ವಾ ಅವರಿಗೆ ಬಂದಿದೆ ಎಂದರು.
‘2006ರಲ್ಲಿ ಮೋಂತಿನ್ ಡಿಸಿಲ್ವಾ ಅವರ ಪತಿ ಬ್ಯಾಪ್ಟಿಸ್ಟ್ ಡಿಸಿಲ್ವ ನಿಧನರಾದ ಬಳಿಕ 6.25 ಎಕರೆ ಜಮೀನು ಹಾಗೂ ಮನೆಯನ್ನು 2009ರಲ್ಲಿ ವಿಭಾಗ ಪತ್ರದ ಮೂಲಕ ಮಕ್ಕಳಿಗೆ ಹಂಚಲಾಯಿತು. ಮಕ್ಕಳ ಹೆಸರಿಗೆ ಖಾತೆಯೂ ಆಯಿತು. ಆದರೆ, ತಾಯಿ ಮೋಂತಿನ್ ಪಾಲಿಗೆ ಬಂದ 2.25 ಎಕರೆ ಜಮೀನಿನ ಹಕ್ಕುಪತ್ರದಲ್ಲಿ ಮಾತ್ರ ಮಕ್ಕಳೂ ಜಂಟಿ ಹಕ್ಕುದಾರರು ಎಂದು ವಿಭಾಗ ಪತ್ರ ಮಾಡಿಸಲಾಗಿದೆ. ಅಕ್ಷರ ಜ್ಞಾನವಿಲ್ಲದ ತಾಯಿಗೆ ವಂಚನೆಯಾಗಿದೆ’ ಎಂದು ಆರೋಪಿಸಿದರು.
‘ತನ್ನ ಪಾಲಿನ ಆಸ್ತಿ ಹಿಂದಿರುಗಿಸಬೇಕು ಎಂದು ಮಂಗಳೂರಿನ ಹಿರಿಯ ನಾಗರಿಕರ ಸಹಾಯವಾಣಿ ಕೇಂದ್ರಕ್ಕೆ ಮನವಿ ಸಲ್ಲಿಸಿ ಪೊಲೀಸ್ ಠಾಣೆಗೂ ದೂರು ನೀಡಿದ್ದಾರೆ. ಬಳಿಕ ತಪ್ಪೊಪ್ಪಿಕೊಂಡ ಮಕ್ಕಳು ಜಮೀನು ಹಿಂದಿರುಗಿಸುವುದಾಗಿ ಲಿಖಿತ ಹೇಳಿಕೆ ನೀಡಿ, ಈಗ ಮಾತು ತಪ್ಪಿದ್ದಾರೆ. ಇದರಿಂದ ನೊಂದ ಮೋಂತಿಮ್ಮ 2018ರಲ್ಲಿ ಮಂಗಳೂರಿನ ಹಿರಿಯ ನಾಗರಿಕರ ನ್ಯಾಯ ಮಂಡಳಿಗೆ ದೂರು ಸಲ್ಲಿಸಿದ್ದು, ಪ್ರತಿ ತಿಂಗಳು ಮಕ್ಕಳು ತಲಾ ₹ 2000 ಕೊಡುವಂತೆ ನ್ಯಾಯಮಂಡಳಿ ಆದೇಶಿಸಿದೆ. ಆದರೂ ಇದುವರೆಗೂ ಆದೇಶ ಪಾಲನೆಯಾಗಿಲ್ಲ’ ಎಂದು ತಿಳಿಸಿದರು.
ಮೂವರು ಹೆಣ್ಣುಮಕ್ಕಳು ನ್ಯಾಯ ಮಂಡಳಿಯ ಅಧ್ಯಕ್ಷರಾದ ಸಹಾಯಕ ಆಯುಕ್ತರಿಗೆ ಪತ್ರ ಬರೆದು ‘ತಾಯಿಗೆ ಮಾಶಾಸನ ನೀಡುವಂತೆ ನೋಟಿಸ್‌ಗಳು ಬರುತ್ತಿದ್ದು, ಮಾನಸಿಕವಾಗಿ ಕಿರಿಕಿರಿ ಉಂಟಾಗಿದೆ. ತಾಯಿಯ ಪೋಷಣೆಗೆ ಹಣ ಕೊಡುವುದು ಅಸಾಧ್ಯ ಎಂದು ಲಿಖಿತವಾಗಿ ಉತ್ತರಿಸಿದ್ದಾರೆ. ಕೂಡಲೇ ಜಿಲ್ಲಾಧಿಕಾರಿ ಪ್ರಕರಣದಲ್ಲಿ ಮಧ್ಯೆ ಪ್ರವೇಶಿಸಿ ನೊಂದ ಮೋಂತಿಯಮ್ಮನಿಗೆ ನ್ಯಾಯ ಒಗಿಸಬೇಕು. ಅವರ ಪಾಲಿನ ಆಸ್ತಿಯನ್ನು ಮರಳಿಸುವಂತೆ ಆದೇಶಿಸಬೇಕು ಎಂದು ಎಂದು ರವೀಂದ್ರನಾಥ್ ಶಾನುಭಾಗ್ ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.