ಉಡುಪಿ: ತುಳುನಾಡು ತನ್ನ ಜನರನ್ನು ತನ್ನದೇ ಆದ ಸಂಪ್ರದಾಯ, ಆಚರಣೆಗಳು, ಸಂಸ್ಕೃತಿಯ ಮೂಲಕ ಒಗ್ಗೂಡಿಸುತ್ತದೆ ಎಂದು ಮಾಹೆಯ ಸಹ ಕುಲಾಧಿಪತಿ ಎಚ್.ಎಸ್.ಬಲ್ಲಾಳ್ ಹೇಳಿದರು.
ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ವತಿಯಿಂದ ಕೆಎಂಸಿಯ ಡಾ.ಟಿ.ಎಂ.ಎ ಪೈ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಆಟಿದ ತುಳು ಪರ್ಬ ಉದ್ಘಾಟಿಸಿ ಅವರು ಮಾತನಾಡಿ, ಆಟಿದ ತುಳು ಪರ್ಬ ಆಚರಣೆಯು ತುಳುನಾಡಿನ ಶ್ರೀಮಂತ ಸಾಂಸ್ಕೃತಿಕ ಪರಂಪರೆಗೆ ಸಾಕ್ಷಿಯಾಗಿದೆ ಎಂದರು.
ಮಾಹೆ ಸಿಒಒ ರವಿರಾಜ ಎನ್.ಎಸ್ ಮಾತನಾಡಿ, ಪ್ರಾದೇಶಿಕ ಸಂಸ್ಕೃತಿಯನ್ನು ಉತ್ತೇಜಿಸುವಲ್ಲಿ ಮಾಹೆಯ ಪಾತ್ರ ಹಿರಿದು. ಯಕ್ಷಗಾನ ಕೇಂದ್ರ, ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರದಂತಹ ಪ್ರಾದೇಶಿಕ ಸಂಪನ್ಮೂಲ ಕೇಂದ್ರಗಳ ಉಪಕ್ರಮಗಳ ಮೂಲಕ ತುಳುನಾಡಿನ ಸಂಪ್ರದಾಯಗಳನ್ನು ದಾಖಲಿಸಲು, ಪ್ರಸಾರ ಮಾಡಲು ನಾವು ಬದ್ಧರಾಗಿದ್ದೇವೆ ಎಂದರು.
ಮಾಹೆಯ ಅಂತರರಾಷ್ಟ್ರೀಯ ಸಹಯೋಗದ ನಿರ್ದೇಶಕ ಕರುಣಾಕರ ಕೋಟೆಗಾರ್ ಎ. ಮಾತನಾಡಿ, ತುಳು ಪರ್ಬವು ತುಳುನಾಡನ್ನು ವ್ಯಾಖ್ಯಾನಿಸುವ ಸಾಂಸ್ಕೃತಿಕ ವೈವಿಧ್ಯತೆ, ಏಕತೆಯ ಆಚರಣೆ ಎಂದರು.
ಉದ್ಘಾಟನೆ ಬಳಿಕ ಮಣಿಪಾಲದ ಮಾಧವ ಕೃಪಾ ಶಾಲೆಯ ವಿದ್ಯಾರ್ಥಿ ಧೃತಿ ಶೆಟ್ಟಿ ತುಳು ಭಾಷೆಯಲ್ಲಿ ಭಾಷಣ ಮಾಡಿದರು. ಚಿತ್ರಕಲೆ ಸ್ಪರ್ಧೆ, ತುಳು ಜಾನಪದ ಸಮೂಹ ನೃತ್ಯ ಸ್ಪರ್ಧೆ, ಸಾಂಪ್ರದಾಯಿಕ ಕಲೆ, ಕರಕುಶಲ ಪ್ರದರ್ಶನ ನಡೆಯಿತು. ಪ್ರವೀಣ್ ಶೆಟ್ಟಿ ಸ್ವಾಗತಿಸಿದರು. ಶೃತಿ ಶೆಟ್ಟಿ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.