
ಕಾಪು (ಪಡುಬಿದ್ರಿ): ಇಲ್ಲಿಗೆ ಸಮೀಪದ ಮಲ್ಲಾರು ಮಜೂರಿನ ಬದ್ರಿಯಾ ಜುಮಾ ಮಸೀದಿಯ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ, ‘ನೋಡ ಬನ್ನಿ ನಮ್ಮ ಮಸೀದಿ’ ವಿನೂತನ ಕಾರ್ಯಕ್ರಮ ಫೆ. 1ರಂದು ಜರುಗಲಿದೆ.
ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿ ನೀಡಿದ ಮಸೀದಿ ಸಮಿತಿಯ ಅಧ್ಯಕ್ಷ ಎಂ. ಫಾರೂಕ್ ಉಮ್ಮರಬ್ಬ ಚಂದ್ರನಗರ ಅವರು, ನವೀಕೃತಗೊಂಡ ಮಸೀದಿ, ಅಪೂರ್ವ ಕೆತ್ತನೆಯ ಪ್ರವೇಶ ದ್ವಾರ, ವಿಶಾಲವಾದ ಸೋಲಾರ್ ಅಳವಡಿಕೆ, ಮಸೀದಿ ಅಂಗಳ ಪ್ರವೇಶದ ಮುಖ್ಯದ್ವಾರ, ತಡೆಗೋಡೆ, ಅಡುಗೆ ಕೋಣೆ, ದಫನ ಭೂಮಿ ಅಭಿವೃದ್ಧಿ ಮುಂತಾದ ಹತ್ತಾರು ಕಾಮಗಾರಿಗಳ ಉದ್ಘಾಟನೆ ನಡೆಯಲಿದೆ. ಬೆಳಿಗ್ಗೆ 10.30ಕ್ಕೆ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ. ಮಧ್ಯಾಹ್ನ 1ರಿಂದ ಸಂಜೆ 7ರವರೆಗೆ ಸರ್ವಧರ್ಮೀಯರ ಮಸೀದಿ ಸಂದರ್ಶನ ನೋಡ ಬನ್ನಿ ನಮ್ಮ ಮಸೀದಿ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.
ಉದ್ಘಾಟನಾ ಕಾರ್ಯಕ್ರಮದಲ್ಲಿ ಸೈಯ್ಯದ್ ಕೆ.ಎಸ್. ಆಡಕೋಯ ತಂಙಳ್ ಕುಂಬೋಳ್, ಜಿಲ್ಲಾ ಸಂಯುಕ್ತ ಖಾಝಿ ಝೈನುಲ್ ಉಲಮಾ ಮಾಣಿ ಉಸ್ತಾದ್, ಸಹಾಯಕ ಖಾಝಿ ಬಿ.ಕೆ. ಅಬ್ದುರ್ ರಹ್ಮಾನ್ ಮದನಿ ಮೂಳೂರು, ಕಾಪು ಖಾಝಿ ಪಿ.ಬಿ. ಅಹ್ಮದ್ ಮುಸ್ಲಿಯಾರ್, ನೌಫಾಲ್ ಕಳಸ, ಧಾರ್ಮಿಕ, ಸಾಮಾಜಿಕ, ರಾಜಕೀಯ ಮುಖಂಡರು ಭಾಗವಹಿಸುವರು ಎಂದರು.
ಹಲವು ವರ್ಷಗಳ ಇತಿಹಾಸ ಹೊಂದಿರುವ ಪುರಾತನ ಮಸೀದಿಗಳಲ್ಲಿ ಒಂದಾದ ಈ ಮಸೀದಿಯನ್ನು ಗುಡ್ಡೆ ಮಸೀದಿ, ಇಲಿಯಾಸ್ ನಬಿ ಮಸೀದಿ ಎಂದು ಕರೆಯಲಾಗುತ್ತಿತ್ತು. ಪುನರ್ ನಿರ್ಮಾಣಗೊಂಡ ಬಳಿಕ ಬದ್ರಿಯಾ ಜುಮಾ ಮಸೀದಿ ಎಂದು ಹೆಸರು ಬದಲಾಯಿಸಲಾಯಿತು ಎಂದು ಹೇಳಿದರು.
ಮಸೀದಿಯ ಖತೀಬ್ ಎಂ.ಕೆ. ಅಬ್ದುರ್ ರಶೀದ್ ಸಖಾಫಿ, ಕಾರ್ಯದರ್ಶಿ ಅಶ್ರಫ್ ಕರಂದಾಡಿ, ಜತೆ ಕಾರ್ಯದರ್ಶಿ ರಜಬ್ ಕರಂದಾಡಿ, ರಝಾಕ್ ಕೊಪ್ಪಲತೋಟ, ರಝಾಕ್ ಕೊಪ್ಪ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.