ADVERTISEMENT

ಬೈಂದೂರು: ಬೀದಿದೀಪಗಳ ಅಸಮರ್ಪಕ ನಿರ್ವಹಣೆ

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2025, 3:56 IST
Last Updated 2 ಸೆಪ್ಟೆಂಬರ್ 2025, 3:56 IST
ಕೊಲ್ಲೂರು ರಸ್ತೆ ತಗ್ಗರ್ಸೆಯಲ್ಲಿ ಪ್ಯಾನಲ್ ಇಲ್ಲದೇ ಹಾಳಾಗಿರುವ ಸೋಲಾರ್‌ ದೀಪ
ಕೊಲ್ಲೂರು ರಸ್ತೆ ತಗ್ಗರ್ಸೆಯಲ್ಲಿ ಪ್ಯಾನಲ್ ಇಲ್ಲದೇ ಹಾಳಾಗಿರುವ ಸೋಲಾರ್‌ ದೀಪ   

ಬೈಂದೂರು: ತಾಲ್ಲೂಕಿನ ವಿವಿಧ ಗ್ರಾಮ ಪಂಚಾಯಿತಿಗಳ ವತಿಯಿಂದ ಹಿಂದೆ ಹಲವು ಕಡೆ ಸೋಲಾರ್ ಬೀದಿ ದೀಪಗಳನ್ನು ಅಳವಡಿಸಲಾಗಿತ್ತು. ಈಗ ಬೀದಿದೀಪಗಳು,  ಪ್ಯಾನಲ್‌ಗಳು, ಬ್ಯಾಟರಿಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡದೆ ಇರುವುದರಿಂದ ಹೆಚ್ಚಿನ ಕಡೆ ದೀಪಗಳು ಉರಿಯದೆ ಊಟಕ್ಕಿಲ್ಲದ ಉಪ್ಪಿನಕಾಯಿಯಂತಾಗಿದೆ.

ಸೋಲಾರ್‌ ಬೀದಿದೀಪದ ಟೆಂಡರ್‌ ವಹಿಸಿಕೊಂಡ ಸಂಸ್ಥೆ, ಪಂಚಾಯಿತಿಗಳು ಸಮರ್ಪಕವಾಗಿ ನಿರ್ವಹಣೆ ಮಾಡುತ್ತಿಲ್ಲ. ಬೀದಿದೀಪಗಳ ಪ್ಯಾನಲ್ ಮೇಲಿರುವ ಧೂಳು ತೆಗೆಯುವುದು, ಪ್ಯಾನಲ್ ಒಳಗೆ ನೀರು ಹೋಗಿದ್ದರೆ ತೆಗೆದು ಸ್ವಚ್ಛಗೊಳಿಸುತ್ತಿಲ್ಲ. ಬ್ಯಾಟರಿ ಸಮರ್ಪಕವಾಗಿ ಚಾರ್ಜ್ ಆಗುತ್ತಿದೆಯೇ ಎಂಬುದನ್ನು ಆಗಿಂದಾಗ್ಗೆ ಪರಿಶೀಲಿಸುತ್ತಿಲ್ಲ. ಇದರಿಂದ ಜನರಿಗೆ ತೊಂದರೆಯಾಗುತ್ತಿದೆ. 

ಬೈಂದೂರು ಪಟ್ಟಣ ಪಂಚಾಯಿತಿ ರಚನೆಯಾಗುವ ಮುಂಚೆ ಬೈಂದೂರು, ಪಡುವರಿ, ಯಡ್ತರೆ, ತಗ್ಗರ್ಸೆ ಪಂಚಾಯಿತಿಗಳು ಕೆಲವು ಯೋಜನೆಗಳ ಮೂಲಕ ತಮ್ಮ ವ್ಯಾಪ್ತಿಯ ಹಲವೆಡೆ ಸೋಲಾರ್‌ ಬೀದಿದೀಪ ಅಳವಡಿಸಿದ್ದವು. ಪಟ್ಟಣ ಪಂಚಾಯಿತಿ ರಚನೆ ಬಳಿಕ ಪಂಚಾಯಿತಿಗಳು ಅವುಗಳ ಸಮರ್ಪಕ ಮಾಹಿತಿ ನೀಡಿಲ್ಲ ಎಂಬುದು ಅಧಿಕಾರಿಗಳ ಆರೋಪ.

ADVERTISEMENT

2019–20ನೇ ಸಾಲಿನ 14ನೇ ಹಣಕಾಸು ಯೋಜನೆಯ ₹5.67 ಲಕ್ಷ ವೆಚ್ಚದಲ್ಲಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ 28 ಸೋಲಾರ್‌ ಬೀದಿದೀಪಗಳನ್ನು ಮಂಗಳೂರಿನ ಸನ್‌ಲೈಟ್‌ ಲೂಮಿನಸ್‌ ಸಂಸ್ಥೆ ಸ್ಥಾಪಿಸಿತ್ತು. ಇದೀಗ ಅವರ ನಿರ್ವಹಣೆ ಅವಧಿ ಮುಗಿದಿದ್ದು, ಅಲ್ಪ ಸ್ವಲ್ಪ ಕಾರ್ಯ ನಿವಹಿಸುವ ಕೆಲವು ಬೀದಿದೀಪಗಳನ್ನು ಪಟ್ಟಣ ಪಂಚಾಯಿತಿ ನಿರ್ವಹಣೆ ಮಾಡುತ್ತಿದೆ. ಪಟ್ಟಣ ಪಂಚಾಯಿತಿ ಸಮಿತಿ ರಚನೆಯಾಗದ ಕಾರಣ 2023–24 ಮತ್ತು 2024–25ನೇ ಸಾಲಿನ 15ನೇ ಹಣಕಾಸು ಯೋಜನೆಯಲ್ಲಿ ಅನುದಾನ ಬಿಡುಗಡೆಯಾಗದ ಕಾರಣ ಹೊಸ ಬೀದಿದೀಪ ಸ್ಥಾಪಿಸಿಲ್ಲ ಎಂದು ಅಧಿಕಾರಿಗಳು ಹೇಳುತ್ತಾರೆ.

ಪಟ್ಟಣ ಪಂಚಾಯಿತಿ ವ್ಯಾಪ್ತಿಯು ಹಲವು ಗ್ರಾಮೀಣ ಹಾಗೂ ಅರಣ್ಯ ಪ್ರದೇಶಗಳನ್ನೊಳಗೊಂಡಿರುವುದರಿಂದ ಕೆಲವು ಭಾಗಗಳಿಗೆ ಸೋಲಾರ್‌ ಬೀದಿ ದೀಪಗಳು ಅತ್ಯವಶ್ಯಕವಾಗಿದೆ.

ಸೋಮೇಶ್ವರ ಬೀಚ್‌ ರಸ್ತೆಯಲ್ಲಿ ನಿರ್ವಹಣೆ ಇಲ್ಲದೇ ಕಾರ್ಯನಿರ್ವಹಿಸದೆ ಇದರುವ ಸೋಲಾರ್‌ ದೀಪ
ಬೈಂದೂರು ಮಾಸ್ತಿಕಟ್ಟೆಯಲ್ಲಿ ದೀಪವೇ ಇಲ್ಲದ ಸೋಲಾರ್‌ ದೀಪ
ಈ ಭಾಗದಲ್ಲಿ ರಾತ್ರಿ ವೇಳೆ ಮುಳ್ಳುಹಂದಿ ಕಾಡು ಹಂದಿಗಳು ಗುಂಪಾಗಿ ತಿರುಗಾಡುತ್ತವೆ. ಬೀದಿದೀಪಗಳು ಕೆಟ್ಟು ಹೋಗಿರುವುದರಿಂದ ಬೆಳಕಿಲ್ಲದೆ ಸಂಚರಿಸುವುದಕ್ಕೆ ಭಯವಾಗುತ್ತದೆ
ರಾಘವೇಂದ್ರ ಮಾಸ್ತಿಕಟ್ಟೆ ಬೈಂದೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.