ಉಡುಪಿ: ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ವತಿಯಿಂದ 2024-25ನೇ ಸಾಲಿಗೆ ಜಿಲ್ಲೆಯಲ್ಲಿ ₹11,057 ಕೋಟಿ ಸಾಲವನ್ನು ಆದ್ಯತಾ ವಲಯಕ್ಕೆ ನೀಡುವ ಗುರಿ ಹೊಂದಲಾಗಿದೆ ಎಂದು ಜಿಲ್ಲಾಧಿಕಾರಿ ಕೆ.ವಿದ್ಯಾಕುಮಾರಿ ಹೇಳಿದರು.
ಮಂಗಳವಾರ ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಬಾರ್ಡ್ ವತಿಯಿಂದ ಹೊರತಂದಿರುವ ಪೊಟೆನ್ಶಿಯಲ್ ಲಿಂಕ್ಡ್ ಕ್ರೆಡಿಟ್ ಪ್ಲಾನ್ 2024-25ನೇ ಸಾಲಿನ ಪುಸ್ತಕ ಬಿಡುಗಡೆ ಮಾಡಿ ಕಾರ್ಯಕ್ರಮದಲ್ಲಿ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಆರ್ಥಿಕ ಚಟುವಟಿಕೆಗಳ ಉತ್ತೇಜನಕ್ಕೆ ಹಾಗೂ ಮೂಲಸೌಕರ್ಯ ಕಲ್ಪಿಸಲು ರಾಷ್ಟ್ರೀಯ ಕೃಷಿ ಹಾಗೂ ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ವತಿಯಿಂದ 2024-25ನೇ ಸಾಲಿಗೆ ₹11,057 ಕೋಟಿ ಸಾಲ ನೀಡಲು ಉದ್ದೇಶಿಸಲಾಗಿದೆ.
ಈ ಪೈಕಿ ಶೇ 48.30ರಷ್ಟು ಸಾಲವನ್ನು ಕೃಷಿ ಚಟುವಟಿಕೆಗಳಿಗೆ, ಶೇ 33.30ರಷ್ಟು ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ, ಶೇ 7.35ರಷ್ಟು ವಸತಿ ಯೋಜನೆಗಳಿಗೆ, ಶೇ 1.25ರಷ್ಟು ಶಿಕ್ಷಣ ಕ್ಷೇತ್ರಕ್ಕೆ, ಶೇ 5.75ರಷ್ಟು ಆದ್ಯತಾ ವಲಯಕ್ಕೆ, ಶೇ 0.80ರಷ್ಟು ಸಾಮಾಜಿಕ ಅಭಿವೃದ್ಧಿಗೆ, ಶೇ 2.75ರಷ್ಟು ರಫ್ತು ವಲಯಕ್ಕೆ ಸಾಲದ ಪ್ರಮಾಣ ನಿಗದಿಪಡಿಸಲಾಗಿದೆ ಎಂದರು.
ನಬಾರ್ಡ್ ಗ್ರಾಮೀಣ ಭಾಗಗಳಲ್ಲಿ ಸುಸ್ಥಿರ ಅಭಿವೃದ್ಧಿಗೆ ಹಾಗೂ ಜನರು ಉತ್ತಮ ಜೀವನ ನಡೆಸಲು ಅವಕಾಶ ಒದಗಿಸುವ ಮೂಲಕ ಗ್ರಾಮೀಣಾಭಿವೃದ್ಧಿಗೆ ಮುಂದಾಗಬೇಕು ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಚ್.ಪ್ರಸನ್ನ, ನಬಾರ್ಡ್ ಬ್ಯಾಂಕ್‌ನ ಅಧಿಕಾರಿ ಸಂಗೀತಾ ಕಾರ್ತ, ಕರ್ನಾಟಕ ಬ್ಯಾಂಕ್‌ನ ಪ್ರಾದೇಶಿಕ ಮ್ಯಾನೆಜರ್ ರಾಜಗೋಪಾಲನ್, ಎಸ್‌ಬಿಐ ಸಹಾಯಕ ಜನರಲ್ ಮ್ಯಾನೆಜರ್ ಶೀಬಾ ಸೆಹೆಜಾನ್, ಶೋಭಲತಾ, ರಾಜ್ ಗೋಪಾಲ್, ಯೂನಿಯನ್ ಬ್ಯಾಂಕ್‌ನ ಡಿ.ಆರ್.ಎಂ ಶಿವಕುಮಾರ್, ಜಿಲ್ಲಾ ಲೀಡ್ ಬ್ಯಾಂಕ್ ಮ್ಯಾನೇಜರ್ ಪಿ.ಎಂ.ಪಿಂಜಾರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.