ADVERTISEMENT

ಬಾರ್ಕೂರು | ಸೇನಾ ವಿದ್ಯಾರ್ಥಿಗಳಿಂದ ಬಸ್ ತಂಗುದಾಣ ನಿರ್ಮಾಣ

ಕೋಟಿ ಚೆನ್ನಯ ಸೇನಾ ಪೂರ್ವ ತರಬೇತಿ ವಿದ್ಯಾರ್ಥಿಗಳ ಸಮಾಜ ಕಾರ್ಯ

​ಪ್ರಜಾವಾಣಿ ವಾರ್ತೆ
Published 29 ಮಾರ್ಚ್ 2025, 12:50 IST
Last Updated 29 ಮಾರ್ಚ್ 2025, 12:50 IST
ಬಾರ್ಕೂರು ಹನೆಹಳ್ಳಿ ಶಾಲೆಯಲ್ಲಿರುವ ಕೋಟಿ ಚೆನ್ನಯ್ಯ ಸೇನಾ ಆಯ್ಕೆ ಪೂರ್ವ ತರಬೇತಿ ಶಾಲೆಯ 5ನೇ ತರಬೇತಿ ಪಡೆದ ತಂಡದ ಕೈಚಳಕದಿಂದ ಶಾಲೆಯ ಗೋಡೆಗಳಲ್ಲಿ ಮೂಡಿಬಂದ ಸಾಧಕರ ಚಿತ್ರಗಳು.
ಬಾರ್ಕೂರು ಹನೆಹಳ್ಳಿ ಶಾಲೆಯಲ್ಲಿರುವ ಕೋಟಿ ಚೆನ್ನಯ್ಯ ಸೇನಾ ಆಯ್ಕೆ ಪೂರ್ವ ತರಬೇತಿ ಶಾಲೆಯ 5ನೇ ತರಬೇತಿ ಪಡೆದ ತಂಡದ ಕೈಚಳಕದಿಂದ ಶಾಲೆಯ ಗೋಡೆಗಳಲ್ಲಿ ಮೂಡಿಬಂದ ಸಾಧಕರ ಚಿತ್ರಗಳು.   

ಬಾರ್ಕೂರು (ಬ್ರಹ್ಮಾವರ): ಕೇಂದ್ರ ಸರ್ಕಾರದ ಅಗ್ನಿವೀರ್ ಯೋಜನೆಗೆ ತರಬೇತಿ ನೀಡುವ ತಾಲ್ಲೂಕಿನ ಬಾರ್ಕೂರು ಹನೆಹಳ್ಳಿ ಶಾಲೆಯಲ್ಲಿರುವ ಕೋಟಿ ಚೆನ್ನಯ ಸೇನಾ ಆಯ್ಕೆ ಪೂರ್ವ ತರಬೇತಿ ಶಾಲೆಯ 5ನೇ ತಂಡದ ವಿದ್ಯಾರ್ಥಿಗಳು ತರಬೇತಿ ಮುಗಿಸಿ ಹೋಗುವ ಮುನ್ನ ಶಾಲೆ ಬಳಿಯಲ್ಲಿ ಸ್ವಂತ ಹಣದಿಂದ ಬಸ್ ನಿಲ್ದಾಣ, ಶಾಲಾ ಆವರಣ ಗೋಡೆಯಲ್ಲಿ ದೇಶ ಭಕ್ತರ ಚಿತ್ರ ರಚನೆ ನಿರ್ಮಿಸಿ ಮಾದರಿಯಾಗಿದ್ದಾರೆ.

ಹವ್ಯಾಸಿ ಚಿತ್ರ ಕಲಾವಿದ ಅಭಿಷೇಕ ಪಾಟೀಲ್‌ ಅವರ ಕೈ ಚಳಕದಲ್ಲಿ ಮಾಜಿ ರಾಷ್ಟ್ರಪತಿ ಅಬ್ದುಲ್‌ ಕಲಾಂ, ಸ್ವಾತಂತ್ರ್ಯ ಹೋರಾಟಗಾರರಾದ ಭಗತ್ ಸಿಂಗ್, ಸಂಗೊಳ್ಳಿ ರಾಯಣ್ಣ ಅವರನ್ನು ಮೂಡಿಸಿದ್ದಾರೆ. ರವಿ ಶಾಸ್ತ್ರೀ, ಮಾರುತಿ ನೀಲಪ್ಪ ಮತ್ತು ಸಂಗಡಿಗರು ಬಸ್‌ ನಿಲ್ದಾಣಕ್ಕೆ ತಗಡು ಚಾವಣಿ, ಪ್ರಯಾಣಿಕರಿಗೆ ಕುಳಿತುಕೊಳ್ಳಲು ಆಸನ ವ್ಯವಸ್ಥೆ ಕಲ್ಪಿಸಿದ್ದಾರೆ. ಸಿಮೆಂಟ್‌ನಿಂದ ಗಾರೆ ಕೆಲಸ ಮಾಡಿ ಸಮಾಜ ಸೇವೆಯೇ ನಮ್ಮ ಧ್ಯೇಯ ಎನ್ನುವ ಮನೋಭಾವ ತೋರಿದ್ದಾರೆ.

ನಾವು ತರಬೇತಿ ಪಡೆದ ಶಾಲೆಗೆ ನೆನಪಿನಲ್ಲಿ ಉಳಿಯುವ ಯಾವುದಾದರೂ ಕಾರ್ಯ ಮಾಡಬೇಕು ಎಂಬ ಉದ್ದೇಶದಿಂದ ಬಸ್‌ ನಿಲ್ದಾಣ ನಿರ್ಮಿಸಿದ್ದೇವೆ.
ರವಿಶಾಸ್ತ್ರಿ, ವಿದ್ಯಾರ್ಥಿ

ಕೋಟಿ ಚೆನ್ನಯ ಸೇನಾ ಆಯ್ಕೆ ಪೂರ್ವ ತರಬೇತಿ ಶಾಲೆಯಲ್ಲಿ 100 ವಿದ್ಯಾರ್ಥಿಗಳಿಗೆ ಸರ್ಕಾರದ ಅನುದಾನದಿಂದ ಉಚಿತವಾಗಿ ಊಟ, ವಸತಿ, 4 ತಿಂಗಳು ದೈಹಿಕ ತರಬೇತಿಯೊಂದಿಗೆ ಕಂಪ್ಯೂಟರ್, ಬೌದ್ಧಿಕ ಶಿಕ್ಷಣ, ಕ್ರೀಡಾ ತರಬೇತಿ ನೀಡಲಾಗುತ್ತಿದೆ. ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಸುಬೇದಾರ್ ಜನಾರ್ದನ, ಹವಾಲ್ದಾರ್ ಮಹಾಂತೇಶ್, ಲ್ಯಾನ್ಸ್ ನಾಯಕ ಕೃಷ್ಣಪ್ಪ 5 ವರ್ಷಗಳಿಂದ ಮಾರ್ಗದರ್ಶನ, ಪ್ರೋತ್ಸಾಹ ನೀಡುತ್ತಿರುವುದು ಗಮನಾರ್ಹ.

ADVERTISEMENT
ವಿದ್ಯಾರ್ಥಿಗಳು ಬಸ್‌ ತಂಗುದಾಣ ರಚಿಸುವ ಕಾರ್ಯದಲ್ಲಿ ತೊಡಗಿರುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.