ADVERTISEMENT

ಬಸ್ರೂರು: ತುಳುವೇಶ್ವರ ಸನ್ನಿಧಿಯಲ್ಲಿ ದೀಪೋತ್ಸವ

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2025, 4:48 IST
Last Updated 26 ಅಕ್ಟೋಬರ್ 2025, 4:48 IST
ತುಳುವೇಶ್ವರ ಸನ್ನಿಧಿಯಲ್ಲಿ ನಡೆದ ದೀಪೋತ್ಸವದಲ್ಲಿ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಸ್ವಾಮೀಜಿ, ಒಡಿಯೂರು ಗುರುದೇವಾನಂದ ಸ್ವಾಮೀಜಿ ಹಣತೆ ಬೆಳಗಿದರು
ತುಳುವೇಶ್ವರ ಸನ್ನಿಧಿಯಲ್ಲಿ ನಡೆದ ದೀಪೋತ್ಸವದಲ್ಲಿ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಸ್ವಾಮೀಜಿ, ಒಡಿಯೂರು ಗುರುದೇವಾನಂದ ಸ್ವಾಮೀಜಿ ಹಣತೆ ಬೆಳಗಿದರು   

ಕುಂದಾಪುರ: ‘ತುಳುನಾಡಿನ ಅಧಿದೇವತೆ’ ಎಂದೇ ಪ್ರಸಿದ್ಧವಾಗಿರುವ ಬಸ್ರೂರಿನ ತುಳುವೇಶ್ವರ ದೇವಸ್ಥಾನದಲ್ಲಿ ಶುಕ್ರವಾರ ಸಂಜೆ ಸಹಸ್ರ ದೀಪಗಳ ‘ದೀಪೋತ್ಸವ’ ವೈಭವದಿಂದ ನಡೆಯಿತು.

ಪ್ರಕೃತಿಯ ಆಲಯದಲ್ಲಿ ನೆಲೆಸಿರುವ ತುಳುವೇಶ್ವರನಿಗೆ ಸಮರ್ಪಿತವಾದ ದೀಪೋತ್ಸವ ಭಕ್ತರಿಗೆ ವಿಶಿಷ್ಟ ಆಧ್ಯಾತ್ಮಿಕ ಅನುಭವ ನೀಡಿತು. ಆಲದ ಮರದ ಬುಡದಲ್ಲಿರುವ ಶಿವಲಿಂಗದ ಸುತ್ತ, ದೇವಸ್ಥಾನದ ಪ್ರಾಂಗಣದಲ್ಲಿ ಸಾವಿರಾರು ಮಣ್ಣಿನ ದೀಪಗಳನ್ನು ಬೆಳಗಲಾಯಿತು. ನೆರೆದಿದ್ದ ಸಹಸ್ರಾರು ಭಕ್ತರು ಸಾಮೂಹಿಕವಾಗಿ ಶಿವ ಪಂಚಾಕ್ಷರಿ ಮಂತ್ರ ಜಪಿಸಿದರು. ದೀಪಗಳ ಪ್ರಕಾಶದಲ್ಲಿ ದೇವಾಲಯದ ಶಿಥಿಲಗೊಂಡ ಗೋಡೆಗಳು, ಪ್ರಾಚೀನ ಶಿಲಾ ಕುರುಹುಗಳು ಪುರಾತನ ವೈಭವವನ್ನು ನೆನಪಿಸಿದವು. 

ಆಶೀರ್ವಚನ ನೀಡಿದ ಮೂಡುಬಿದಿರೆ ಜೈನ ಮಠದ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಸ್ವಾಮೀಜಿ ಅವರು, ‘ಸನಾತನ ಧರ್ಮದ ನಂಬಿಕೆ ಆಧಾರದಲ್ಲಿ ಬದುಕುವ ಎಲ್ಲಾ ಭಗವದ್ ಭಕ್ತರು ಶಿವ ದೇವಾಲಯ ನಿರ್ಮಾಣದಲ್ಲಿ ಕೈಜೋಡಿಸಬೇಕು. ದೇವಸ್ಥಾನಗಳ ಊರು ಎನಿಸಿರುವ ಬಸ್ರೂರಿನ ಆಸುಪಾಸಿನಲ್ಲಿರುವ ತುಳುವೇಶ್ವರಿ ದೇವಸ್ಥಾನ ಸಹಿತ ಎಲ್ಲಾ ದೇವಸ್ಥಾನಗಳು ಮತ್ತೆ ವೈಭವದಿಂದ ಪೂಜೆ– ಪುನಸ್ಕಾರ, ಜಾತ್ರೆ ನಡೆಸುವಂತಾಗಿ ಸಂಸ್ಕಾರ, ಭಕ್ತಿಯ ಕೇಂದ್ರವಾಗಬೇಕು’ ಎಂದು ಹೇಳಿದರು. ಜೈನ ಮಠದಿಂದ ಸಹಕಾರ ನೀಡುವುದಾಗಿ ತಿಳಿಸಿದರು.

ADVERTISEMENT

ಆಶೀರ್ಚನ ನೀಡಿದ ಒಡಿಯೂರು ಗುರುದೇವದತ್ತ ಸಂಸ್ಥಾನದ ಗುರುದೇವಾನಂದ ಸ್ವಾಮೀಜಿ ಅವರು, ‘ಪ್ರಕೃತಿಯಲ‌್ಲೇ ಮೈದಳೆದಿರುವ ತುಳುವೇಶ್ವರ ಭಕ್ತಿಪ್ರಧಾನ ಕ್ಷೇತ್ರವಾಗಿದೆ. ಇದರ ಪುನರ್ ನಿರ್ಮಾಣ ಸಂದರ್ಭದಲ್ಲಿ ಪರಿಸರ ಸಂರಕ್ಷಣೆ ಆಗಬೇಕಿದ್ದು, ಆ ಬಗ್ಗೆಯೂ ಕಾಳಜಿ ವಹಿಸಬೇಕು. ಪ್ರತಿಯೊಬ್ಬರ ಮನೆ– ಮನಗಳಲ್ಲಿ ಶಿವ ಪಂಚಾಕ್ಷರಿ ಮಂತ್ರ ಪಠಣ ಮಾಡುವುದರಿಂದ ಸಕಲ ಇಷ್ಟಾರ್ಥ ಸಿದ್ಧಿಯಾಗಿ ನೆಮ್ಮದಿ, ಅಭಿವೃದ್ಧಿ ಸಾಧ್ಯ. ಈ ಹಿಂದೆ ತುಳುನಾಡಿನ ರಥಯಾತ್ರೆ ಬಸ್ರೂರಿನಿಂದಲೇ ಆರಂಭಗೊಂಡಿದ್ದು, ಈ ಪುಣ್ಯಭೂಮಿಯಲ್ಲಿ ವೈಭವದ ತುಳುವೇಶ್ವರ ದೇವಸ್ಥಾನ ನಿರ್ಮಾಣದ ಕನಸು ಶೀಘ್ರವೇ ನನಸಾಗಲಿ ಎಂದು ಹೇಳಿದರು.

ತುಳು ವರ್ಲ್ಡ್ ಸಂಸ್ಥೆಯ ಮುಖ್ಯಸ್ಥ ರಾಜೇಶ ಆಳ್ವ, ತುಳುವೇಶ್ವರ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಎಚ್. ದೇವಾನಂದ ಶೆಟ್ಟಿ ಬಸ್ರೂರು, ತುಳುವರ್ಲ್ಡ್ ಫೌಂಡೇಷನ್‌ ಅಧ್ಯಕ್ಷ, ಪದಾಧಿಕಾರಿಗಳು, ತುಳುವ ಮಹಾಸಭೆ ತಾಲ್ಲೂಕು ಘಟಕಗಳ ಅಧ್ಯಕ್ಷರು, ಪದಾಧಿಕಾರಿಗಳು, ಸ್ಥಳೀಯ ಜನಪ್ರತಿನಿಧಿಗಳು, ಸಂಘ ಸಂಸ್ಥೆಗಳ ಪ್ರತಿನಿಧಿಗಳು ಸೇರಿದಂತೆ ನಾಡಿನ ವಿವಿಧೆಡೆಯಿಂದ ಬಂದಿದ್ದ ಅಪಾರ ಸಂಖ್ಯೆಯ ಭಕ್ತರು ಪಾಲ್ಗೊಂಡಿದ್ದರು.

ಜೀರ್ಣೋದ್ಧಾರ ಸಂಕಲ್ಪ: ಈಚೆಗೆ ನಡೆದ ಅಷ್ಟಮಂಗಲ ಪ್ರಶ್ನಾ ಚಿಂತನೆಯಲ್ಲಿ ಮೂಡಿ ಬಂದ ಅಂಶಗಳ ಹಿನ್ನೆಲೆಯಲ್ಲಿ ತುಳುವೇಶ್ವರ ದೇವಾಲಯದ ಜೀರ್ಣೋದ್ಧಾರ, ಪುನರ್ ನಿರ್ಮಾಣದ ಕಾರ್ಯಗಳಿಗೆ ಚಾಲನೆ ನೀಡುವ ಸಂಕಲ್ಪದಲ್ಲಿ ದೀಪೋತ್ಸವ ಆಯೋಜಿಸಲಾಗಿತ್ತು. ಪಾರಂಪರಿಕ ಡೋಲು ವಾದನ, ಕಳರಿ, ಬೆಂಕಿಯಾಟ, ಕಸರತ್ತು ಪ್ರದರ್ಶನ ವಿಶೇಷ ಮೆರುಗು ನೀಡಿದವು.

ದೀಪೋತ್ಸವಕ್ಕೆ ಮೆರುಗು ನೀಡಿದ ಕಳರಿ ಪ್ರದರ್ಶನ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.