ADVERTISEMENT

ಸಮಾಜಮುಖಿ ಕಾರ್ಯದಲ್ಲಿ ಸಾರ್ಥಕತೆ: ಶಾಸಕ ಸುರೇಶ್ ಶೆಟ್ಟಿ

ಪ್ರಗತಿಪರ ಕೃಷಿಕ ಕುದಿ ಶ್ರೀನಿವಾಸ ಭಟ್‌ಗೆ ಬಸ್ರೂರು ಅಪ್ಪಣ್ಣ ಹೆಗ್ಡೆ ಪ್ರಶಸ್ತಿ ಪ್ರದಾನ; ಶಾಸಕ ಸುರೇಶ್ ಶೆಟ್ಟಿ ಗುರ್ಮೆ ಅಭಿಮತ

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2025, 7:02 IST
Last Updated 25 ಡಿಸೆಂಬರ್ 2025, 7:02 IST
ಕುದಿ ಶ್ರೀನಿವಾಸ ಭಟ್ ಅವರಿಗೆ ಬಸ್ರೂರು ಅಪ್ಪಣ್ಣ ಹೆಗ್ಡೆ ಕೃಷಿ ಪ್ರಶಸ್ತಿ ಪ್ರದಾನ ಮಾಡಲಾಯಿತು 
ಕುದಿ ಶ್ರೀನಿವಾಸ ಭಟ್ ಅವರಿಗೆ ಬಸ್ರೂರು ಅಪ್ಪಣ್ಣ ಹೆಗ್ಡೆ ಕೃಷಿ ಪ್ರಶಸ್ತಿ ಪ್ರದಾನ ಮಾಡಲಾಯಿತು    

ಕುಂದಾಪುರ: ಸಂಸಾರಮುಖಿಯಾಗಿ ಬದುಕದೆ ಸಮಾಜಮುಖಿ ಬದುಕಿದಾಗ ಸಾರ್ಥಕತೆ ಕಂಡು ಸವ್ಯಸಾಚಿಯಾಗಲು ಸಾಧ್ಯ ಎಂದು ಕಾಪು ವಿಧಾನಸಭಾ ಕ್ಷೇತ್ರದ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಹೇಳಿದರು.

ಬಸ್ರೂರು ಅಪ್ಪಣ್ಣ ಹೆಗ್ಡೆ ಪ್ರತಿಷ್ಠಾನ ಬುಧವಾರ ಆಯೋಜಿಸಿದ್ದ ಬಸ್ರೂರು ಅಪ್ಪಣ್ಣ ಹೆಗ್ಡೆ ಜನ್ಮದಿನ ಕಾರ್ಯಕ್ರಮದ ಅಂಗವಾಗಿ ದತ್ತಿನಿಧಿ ವಿತರಣೆ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜೀವನ ತೆರೆದ ಪುಸ್ತಕದಂತಿರಬೇಕು. ಬೇರೆಯವರ ಬೆಳವಣಿಗೆಯಲ್ಲಿ ಸಾರ್ಥಕತೆ ಕಾಣಬೇಕು. ಪುಣ್ಯ ಪುರುಷರು ಹಾಗೂ ಸಾಧಕರು ಜನಿಸಿದ ಊರು, ಬೆಳೆದ ಪರಿಸರ ಹಾಗೂ ಕುಟುಂಬ ಧನ್ಯವಾಗಿರುತ್ತದೆ. ಪರಿತ್ಯಾಗದ ಪರಿಶ್ರಮ ಇರಬೇಕು. ಜೀವನದ ಉದ್ದೇಶ ಸ್ಪಷ್ಟವಾಗಿರಬೇಕು. ಹುಟ್ಟುವಾಗ ವಿಶ್ವಮಾನವರಾಗಿ ಜಗಕ್ಕೆ ಬಂದು ಎಲ್ಲರೂ, ನಡೆ-ನುಡಿಗಳಿಂದ ವಿಶ್ವಮಾನವರಾಗಿ ಉಳಿಯುವ ಪ್ರಯತ್ನ ಮಾಡಬೇಕು. ಹಣದಿಂದ ಶ್ರೀಮಂತರಾಗದೆ, ಗುಣ ಶ್ರೀಮಂತರಾಗಬೇಕು ಎಂದರು.

ADVERTISEMENT

ಕುಂಭಾಶಿ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದ ಆಡಳಿತ ಧರ್ಮದರ್ಶಿ ಕೆ.ಶ್ರೀರಮಣ ಉಪಾಧ್ಯಾಯ ಮಾತನಾಡಿ ಭಗವಂತನ ಸಾನ್ನಿಧ್ಯದಲ್ಲಿ ಎಲ್ಲರೂ ಸಮಾನರು. ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರದಲ್ಲಿ ಮಾಡುವ ಸೇವೆ ಅನುಪಮ. ಕೃಷಿಯನ್ನು ಲಾಭದಾಯಕವಾಗಿ ನೋಡದೆ, ದೇಶದ ಅಭಿವೃದ್ಧಿ ದೃಷ್ಟಿಯಿಂದ ನೋಡಬೇಕು ಎಂದರು.

ಪ್ರಗತಿಪರ ಕೃಷಿಕ ಕುದಿ ಶ್ರೀನಿವಾಸ ಭಟ್ ಅವರಿಗೆ ಬಸ್ರೂರು ಅಪ್ಪಣ್ಣ ಹೆಗ್ಡೆ ಕೃಷಿ ಸಾಧಕ ಪ್ರಶಸ್ತಿ ಪ್ರದಾನ ಮಾಡಿ ಪುರಸ್ಕರಿಸಲಾಯಿತು.

ಬಸ್ರೂರು ಅಪ್ಪಣ್ಣ ಹೆಗ್ಡೆ ಪ್ರತಿಷ್ಠಾನದ ಅಧ್ಯಕ್ಷ ರಾಮ್‌ಕಿಶನ್ ಹೆಗ್ಡೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಟ್ರಸ್ಟಿ ಅನುಪಮಾ ಎಸ್ ಶೆಟ್ಟಿ ಸ್ವಾಗತಿಸಿದರು. ಉಪನ್ಯಾಸಕ ಅಕ್ಷಯ್ ಹೆಗ್ಡೆ ಮೊಳಹಳ್ಳಿ ಅಭಿನಂದನಾ ಪತ್ರ ವಾಚಿಸಿದರು. ನಿವೃತ್ತ ಮುಖ್ಯ ಶಿಕ್ಷಕ ದಿನಕರ್ ಆರ್ ಶೆಟ್ಟಿ ಫಲಾನುಭವಿಗಳ ಪಟ್ಟಿ ವಾಚಿಸಿದರು. ರಾಜೇಶ್ ಕುಂದಾಪುರ ನಿರೂಪಿಸಿದರು. ಬಸ್ರೂರು ಶ್ರೀ ಶಾರದಾ ಕಾಲೇಜಿನ ಪ್ರಾಂಶುಪಾಲೆ ಡಾ.ಚಂದ್ರವತಿ ಶೆಟ್ಟಿ ವಂದಿಸಿದರು. 

ಬಸ್ರೂರು ಅಪ್ಪಣ್ಣ ಹೆಗ್ಡೆ ಜನ್ಮದಿನ ಕಾರ್ಯಕ್ರಮದ ದತ್ತಿನಿಧಿ ವಿತರಣೆ | ಬೇರೆಯವರ ಬೆಳವಣಿಗೆಯಲ್ಲಿ ಸಾರ್ಥಕತೆ ಕಾಣಬೇಕು | ಪ್ರಾಸ್ತಾವಿಕವಾಗಿ ಮಾತನಾಡಿದ ಅಧ್ಯಕ್ಷ ರಾಮ್‌ಕಿಶನ್ ಹೆಗ್ಡೆ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.