ADVERTISEMENT

ಸ್ವಲ್ಪ ಎಚ್ಚರ ತಪ್ಪಿದರೂ ನೇರ ಹೊಳೆಗೆ!

ಮಾಯಾಬಜಾರ್– ಮುರಂಪಾಲುವಿನಲ್ಲೊಂದು ಅಪಾಯಕಾರಿ ತಿರುವು

​ಪ್ರಜಾವಾಣಿ ವಾರ್ತೆ
Published 5 ಜುಲೈ 2018, 17:26 IST
Last Updated 5 ಜುಲೈ 2018, 17:26 IST
murampalu
murampalu   

ಸಿದ್ದಾಪುರ: ಎರಡು ವಾಹನಗಳು ಒಟ್ಟಿಗೆ ಬಂದರೆ ಸಂಚರಿಸಲಾಗದಂತಹ ಕಿರಿದಾದ ರಸ್ತೆ, ಸಂಪರ್ಕ ರಸ್ತೆ ಚೆನ್ನಾಗಿದೆ ಎಂದು ವಾಹನ ಚಲಾಯಿಸುವಾಗ ಸ್ವಲ್ಪ ಮೈಮರೆತರೂ ವಾಹನ ಸಹಿತ ಹೊಳೆಗೆ ಬೀಳಬೇಕಾದ ಸ್ಥಿತಿ! ಇದು ಮಡಾಮಕ್ಕಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಾಯಾಬಜಾರ್ ಮುರಂಪಾಲುವಿನಲ್ಲಿರುವ ಅಪಾಯಕಾರಿ ತಿರುವು ಆಗಿದ್ದು, ಅನಾಹುತಕ್ಕೆ ಎಡೆಮಾಡುವಂತಿದೆ.

ಮಡಾಮಕ್ಕಿ ಗ್ರಾಮ ಪಂಚಾಯಿತಿಯ ಅರಸಮ್ಮಕಾನು ಮಾಯಾಬಜಾರ್‌ನಿಂದ ಶೇಡಿಮನೆಗೆ ತೆರಳುವ ನಡುವಿನ ಮುರಂಪಾಲುವಿನಲ್ಲಿ ಕುರ್ಪಾಡಿ ಹೊಳೆಗೆ ಬಹಳ ವರ್ಷಗಳ ಹಿಂದೆ ಕಿರುಸೇತುವೆಯನ್ನು ನಿರ್ಮಿಸಲಾಗಿತ್ತು. ರಸ್ತೆಯ ಇಕ್ಕೆಲಗಳಲ್ಲಿ ಖಾಸಗಿ ಜಾಗವಿದ್ದು ರಸ್ತೆಯೂ ಅತ್ಯಂತ ಕಿರಿದಾಗಿದೆ. ಮಳೆಗಾಲದಲ್ಲಿ ಕೆಲವೊಮ್ಮೆ ತುಂಬಿ ಹರಿಯುವ ಹೊಳೆಯ ನೀರು ಸೇತುವೆಯ ಮೇಲೆ ಹರಿದ ಉದಾಹರಣೆಗಳಿವೆ.
ರಸ್ತೆ ಚೆನ್ನಾಗಿದೆ ಎನ್ನುವ ಕಾರಣಕ್ಕೆ ವಾಹನ ಚಾಲಕರು ಸ್ವಲ್ಪ ಮೈಮರೆತರೂ ಕೂಡ ವಾಹನ ಸಹಿತ ಹೊಳೆಗೆ ಬೀಳುವ ಸಾಧ್ಯತೆಯಿದೆ. ಅಪಾಯಕಾರಿ ತಿರುವಿನಲ್ಲಿರುವ ಕಿರಿದಾದ ಸೇತುವೆ ಅಪಾಯಕ್ಕೆ ಆಹ್ವಾನಿಸುತ್ತಿದೆ. ರಸ್ತೆ ಕುರಿತು ಅರಿವಿದ್ದವರು ಅಪಾಯಕ್ಕೆ ಎಡೆಮಾಡದೆ ಸಂಚರಿಸಬಹುದು. ಆದರೆ, ಹೊಸಬರು ಎಚ್ಚರ ತಪ್ಪಿದರೆ ಅಥವಾವಾಹನ ಚಾಲನೆ ವೇಳೆ ತಾಂತ್ರಿಕ ದೋಷ ಕಂಡುಬಂದರೆ ಮಾತ್ರ ಅನಾಹುತ ಕಟ್ಟಿಟ್ಟ ಬುತ್ತಿ.

ಎರಡು ಮೂರು ತಿಂಗಳ ಹಿಂದೆ ಈ ರಸ್ತೆಯಲ್ಲಿ ಸಂಚರಿಸುತ್ತಿದ್ದ ಕ್ರೇನ್ ಹೊಳೆಗೆ ಬಿದ್ದಿತ್ತು. ಸೇತುವೆಗೆ ಕಟ್ಟಿದ್ದ ಹಿಡಿಗಂಬ ತುಂಡಾಗಿ ಅನಾಹುತ ಉಂಟುಮಾಡುವಂತಿದೆ. ತಡೆಗೋಡೆ ತುಂಡಾಗಿರುವ ಸ್ಥಳದಲ್ಲಿ ತಡೆಗಾಗಿ ಕೆಂಪು ಬಣ್ಣದ ರಿಬ್ಬನ್ ಕಟ್ಟಿದ್ದಾರೆ. ಕಿರಿದಾದ ಸೇತುವೆ, ಅಪಾಯಕಾರಿ ತಿರುವು, ತಡೆಗೋಡೆಯಿಲ್ಲದಿರುವುದು, ಇಳಿಜಾರು ಪ್ರದೇಶ ಇತ್ಯಾದಿ ಸಮಸ್ಯೆಗಳಿಂದ ಕೂಡಿರುವ ಮುರಂಪಾಲು ಸೇತುವೆಯಲ್ಲಿ ಸಂಚರಿಸುವುದೇ ಸಾಹಸವಾಗಿ ಪರಿಣಮಿಸಿದೆ.

ADVERTISEMENT

ಪ್ರತಿನಿತ್ಯ ಈ ರಸ್ತೆಯಲ್ಲಿ ಸರ್ಕಾರಿ ಹಾಗೂ ಖಾಸಗಿ ಬಸ್‌ಗಳು, ಶಾಲಾ ವಾಹನಗಳು ಸಂಚರಿಸುತ್ತವೆ. ಸಿದ್ದಾಪುರ, ಅಮಾಸೆಬೈಲು, ಹೆಂಗವಳ್ಳಿ, ತೊಂಬತ್ತು, ಶೇಡಿಮನೆ ಭಾಗದಿಂದ ಹೆಬ್ರಿ, ಶೃಂಗೇರಿಗೆ ಸಂಚರಿಸಲು ಪ್ರಯಾಣಿಕರು ಈ ಮಾರ್ಗವನ್ನೇ ಅವಲಂಬಿಸಿದ್ದಾರೆ. ಪ್ರತಿನಿತ್ಯ ಸಾವಿರಾರು ವಾಹನಗಳ ಸಂಚಾರವಿದ್ದು ಅಪಾಯಕಾರಿ ತಿರುವಿನಲ್ಲಿರುವ ಸೇತುವೆಯ ತಡೆಗೋಡೆ ತುಂಡಾಗಿದ್ದರೂ ಅದನ್ನು ಸರಿಪಡಿಸಲು ಮುಂದಾಗಿಲ್ಲ. ಕ್ರೇನ್ ತಡೆಗೋಡೆ ಮುರಿದು ಹೊಳೆಗೆ ಬಿದ್ದಾಗ ಅವರಿಂದಲೇ ಸರಿಪಡಿಸುವ ಭರವಸೆ ಪಡೆಯಲಾಗಿತ್ತು. ಆದರೆ, ಇದುವರೆಗೆ ಅದರ ದುರಸ್ತಿಯಾಗಿಲ್ಲ ಎನ್ನುವುದು ಸಾರ್ವಜನಿಕರ ದೂರು.

‘ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಕೂಡಲೇ ತಡೆಗೋಡೆ ನಿರ್ಮಿಸುವ ಭರವಸೆ ನೀಡಿದ್ದಾರೆ. ಈಗಾಗಲೇ ಟೆಂಡರ್ ಪ್ರಕ್ರಿಯೆ ಮುಗಿದಿದ್ದು, ಮುಂದಿನ ವಾರ ದುರಸ್ತಿಕಾರ್ಯ ನಡೆಸುವುದಾಗಿ ತಿಳಿಸಿದ್ದಾರೆ’ ಎಂದು ಮಡಾಮಕ್ಕಿ ಗ್ರಾಮ ಪಂಚಾಯಿತಿ ಸದಸ್ಯ ಉದಯಕುಮಾರ್ ಶೆಟ್ಟಿ ‘ಪ್ರಜಾವಾಣಿ’ಗೆ ತಿಳಿಸಿದರು.

ಆದಷ್ಟು ಬೇಗ ಮುರಂಪಾಲು ಕುರ್ಪಾಡಿ ಹೊಳೆಯ ಸೇತುವೆಗೆ ತಡೆಗೋಡೆ ನಿರ್ಮಿಸಬೇಕು ಎನ್ನುವುದು ಸಾರ್ವಜನಿಕರ ಆಗ್ರಹವಾಗಿದೆ.

ಭೂಸ್ವಾಧೀನವಾದರೆ ರಸ್ತೆ ವಿಸ್ತರಣೆ

ಅಪಾಯಕಾರಿ ತಿರುವು ಅನಾಹುತಕ್ಕೆ ಎಡೆಮಾಡುವಂತಿದೆ. ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸಿದರೆ ರಸ್ತೆ ವಿಸ್ತರಣೆ ಮಾಡಬಹುದು ಎನ್ನುತ್ತಾರೆ ಮಡಾಮಕ್ಕಿ ಗ್ರಾಮ ಪಂಚಾಯಿತಿ ಸದಸ್ಯ ಉದಯಕುಮಾರ್ ಶೆಟ್ಟಿ.

ಮುರಂಪಾಲು ಸೇತುವೆ ತಡೆಗೋಡೆ ಮುರಿದಿರುವುದು ಪಂಚಾಯಿತಿ ಗಮನಕ್ಕೆ ಬಂದಿದೆ. ಅದನ್ನು ಸರಿಪಡಿಸುವಂತೆ ಪಿಡಬ್ಲ್ಯೂಡಿ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಿದ್ದೇವೆ.
- ರಾಜು ಕುಲಾಲ್,ಅಧ್ಯಕ್ಷ, ಮಡಾಮಕ್ಕಿ ಗ್ರಾಮ ಪಂಚಾಯಿತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.