
ಉಡುಪಿ: ಭಗವದ್ಗೀತೆ ಕೇವಲ ನ್ಯಾಯಾಲಯದಲ್ಲಿರಿಸುವ ಗ್ರಂಥವಲ್ಲ ಬದಲಾಗಿ ಹೃದಯದಲ್ಲಿರಿಸುವ ಗ್ರಂಥ ಎಂದು ಕೇಮಾರು ಸಾಂದೀಪನಿ ಸಾಧನಾಶ್ರಮದ ಈಶ ವಿಠಲದಾಸ ಸ್ವಾಮೀಜಿ ಹೇಳಿದರು.
ಪರ್ಯಾಯ ಪುತ್ತಿಗೆ ಮಠದ ವತಿಯಿಂದ ಬೃಹತ್ ಗೀತೋತ್ಸವದ ಅಂಗವಾಗಿ ಕೃಷ್ಣಮಠದ ರಾಜಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸಂತ ಸಂದೇಶ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಇಂದು ನಮ್ಮ ಮನೆಗಳಲ್ಲಿ ಟಿ.ವಿ., ಕಂಪ್ಯೂಟರ್ ಮೊದಲಾದವುಗಳಿವೆ ಆದರೆ ಭಗವದ್ಗೀತೆ, ಮಹಾಭಾರತ ಮೊದಲಾದ ಗ್ರಂಥಗಳಿಲ್ಲ. ಮನೆಗಳಲ್ಲಿ ಯಾವುದು ಇರಬೇಕೋ ಅದು ಇಂದು ಇಲ್ಲ ಎಂದರು.
ಸಂಸ್ಕಾರ, ಸಂಸ್ಕೃತಿ, ಮಾನವೀಯತೆ ಮುನ್ನಲೆಗೆ ಬರಬೇಕಿತ್ತು ಆದರೆ ಅವುಗಳು ಇಂದು ಹಿನ್ನೆಲೆಗೆ ಸರಿದಿವೆ ಎಂದು ಹೇಳಿದರು.
ಭಗವದ್ಗೀತೆಯು ಜಗತ್ತಿನ ಮೊದಲ ಮನೋವಿಜ್ಞಾನ ಗ್ರಂಥ ಮತ್ತು ಶ್ರೀಕೃಷ್ಣ ಮೊದಲ ಮನೋವಿಜ್ಞಾನಿ. ಭಗವದ್ಗೀತೆಯನ್ನು ಓದಿದರೆ ಸಾಲದು. ಅದರ ಮೌಲ್ಯಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ಬದುಕಿನಲ್ಲಿ ಪ್ರಯತ್ನ ಅತೀ ಮುಖ್ಯ. ಪ್ರಯತ್ನವಿದ್ದರೆ ಫಲ ಖಂಡಿತವಾಗಿಯೂ ಸಿಗುತ್ತದೆ ಎಂದರು.
ನಾವು ಕೃತಕ ಬುದ್ಧಿಮತ್ತೆಯ ಯುಗದಲ್ಲಿದ್ದೇವೆ. ಆದರೆ ಇಂದು ಕುಟುಂಬಗಳಲ್ಲೂ ಕೃತಕ ಪ್ರೀತಿ ಕಂಡುಬರುತ್ತಿರುವುದು ವಿಪರ್ಯಾಸ ಎಂದು ಹೇಳಿದರು.
ಪರ್ಯಾಯ ಪುತ್ತಿಗೆ ಮಠದ ಸುಗುಣೇಂದ್ರತೀರ್ಥ ಸ್ವಾಮೀಜಿ ಮಾತನಾಡಿ, ಭಾರತೀಯ ಸಂಸ್ಕೃತಿಯು ತಂದೆ–ತಾಯಿ, ಗುರು– ಹಿರಿಯರಿಗೆ ಗೌರವ ಕೊಡುವುದನ್ನು ಕಲಿಸುತ್ತಿದೆ. ಆದರೆ ಪಾಶ್ಚಾತ್ಯ ಸಂಸ್ಕೃತಿಯು ಅಹಂಕಾರವನ್ನು ಕಲಿಸುತ್ತದೆ ಎಂದು ಹೇಳಿದರು.
ಪರ್ಯಾಯ ಪುತ್ತಿಗೆ ಮಠದ ಕಿರಿಯ ಯತಿ ಸುಶ್ರೀಂದ್ರ ತೀರ್ಥ ಸ್ವಾಮೀಜಿ ಭಾಗವಹಿಸಿದ್ದರು.
- ಯಾವ ಪರಿಸರದಲ್ಲಿ ನಾವು ಬೆಳೆಯುತ್ತೇವೊ ಅದು ನಮ್ಮ ಮೇಲೆ ಪರಿಣಾಮ ಬೀರುತ್ತದೆ. ಸಾಧಕನಾದವನು ಸಜ್ಜನರ ಸಹವಾಸ ಮಾಡಬೇಕುಸುಗುಣೇಂದ್ರತೀರ್ಥ ಸ್ವಾಮೀಜಿ ಪರ್ಯಾಯ ಪುತ್ತಿಗೆ ಮಠ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.