ADVERTISEMENT

ದೇಶೀಯ ಕಲಾ ಸೊಗಡು ಅನಾವರಣ

ಭಾವನಾ ಫೌಂಡೇಶನ್, ಭಾಸ ಗ್ಯಾಲರಿಯಿಂದ ಜನಪದ ದೇಶೀಯ ಕಲೆಗಳ ಸರಣಿ ಕಾರ್ಯಾಗಾರ

​ಪ್ರಜಾವಾಣಿ ವಾರ್ತೆ
Published 28 ಜನವರಿ 2023, 15:44 IST
Last Updated 28 ಜನವರಿ 2023, 15:44 IST
ಉಡುಪಿ ಬಡಗುಪೇಟೆಯಲ್ಲಿ ಶನಿವಾರ ಭಾವನಾ ಫೌಂಡೇಶನ್, ಹಾವಂಜೆ, ಭಾಸ ಗ್ಯಾಲರಿ ಹಾಗೂ ಸ್ಟುಡಿಯೋ ಆಯೋಜಿಸಿದ್ದ ಜನಪದ ದೇಶೀಯ ಕಲೆಗಳ ಸರಣಿ ಕಾರ್ಯಾಗಾರದಲ್ಲಿ ಭಾಗವಹಿಸಿದ್ದವರ ಹಸೆ ಚಿತ್ತಾರ
ಉಡುಪಿ ಬಡಗುಪೇಟೆಯಲ್ಲಿ ಶನಿವಾರ ಭಾವನಾ ಫೌಂಡೇಶನ್, ಹಾವಂಜೆ, ಭಾಸ ಗ್ಯಾಲರಿ ಹಾಗೂ ಸ್ಟುಡಿಯೋ ಆಯೋಜಿಸಿದ್ದ ಜನಪದ ದೇಶೀಯ ಕಲೆಗಳ ಸರಣಿ ಕಾರ್ಯಾಗಾರದಲ್ಲಿ ಭಾಗವಹಿಸಿದ್ದವರ ಹಸೆ ಚಿತ್ತಾರ   

ಉಡುಪಿ: ಭಾವನಾ ಫೌಂಡೇಶನ್, ಹಾವಂಜೆ, ಭಾಸ ಗ್ಯಾಲರಿ ಹಾಗೂ ಸ್ಟುಡಿಯೋ ಆಯೋಜಿಸಿದ್ದ ಜನಪದ ದೇಶೀಯ ಕಲೆಗಳ ಸರಣಿ ಕಾರ್ಯಾಗಾರ ಬಡಗುಪೇಟೆಯಲ್ಲಿ ನಡೆಯಿತು.

ಚಿತ್ರಕಲಾ ಮಂದಿರ ಕಲಾಶಾಲೆಯ ನಿರ್ದೇಶಕ ಡಾ.ಯು.ಸಿ.ನಿರಂಜನ್ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ದೇಶೀಯ ಕಲೆಗಳ ಉಳಿವು, ಪ್ರಚಾರ, ಪ್ರದರ್ಶನ ಬಹಳಷ್ಟು ನಡೆಯಬೇಕಿದ್ದು, ಬಡುಗುಪೇಟೆಯ ಮನೆಯೊಂದರಲ್ಲಿ ಇಂತಹ ಕಾರ್ಯಾಗಾರ ಹಾಗೂ ಪ್ರದರ್ಶನಗಳ ಆಯೋಜನೆ ಶ್ಲಾಘನೀಯ. ಕರಾವಳಿಯ ದೇಶೀಯ ಸೊಗಡು ಇಲ್ಲಿ ಅನಾವರಣಗೊಂಡಿದೆ ಎಂದರು.

ಆರ್ಟಿಸ್ಟ್ ಫೋರಂ ಅಧ್ಯಕ್ಷ ರಮೇಶ್ ರಾವ್‍ ಮಾತನಾಡಿ, ಅಕಾಡೆಮಿಗಳು ಮಾಡದ ಕಾರ್ಯವನ್ನು ಖಾಸಗಿಯಾಗಿ ಪ್ರತಿಷ್ಠಾನ ಮಾಡುತ್ತಿರುವುದು ಮೆಚ್ಚುವ ಕಾರ್ಯ. ಕಲೆ ಮತ್ತು ಕಲಾವಿದರೊಂದಿಗಿನ ಭಾವನಾತ್ಮಕ ಸಂಬಂಧ ಬೆಸೆಯಲು ಇಂತಹ ಕಾರ್ಯಾಗಾರಗಳು ಪರಿಣಾಮಕಾರಿಯಾಗಿರುತ್ತವೆ. ಸಮಕಾಲೀನ ಕಲಾಕಾರರು ಹಾಗೂ ಜನಪದೀಯ ಕಲಾಕಾರರ ನಡುವಿನ ಕೊಡು– ಕೊಂಡುಕೊಳ್ಳುವಿಕೆಯ ಬಗ್ಗೆ ಇಲ್ಲಿ ಚಿಂತಿಸಲ್ಪಡುತ್ತಿರುವುದು ಬಹು ಮಹತ್ವಪೂರ್ಣ ವಿಚಾರ ಎಂದರು.

ADVERTISEMENT

ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಸಂಚಾಲಕ ರವಿರಾಜ್ ಎಚ್.ಪಿ. ಹಾಗೂ ಭಾವನಾ ಪ್ರತಿಷ್ಠಾನದ ನಿರ್ದೇಶಕ ಯಕ್ಷಗುರು ಹಾವಂಜೆ ಮಂಜುನಾಥ ರಾವ್, ಕಾರ್ಯಾಗಾರದ ಸಂಯೋಜಕರಾದ ಡಾ. ಜನಾರ್ದನ ಹಾವಂಜೆ ಹಾಗೂ ಸಂತೋಷ ಪೈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ವಿಶೇಷತೆ ಏನು:

ಬಿಹಾರದ ಮಧುಬನಿ, ಮಹಾರಾಷ್ಟ್ರದ ವಾರ್ಲಿ, ಟಿಬೆಟ್‍ನ ಟಂಕಾ ಚಿತ್ರಕಲೆ, ಮೈಸೂರು ಹಾಗೂ ತಂಜಾವೂರು ಚಿತ್ರಕಲೆ, ಒಡಿಶಾ ಪಟಚಿತ್ರ, ಮಧ್ಯ ಪ್ರದೇಶದ ಗೋಂದ್ ಗಿರಿಜನರ ಕಲೆ ಹಾಗೂ ಪ್ರಾಂತೀಯ ಕಾವಿ ಭಿತ್ತಿ ಚಿತ್ರಕಲೆ ಸೇರಿ 15ಕ್ಕೂ ಮಿಕ್ಕಿದ ಕಲಾಪ್ರಕಾರಗಳ ಪ್ರದರ್ಶನ ನಡೆಯುತ್ತಿದೆ.

ಸಾಗರದ ಭಾಗೀರಥಿಯಮ್ಮ ಹಾಗೂ ಸುಶೀಲಮ್ಮ ಉತ್ತರ ಕನ್ನಡ ಜಿಲ್ಲೆಯ ಹಸೆ ಚಿತ್ತಾರ ಜನಪದ ಕಲೆಯ ಕಾರ್ಯಾಗಾರವನ್ನು ಶನಿವಾರ ನಡೆಸಿಕೊಟ್ಟರು. ಹಸೆ ಚಿತ್ರಗಳ ಪಾರಂಪರಿಕ ರಚನಾಕ್ರಮ, ತಾಂತ್ರಿಕತೆಗಳನ್ನು ಶಿಬಿರಾರ್ಥಿಗಳಿಗೆ ಕಲಿಸಿದರು.

30ಕ್ಕೂ ಮಿಕ್ಕಿದ ಅಭ್ಯರ್ಥಿಗಳು ಭಾಗವಹಿಸಿ ಹಸೆ ಚಿತ್ರಗಳನ್ನು ಕೆಮ್ಮಣ್ಣಿನ ಮೇಲೆ ರಚಿಸಿದರು. ಭಾವನಾ ಪ್ರತಿಷ್ಠಾನ ಹಾಗೂ ಭಾಸ ಗ್ಯಾಲರಿ ತಿಂಗಳಿಗೊಂದರಂತೆ ಕಾರ್ಯಾಗಾರಗಳನ್ನು ಉಡುಪಿಯಲ್ಲಿ ಹಮ್ಮಿಕೊಳ್ಳುತ್ತಿದೆ.ಕಲಾಪ್ರಕಾರಗಳ ಪ್ರದರ್ಶನವು ಸೋಮವಾರ ಮಧ್ಯಾಹ್ನ ಸಾರ್ವಜನಿಕರ ವೀಕ್ಷಣೆಗೆ ತೆರೆದಿರುತ್ತದೆ ಎಂದು ಸಂಯೋಜಕ ಡಾ. ಜನಾರ್ದನ ಹಾವಂಜೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.