ADVERTISEMENT

ಉಡುಪಿ | ಜನನ, ಮರಣ ಸಮರ್ಪಕ ನೋಂದಣಿಯಾಗಲಿ: ಜಿಲ್ಲಾಧಿಕಾರಿ ಸ್ವರೂಪ

ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಸಮನ್ವಯ ಸಮಿತಿಯ ತ್ರೈಮಾಸಿಕ ಸಭೆ

​ಪ್ರಜಾವಾಣಿ ವಾರ್ತೆ
Published 8 ಆಗಸ್ಟ್ 2025, 4:06 IST
Last Updated 8 ಆಗಸ್ಟ್ 2025, 4:06 IST
ಸ್ವರೂಪ ಟಿ.ಕೆ.
ಸ್ವರೂಪ ಟಿ.ಕೆ.   

ಉಡುಪಿ: ಜನನ, ಮರಣ ದಾಖಲೆಗಳು ಸಾರ್ವಜನಿಕರಿಗೆ ತಮ್ಮ ಶೈಕ್ಷಣಿಕ ಹಾಗೂ ಆರ್ಥಿಕ ವ್ಯವಹಾರಗಳು ಸೇರಿದಂತೆ ವಿವಿಧ ಕೆಲಸಗಳಿಗೆ ಅತ್ಯವಶ್ಯವಾಗಿದ್ದು, ಅವುಗಳ ನಿರ್ವಹಣೆಯನ್ನು ಸಮರ್ಪಕವಾಗಿ ಮಾಡಬೇಕು ಎಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಸೂಚನೆ ನೀಡಿದರು.

ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಜಿಲ್ಲಾ ಮಟ್ಟದ ಜನನ-ಮರಣ ಸಮನ್ವಯ ಸಮಿತಿಯ ತ್ರೈಮಾಸಿಕ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸರ್ಕಾರವು ನಾಗರಿಕ ನೋಂದಣಿ ಪದ್ಧತಿಯಲ್ಲಿ ಪ್ರತಿಯೊಬ್ಬ ನಾಗರಿಕರ ಜನನ, ಮರಣ ಹಾಗೂ ನಿರ್ಜೀವ ಶಿಶುಗಳ ಜನನಗಳನ್ನು ಕಡ್ಡಾಯವಾಗಿ ನೋಂದಣಿ ಮಾಡಲು ಕಾನೂನು ಜಾರಿಗೆ ತಂದಿದ್ದು, ಅದರನ್ವಯ ಶೇ 100ರಷ್ಟು ನೋಂದಣಿ ಕಾರ್ಯಗಳನ್ನು ಅಧಿಕಾರಿಗಳು ಮಾಡಬೇಕು ಎಂದರು.

ADVERTISEMENT

ಜನನ, ಮರಣ ಹಾಗೂ ನಿರ್ಜೀವ ಶಿಶುಗಳ ಜನನ ನಡೆದ 21 ದಿವಸಗಳ ಒಳಗಾಗಿ ಯಾವುದೇ ಶುಲ್ಕವಿಲ್ಲದೇ, 21ರಿಂದ 30 ದಿನಗಳೊಳಗಾಗಿ ₹20 ಶುಲ್ಕ ನೀಡಿ, ನಂತರ ಒಂದು ವರ್ಷದ ಅವಧಿಯೊಳಗೆ ₹50 ಶುಲ್ಕ ಪಾವತಿಸಿ ಪ್ರಾಧಿಕಾರದಲ್ಲಿ ನೋಂದಣಿಗೆ ಅವಕಾಶ ಕಲ್ಪಿಸಲಾಗಿದೆ. ಒಂದು ವರ್ಷದ ನಂತರದ ವಿಳಂಬ ನೋಂದಣಿಯನ್ನು ನ್ಯಾಯಾಲಯದ ಆದೇಶ ಪಡೆದು ಮಾಡಬಹುದಾಗಿದೆ ಎಂದರು.

ಜನನ ಮರಣ ಮಾಹಿತಿಯನ್ನು ಇ-ಜನ್ಮ ತಂತ್ರಾಂಶದ ಮೂಲಕ ನೋಂದಣಿ ಮಾಡುವ ಕಾರ್ಯವನ್ನು 2015ರಿಂದಲೇ ಜಾರಿಗೆ ತರಲಾಗಿದ್ದು, ಎಲ್ಲಾ ನಗರ ಹಾಗೂ ಗ್ರಾಮೀಣ ಭಾಗದ ಸ್ಥಳೀಯ ಸಂಸ್ಥೆಗಳಲ್ಲಿ ಹಾಗೂ ಸರ್ಕಾರಿ ಆಸ್ಪತ್ರೆಗಳಲ್ಲಿ ಇ-ಜನ್ಮ ತಂತ್ರಾಂಶದಲ್ಲಿ ನೋಂದಣಿ ಕಾರ್ಯವನ್ನು ಕಡ್ಡಾಯವಾಗಿ ಮಾಡಬೇಕು ಎಂದರು.

ಪ್ರಸಕ್ತ ಸಾಲಿನ ಜನವರಿಯಿಂದ ಈವರೆಗೆ ಗ್ರಾಮಾಂತರ ಪ್ರದೇಶದಲ್ಲಿ 763, ನಗರ ವ್ಯಾಪ್ತಿಯಲ್ಲಿ 5,436 ಸೇರಿ ಒಟ್ಟು 6,199 ಜನನ ನೋಂದಣಿಯಾದರೆ, ಗ್ರಾಮೀಣ ಪ್ರದೇಶದಲ್ಲಿ 4,242, ನಗರ ಪ್ರದೇಶದಲ್ಲಿ 2,789 ಸೇರಿ ಒಟ್ಟು 7,031 ಮರಣ ನೋಂದಣಿಯಾಗಿದೆ. ಜಿಲ್ಲೆಯಲ್ಲಿ ಒಟ್ಟು 22 ನಿರ್ಜೀವ ಶಿಶುಗಳ ಜನನಗಳು ನೋಂದಣಿಯಾಗಿವೆ. ಜಿಲ್ಲೆಯಲ್ಲಿ ಲಿಂಗಾನುಪಾತವು 1000 ಗಂಡುಗಳಿಗೆ, 1004 ಹೆಣ್ಣು ಮಕ್ಕಳಿದ್ದಾರೆ ಎಂದರು.

ಹೆಚ್ಚುವರಿ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ, ಎಎಸ್‌ಪಿ ಸುಧಾಕರ್ ನಾಯಕ್, ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಎಂ.ವಿ ದೊಡಮನಿ ಇದ್ದರು.

ಜನನ ಮರಣ ನೋಂದಣಿ ದಾಖಲಾತಿಗಳಲ್ಲಿ ಬದಲಾವಣೆ ತಿದ್ದುಪಡಿ ಮಾಡಲು ಅವಕಾಶ ಇಲ್ಲ. ಮುದ್ರಣ ದೋಷ ಯಾವುದೇ ದುರುದ್ದೇಶವಿಲ್ಲದೆ ಅನುಚಿತ ನಮೂದುಗಳ ತಿದ್ದುಪಡಿಗೆ ಮಾತ್ರ ಅವಕಾಶವಿದೆ
ಸ್ವರೂಪ ಟಿ.ಕೆ. ಜಿಲ್ಲಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.