ADVERTISEMENT

ಬಂಗಾರ ಹುಳುವಿಗೆ ಚಿನ್ನದ ಬೆಲೆ

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2025, 5:03 IST
Last Updated 12 ಅಕ್ಟೋಬರ್ 2025, 5:03 IST
ಕಜೆ 25–9 ತಳಿಯ ಭತ್ತ
ಕಜೆ 25–9 ತಳಿಯ ಭತ್ತ   

ಉಡುಪಿ: ಹಸಿತ್ಯಾಜ್ಯವನ್ನು ಗೊಬ್ಬರವಾಗಿ ಪರಿವರ್ತಿಸುವ ಬಂಗಾರ ಹುಳುಗಳು ಬ್ರಹ್ಮಾವರದ ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧವಾ ಕೇಂದ್ರದಲ್ಲಿ ಶನಿವಾರ ಹಮ್ಮಿಕೊಂಡಿದ್ದ 2005ನೇ ಸಾಲಿನ ಕೃಷಿ ಮೇಳದಲ್ಲಿ ಪ್ರಮುಖ ಆಕರ್ಷಣೆಯಾಗಿತ್ತು.

ಯಾವುದೇ ಹಸಿತ್ಯಾಜ್ಯವನ್ನು ಗೊಬ್ಬರವಾಗಿ ಪರಿವರ್ತಿಸಬಲ್ಲ ಈ ಹುಳುವಿನ ಬೆಲೆ ಕೆ.ಜಿ.ಗೆ ₹10 ಸಾವಿರವಿದೆ. ಇದಕ್ಕೆ ಇಂಗ್ಲಿಷ್‌ನಲ್ಲಿ ಬ್ಲ್ಯಾಕ್‌ ಸೋಲ್ಜರ್‌ ಫ್ಲೈ ಎಂಬುದಾಗಿ ಕರೆಯುತ್ತಾರೆ.

ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದ ಕೀಟ ಶಾಸ್ತ್ರಜ್ಞ ರೇವಣ್ಣ ರೇವಣ್ಣನವರ್‌ ಅವರು ಕಳೆದ ಮೂರು ವರ್ಷಗಳಿಂದ ಈ ಹುಳುವಿನ ಬಗ್ಗೆ ಸಂಶೋಧನೆ ನಡೆಸುತ್ತಿದ್ದಾರೆ. ಕೃಷಿ ಮೇಳಕ್ಕೆ ಭೇಟಿ ನೀಡುವವರಿಗೆ ಅವರು ಹುಳುಗಳ ಜೀವನಚಕ್ರದ ಬಗ್ಗೆ ವಿವರಣೆಯನ್ನೂ ನೀಡುತ್ತಿದ್ದಾರೆ.

ADVERTISEMENT

‘ಬಂಗಾರದ ಹುಳುಗಳು ನಾಲ್ಕು ಹಂತಗಳಲ್ಲಿ ಬೆಳೆಯುತ್ತವೆ. ಮೊದಲನೆಯದಾಗಿ ರೆಕ್ಕೆ ಇರುವ ಪ್ರೌಢ ಕೀಟಗಳು ಸಾವಿರಾರು ಮೊಟ್ಟೆಗಳನ್ನು ಇಡುತ್ತವೆ. ಮೂರರಿಂದ ನಾಲ್ಕು ದಿನಗಳಲ್ಲಿ ಮೊಟ್ಟೆಯೊಡೆದು ಹುಳುವಿನ ಮರಿಗಳು ಹೊರಬರುತ್ತವೆ. ಆ ಹುಳುಗಳನ್ನು ಅಕ್ಕಿ ತೌಡನ್ನು ನೆನೆಸಿದ ಟ್ರೇಯಲ್ಲಿರಿಸುತ್ತೇವೆ. ನಾಲ್ಕೈದು ದಿವಸ ಕಳೆದ ಬಳಿಕ ಹುಳುಗಳನ್ನು ಹಸಿ ತ್ಯಾಜ್ಯವಿರುವ ಸಿಮೆಂಟ್‌ ತೊಟ್ಟಿಗೆ ಹಾಕುತ್ತೇವೆ’ ಎಂದು ಕೀಟ ಶಾಸ್ತ್ರಜ್ಞ ರೇವಣ್ಣ ರೇವಣ್ಣನವರ್‌ ವಿವರಿಸಿದರು.

‘12ರಿಂದ 15 ದಿವಸಗಳವರೆಗೆ ಹಸಿ ಕಸವನ್ನು ತಿನ್ನುವ ಹುಳುಗಳು ಅನಂತರ ಗೂಡಾಗಿ ಮಾರ್ಪಡುತ್ತವೆ. ಅದರೊಳಗಿನ ಕೀಟಗಳು ಹಾರಿ ಹೋಗುತ್ತವೆ. ಹಸಿ ಕಸದಿಂದ ಉತ್ಪತ್ತಿಯಾಗುವ ಗೊಬ್ಬರವನ್ನು ಕೃಷಿಗೆ ಬಳಸಬಹುದು. ಹುಳುಗಳನ್ನು ನಾಟಿ ಕೋಳಿಗಳಿಗೆ ಆಹಾರವಾಗಿಯೂ ನೀಡಬಹುದು. ಈ ಹುಳುಗಳು ತಮ್ಮ ದೇಹದ ತೂಕಕ್ಕಿಂತ 10 ಪಟ್ಟು ಹೆಚ್ಚು ಕಸವನ್ನು ತಿನ್ನುತ್ತವೆ’ ಎಂದು ವಿವರಿಸಿದರು.

ಬಂಗಾರ ಹುಳು

ನಾಲ್ಕು ಹೊಸ ಭತ್ತದ ತಳಿ ಬಿಡುಗಡೆ

ಉಡುಪಿ: ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರವು ಅಭಿವೃದ್ಧಿಪಡಿಸಿರುವ ನಾಲ್ಕು ಹೊಸ ಭತ್ತದ ತಳಿಗಳು ಬಿಡುಗಡೆಗೊಂಡಿದ್ದು ಅವುಗಳನ್ನು ಕೃಷಿಮೇಳದಲ್ಲಿ ಪ್ರದರ್ಶನಕ್ಕಿಡಲಾಗಿತ್ತು. ‘ಸಹ್ಯಾದ್ರಿ ಪಂಚಮುಖಿ ಸಹ್ಯಾದ್ರಿ ಬ್ರಹ್ಮ ಸಹ್ಯಾದ್ರಿ ಸಪ್ತಮಿ ಮತ್ತು ಕಜೆ 25–9 ತಳಿಗಳನ್ನು ಬಿಡುಗಡೆಗೊಳಿಸಲಾಗಿದೆ. ವಿವಿಧ ಹಂತಗಳಲ್ಲಿ ಪ್ರಾಯೋಗಿಕವಾಗಿ ಈ ತಳಿಯ ಭತ್ತವನ್ನು ಬೆಳೆದ ಬಳಿಕ ಅದಕ್ಕೆ ಅಂಗೀಕಾರ ಲಭಿಸಿದೆ. ನಂತರ ಬಿಡುಗಡೆ ಮಾಡಿದ್ದೇವೆ’ ಎಂದು ಕೆವಿಕೆಯ ವಿಜ್ಞಾನಿ ಶಂಕರ್‌ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.