ಉಡುಪಿ: ಪೋಷಕರು ಮೊಬೈಲ್ ಕಸಿದುಕೊಂಡಿದ್ದಕ್ಕೆ ಬೇಸರಗೊಂಡ ಬಾಲಕ ಮೂರುತಾಸು ಶೌಚಾಲಯದೊಳಗೆ ಸೇರಿಕೊಂಡು ಆತಂಕ ಮೂಡಿಸಿದ ಘಟನೆ ಶನಿವಾರ ಮಣಿಪಾಲದ ಎಂಐಟಿ ಸಿಬ್ಬಂದಿಗಳ ವಸತಿಗೃಹದಲ್ಲಿ ನಡೆದಿದೆ. ಸುದ್ದಿ ತಿಳಿದ ಕೂಡಲೇ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಸಿಬ್ಬಂದಿ ಬಾಲಕನನ್ನು ರಕ್ಷಣೆ ಮಾಡಿದ್ದಾರೆ.
ರಾತ್ರಿಯಿಡೀ ಮೊಬೈಲ್ ಗೇಮ್ ಆಡುತ್ತಿದ್ದ ಮಗನಿಗೆ ತಾಯಿ ಬೈದು ಬುದ್ದಿವಾದ ಹೇಳಿ ಮೊಬೈಲ್ ಕಿತ್ತುಕೊಂಡಿದ್ದರು. ಇದರಿಂದ ಕೋಪಗೊಂಡ ಬಾಲಕ ಶೌಚಾಲಯದ ಒಳಗೆ ಹೋಗಿ ಬಾಗಿಲು ಹಾಕಿಕೊಂಡಿದ್ದ. ಎಷ್ಟು ಅಂಗಲಾಚಿದರೂ ಬಾಗಿಲು ತೆರೆಯಲಿಲ್ಲ. ಇದರಿಂದ ಆತಂಕಗೊಂಡ ತಾಯಿ ಕಲಾ ಅಗ್ನಿಶಾಮಕ ದಳದ ಸಿಬ್ಬಂದಿಗೆ ಕರೆ ಮಾಡಿ ವಿಚಾರ ತಿಳಿಸಿದರು.
ತಕ್ಷಣ ಸ್ಥಳಕ್ಕೆ ಬಂದ ಸಿಬ್ಬಂದಿ ಹಗ್ಗದ ಸಹಾಯದಿಂದ ನಾಲ್ಕನೇ ಮಹಡಿಯಲ್ಲಿದ್ದ ಶೌಚಾಲಯದ ಕಿಟಕಿ ಮುರಿದು ಒಳ ಪ್ರವೇಶಿಸಿ ಬಾಲಕನನ್ನು ರಕ್ಷಣೆ ಮಾಡಿದರು. ಬಾಲಕ ಆರೋಗ್ಯವಾಗಿದ್ದಾನೆ ಎಂದು ಅಗ್ನಿಶಾಮಕ ದಳದ ಸಿಬ್ಬಂದಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.