ADVERTISEMENT

ಆಸ್ಪತ್ರೆ ದುಸ್ಥಿತಿಗೆ ಮಾಜಿ ಸಚಿವರು ಕಾರಣ: ರಘುಪತಿ ಭಟ್‌

ಬಿ.ಆರ್‌.ಶೆಟ್ಟಿ ಆಸ್ಪತ್ರೆಯಲ್ಲಿ ಸೇವೆ ನಿಲ್ಲಬಾರದು; ಪ್ರಮೋದ್ ಮಧ್ವರಾಜ್‌

​ಪ್ರಜಾವಾಣಿ ವಾರ್ತೆ
Published 11 ಜೂನ್ 2021, 15:55 IST
Last Updated 11 ಜೂನ್ 2021, 15:55 IST
ರಘುಪತಿ ಭಟ್‌, ಶಾಸಕ
ರಘುಪತಿ ಭಟ್‌, ಶಾಸಕ   

ಉಡುಪಿ: ಕೂಸಮ್ಮ ಶಂಭುಶೆಟ್ಟಿ ಹಾಜಿ ಅಬ್ದುಲ್ಲಾ ಸ್ಮಾರಕ ತಾಯಿ ಮತ್ತು ಮಕ್ಕಳ ಸರ್ಕಾರಿ ಆಸ್ಪತ್ರೆಯ ಸಮಸ್ಯೆಗಳಿಗೆ ಹಿಂದಿನ ಸರ್ಕಾರ ಕಾರಣ ಎಂದು ಉಡುಪಿ ಶಾಸಕ ರಘುಪತಿ ಭಟ್ ಆರೋಪಿಸಿದರು.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಆಸ್ಪತ್ರೆ ನಿರ್ಮಾಣ ಸಂಬಂಧ ಕಾಂಗ್ರೆಸ್ ಅವಧಿಯಲ್ಲಿ ಉದ್ಯಮಿ ಬಿ.ಆರ್.ಶೆಟ್ಟಿ ಹಾಗೂ ಅಂದಿನ ಸರ್ಕಾರದ ಮಧ್ಯೆ ಕೇವಲ ಒಂದು ವರ್ಷದ ಒಪ್ಪಂದ ನಡೆದಿದೆ. ಖಾಯಂ ಒಪ್ಪಂದವಾಗಿಲ್ಲ. ಈ ಬಗ್ಗೆ ಹಿಂದೆಯೇ ಆಕ್ಷೇಪ ವ್ಯಕ್ತಪಡಿಸಿದ್ದರೂ ಗಣನೆಗೆ ತೆಗೆದುಕೊಳ್ಳಲಿಲ್ಲ ಎಂದರು.

ಖಾಸಗಿ ಹಾಗೂ ಸರ್ಕಾರಿ ಸಹಭಾಗಿತ್ವದಲ್ಲಿ ಕೂಸಮ್ಮ ಶಂಭುಶೆಟ್ಟಿ ಹಾಜಿ ಅಬ್ದುಲ್ಲ ಸರ್ಕಾರಿ ತಾಯಿ ಹಾಗೂ ಮಕ್ಕಳ ಆಸ್ಪತ್ರೆ ನಿರ್ಮಿಸಲಾಗಿದೆ. ಇದಕ್ಕೆ ಪ್ರತಿಯಾಗಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕಟ್ಟಲು ಸರ್ಕಾರ ಬಿ.ಆರ್‌.ಶೆಟ್ಟಿ ಅವರಿಗೆ ಸರ್ಕಾರ ಅನುಮತಿ ನೀಡಿದೆ. ನಿಯಮಗಳ ಪ್ರಕಾರ 2 ತಳ ಅಂತಸ್ತು ಮಾತ್ರ ನಿರ್ಮಾಣಕ್ಕೆ ಅನುಮತಿ ಇದೆ. ಆದರೆ, ಮೂರು ತಳ ಅಂತಸ್ತು ಕಟ್ಟಲು ಹೊರಟಿದ್ದಕ್ಕೆ ಕಾಮಗಾರಿಗೆ ತಡೆಯಾಜ್ಞೆ ಬಿದ್ದಿದೆ. ಈ ವಿಚಾರ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಅವರಿಗೆ ತಿಳಿದಿದೆಯೇ ಎಂದು ಪ್ರಶ್ನಿಸಿದ ಶಾಸಕರು, ಕಾನೂನು ಬಾಹಿರ ಕಟ್ಟಡ ನಿರ್ಮಾಣಕ್ಕೆ ಅವಕಾಶ ನೀಡುವುದಿಲ್ಲ ಎಂದರು.

ADVERTISEMENT

ಶಾಸಕ ರಘುಪತಿ ಭಟ್ ಅವರ ಹೇಳಿಕೆಗೆ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಪ್ರತಿಕ್ರಿಯಿಸಿದ್ದು, ‘ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಆರೋಗ್ಯ ಸೇವೆ ನಿರಂತರವಾಗಿರಬೇಕು, ಉತ್ತಮ ಆರೋಗ್ಯ ಸೇವೆ ಜಿಲ್ಲೆಯ ಜನರಿಗೆ ಸಿಗಬೇಕು ಎಂಬುದಷ್ಟೆ ನನ್ನ ಉದ್ದೇಶ’ ಎಂದಿದ್ದಾರೆ.

ಹಳೆಯ 50 ಬೆಡ್‌ಗಳ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ಮಳೆಗಾಲದಲ್ಲಿ ಸೋರುತ್ತಿದ್ದರಿಂದ ನಬಾರ್ಡ್ ಮೂಲಕ ₹ 10 ಕೋಟಿ ವೆಚ್ಚದಲ್ಲಿ ಹೊಸ ಕಟ್ಟಡ ಕಟ್ಟಲು ಹಿಂದೆ ಪ್ರಯತ್ನಿಸಲಾಗಿತ್ತು. ಆದರೆ, ನಬಾರ್ಡ್ ಅನುದಾನವನ್ನು ನಗರ ಪ್ರದೇಶದಲ್ಲಿ ಬಳಸಿಕೊಳ್ಳಲು ಅವಕಾಶವಿಲ್ಲದ ಕಾರಣ ಬ್ರಹ್ಮಾವರ ಸಮುದಾಯ ಆಸ್ಪತ್ರೆ ಕಟ್ಟಡ ನಿರ್ಮಾಣಕ್ಕೆ ಬಳಸಿಕೊಳ್ಳಲಾಗಿತ್ತು ಎಂದು ಮಧ್ವರಾಜ್ ತಿಳಿಸಿದ್ದಾರೆ.

ತಾಯಿ ಹಾಗೂ ಮಕ್ಕಳ ಆಸ್ಪತ್ರೆಯನ್ನು ಯಾರು ಬೇಕಿದ್ದರೂ ನಡೆಸಲಿ. ಸಾರ್ವಜನಿಕರಿಗೆ ಸಿಗುತ್ತಿರುವ ಸೇವೆ ನಿಲ್ಲಬಾರದು. ಆಸ್ಪತ್ರೆಯ ಸಿಬ್ಬಂದಿಗೆ ವೇತನ ಹಾಗೂ ಸೇವಾ ಭದ್ರತೆ ಸಿಗಬೇಕು ಎಂದು ಪ್ರಮೋದ್ ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.