
ಕೋಟ (ಬ್ರಹ್ಮಾವರ): ದುರ್ಬಲ ಸಮುದಾಯದ ಏಳಿಗೆಗೆ ಶ್ರಮಿಸುವ ಕಾರ್ಯ ಭಗವಂತನಿಗೆ ಸಲ್ಲಿಸುವ ಭಕ್ತಿಯಷ್ಟೆ ಶ್ರೇಷ್ಠವಾದದ್ದು ಎಂದು ಉಡುಪಿ ಪುತ್ತಿಗೆ ಮಠದ ಸುಗುಣೇಂದ್ರತೀರ್ಥ ಸ್ವಾಮೀಜಿ ಹೇಳಿದರು.
ಕೋಟತಟ್ಟು ಗ್ರಾಮ ಪಂಚಾಯಿತಿ, ದಾನಿಗಳ ವತಿಯಿಂದ ಚಿಟ್ಟಿಬೆಟ್ಟಿನ ಕೊರಗ ಸಮುದಾಯದ 8 ಕುಟುಂಬಗಳಿಗೆ ನಿರ್ಮಿಸಿಕೊಟ್ಟ ಮನೆಗಳನ್ನು ಶನಿವಾರ ಹಸ್ತಾಂತರಿಸಿ ಅವರು ಆಶೀರ್ವಚನ ನೀಡಿದರು.
ಕುಲಕಸುಬು ಮಾಡಿ ಜೀವನ ಸಾಗಿಸುವ ಕೊರಗ ಸಮುದಾಯದ ಮುಗ್ಧ ಜೀವಗಳಿಗೆ ಆಸರೆ ನೀಡಿರುವುದು ಕೋಟತಟ್ಟು ಪಂಚಾಯಿತಿಯ ಶ್ರೇಷ್ಠ ಕಾರ್ಯ. ಈ ಕಾರ್ಯದಲ್ಲಿ ಕೈಜೋಡಿಸಿದ ದಾನಿಗಳ ಸಹಕಾರ ಶ್ಲಾಘನೀಯ ಎಂದು ಸ್ವಾಮೀಜಿ ಹೇಳಿದರು. ಪುತ್ತಿಗೆ ಮಠದ ವತಿಯಿಂದ ₹5 ಲಕ್ಷ ದೇಣಿಗೆ ಘೋಷಿಸಿದರು.
ಸಮಾಜಸೇವಕ ಎಚ್.ಎಸ್.ಶೆಟ್ಟಿ ಮಾತನಾಡಿ, ಸಮಾಜಕ್ಕೆ ನೀಡುವ ಕೊಡುಗೆಗಳು ಮಾನವೀಯ ಕಾರ್ಯ. ಕೊರಗ ಸಮುದಾಯಕ್ಕೆ ನೀಡಿದ ಸಹಕಾರ ಶ್ರೇಷ್ಠ ಕಾಯಕ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಮನೆ ನಿರ್ಮಾಣ ಕಾರ್ಯದ ಮಾರ್ಗದರ್ಶಕ, ಸಂಸದ ಕೋಟ ಶ್ರೀನಿವಾಸ ಪೂಜಾರಿ ಪ್ರಾಸ್ತಾವಿಕವಾಗಿ ಮಾತನಾಡಿ, ‘ಚಿಟ್ಟಿಬೆಟ್ಟು ನನ್ನ ಸ್ವಗ್ರಾಮದಲ್ಲಿದೆ. ಈ ಹಿಂದೆ ಇದ್ದ ಸ್ಥಿತಿಗೂ ಪ್ರಸ್ತುತ ಸ್ಥಿತಿಗೂ ಅಜಗಜಾಂತರ ವ್ಯತ್ಯಾಸವಿದೆ’ ಎಂದರು.
ಕೊರಗ ಕಾಲೊನಿಗೆ ಚಿತ್ರ ನಟ ರಿಷಬ್ ಶೆಟ್ಟಿ ಭೇಟಿ ನೀಡಿ ಮನೆಯನ್ನು ವೀಕ್ಷಿಸಿ, ಕೋಟತಟ್ಟು ಗ್ರಾಮ ಪಂಚಾಯಿತಿಯ ಕಾರ್ಯವನ್ನು ಶ್ಲಾಘಿಸಿದರು. ‘ಕಾಂತಾರ’ ಚಿತ್ರಕ್ಕೆ ಕೊರಗರ ಡೋಲಿನ ನಾದ, ಆ ಸಮುದಾಯದ ಪಾತ್ರ ಕೊಡುಗೆಯನ್ನು ಸ್ಮರಿಸಿದರು. ‘ಕಾಂತಾರದಲ್ಲಿ ನಮ್ಮ ನೆಲ, ಜನ, ಸಂಸ್ಕ್ರತಿಯ ಮೂಲನಿವಾಸಿಗಳ ಬಗ್ಗೆ ಹೆಚ್ಚಿನ ಮಹತ್ವ ನೀಡಿದ್ದೆವು’ ಎಂದರು.
ವೈಭವದ ಮೆರವಣಿಗೆ: ಸಭೆಗೂ ಮುನ್ನ ರಾಷ್ಟ್ರೀಯ ಹೆದ್ದಾರಿ ಚಿಟ್ಟಿಬೆಟ್ಟು ಸಂಪರ್ಕಿಸುವ ರಸ್ತೆಯಿಂದ ಕೊರಗರ ಡೋಲು ವಾದನದ ಮೂಲಕ ಸುಗುಣೇಂದ್ರತೀರ್ಥ ಶ್ರೀಪಾದರನ್ನು ಕರೆತರಲಾಯಿತು. ಕೊರಗ ಸಮುದಾಯದ ಮಹಿಳೆಯರು ಬಣ್ಣ ಬಣ್ಣದ ಸೀರೆಯುಟ್ಟು, ಪುರುಷರು ಪಂಚೆಯಲ್ಲಿ ಭಾಗವಹಿಸಿದ್ದರು.
ದಾನಿಗಳಿಗೆ ಕೃತಜ್ಞತೆ: ಮನೆ ನಿರ್ಮಾಣ ಕಾರ್ಯಕ್ಕೆ ಕೈಜೋಡಿಸಿದ ಹಲವು ದಾನಿಗಳನ್ನು ಗೌರವಿಸಲಾಯಿತು. ಉದ್ಯಮಿ ಜಿ. ಶಂಕರ್, ಶಾಸಕ ಕಿರಣ್ ಕೊಡ್ಗಿ ಸಹಿತ ಹಲವರು ಹೆಚ್ಚಿನ ದೇಣಿಗೆ ಘೋಷಿಸಿದರು. ಶಾಸಕ ಕಿರಣ್ ಕುಮಾರ್ ಕೊಡ್ಗಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಂ.ಎ. ಗಫೂರ್, ಉದ್ಯಮಿಗಳಾದ ಮಾರಣಕಟ್ಟೆ ಕೃಷ್ಣಮೂರ್ತಿ ಮಂಜ, ಸಂಪತ್ ಕುಮಾರ್ ಶೆಟ್ಟಿ, ಗೀತಾನಂದ ಫೌಂಡೇಷನ್ ಪ್ರವರ್ತಕ ಆನಂದ ಸಿ. ಕುಂದರ್, ಮನೋವೈದ್ಯ ಡಾ.ಪ್ರಕಾಶ ತೋಳಾರ್, ಐಟಿಡಿಪಿ ಇಲಾಖೆಯ ವಿಶ್ವನಾಥ, ಕೋಟತಟ್ಟು ಪಂಚಾಯಿತಿ ಉಪಾಧ್ಯಕ್ಷೆ ಸರಸ್ವತಿ ಪೂಜಾರಿ, ಸದಸ್ಯರು, ಕೊರಗ ಸಮುದಾಯದ ಮುಖಂಡ ಗಣೇಶ ಕುಂಭಾಶಿ ಪಾಲ್ಗೊಂಡಿದ್ದರು.
ಪಂಚಾಯಿತಿ ಅಧ್ಯಕ್ಷ ಸತೀಶ ಕುಂದರ್ ಬಾರಿಕೆರೆ ಸ್ವಾಗತಿಸಿದರು. ವಿಜಯ ಭಟ್ ಕಡೆಕಾರ್ ವಂದೇ ಮಾತರಂ ಗೀತೆ ಹಾಡಿದರು. ಪಂಚಾಯಿತಿ ಪಿಡಿಒ ರವೀಂದ್ರ ರಾವ್ ನಿರೂಪಿಸಿದರು. ಸದಸ್ಯ ಎಚ್. ಪ್ರಮೋದ್ ಹಂದೆ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.