ಬ್ರಹ್ಮಾವರ: ಕಿಂಡಿ ಅಣೆಕಟ್ಟುಗಳು, ಮದಗ, ಇಂಗು ಗುಂಡಿಗಳು, ಕೊಳವೆ ಬಾವಿ ಮತ್ತು ತೆರೆದ ಬಾವಿಗಳು ಬ್ರಹ್ಮಾವರ ತಾಲ್ಲೂಕಿನ ವಾರಂಬಳ್ಳಿ, ಹಂದಾಡಿ, ಚಾಂತಾರು ಮತ್ತು ಹಾರಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜನರಿಗೆ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರವಾಗಿದೆ.
ವಾರಂಬಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 10 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಇದ್ದು, ಪಂಚಾಯಿತಿ ವತಿಯಿಂದ ಕೇವಲ 738 ಕುಟುಂಬಗಳಿಗೆ ನಲ್ಲಿ ನೀರಿನ ಸಂಪರ್ಕ ನೀಡಲಾಗಿದೆ.
ಉಪ್ಪಿನಕೋಟೆ, ಸಾಲಿಕೇರಿ, ಇಂದಿರಾನಗರ, ಬಿರ್ತಿ ಮತ್ತು ಬ್ರಹ್ಮಾವರ ಪೇಟೆಗೆ 8 ಬೋರ್‌ವೆಲ್ ಮತ್ತು 3 ತೆರೆದ ಬಾವಿಗಳಿಂದ ನೀರನ್ನು ನೀಡಲಾಗುತ್ತಿದೆ. ಇತ್ತೀಚಿನ ವರ್ಷಗಳಲ್ಲಿ ಬ್ರಹ್ಮಾವರ ತಾಲ್ಲೂಕಿನಲ್ಲಿ ಬೇಸಿಗೆಯ ದಿನಗಳಲ್ಲಿ ಅಷ್ಟೇನು ನೀರಿನ ಸಮಸ್ಯೆ ಕಾಣಿಸಿಕೊಳ್ಳದ ಕಾರಣ ಹೆಚ್ಚು ನೀರಿನ ಸಮಸ್ಯೆ ಉದ್ಭವಿಸಿಲ್ಲವಾದರೂ ಪ್ರತಿವರ್ಷ ಮುಂಜಾಗರೂಕತೆಯಿಂದ ಟ್ಯಾಂಕರ್ ನೀರು ಸರಬರಾಜಿಗೆ ವ್ಯವಸ್ಥೆ ಮಾಡಲಾಗುತ್ತಿದೆ.
ಮಡಿಸಾಲು, ಸೀತಾ ನದಿ ಸುತ್ತುವರಿದ ತಾಲ್ಲೂಕಿನ ಬಹುತೇಕ ಮನೆಗಳಲ್ಲಿ ತೆರೆದ ಬಾವಿ ಮತ್ತು ಕೊಳವೆ ಬಾವಿ ಇರುವುದರಿಂದಲೂ ಪಂಚಾಯಿತಿ ವ್ಯಾಪ್ತಿಯಲ್ಲಿ ನೀರಿನ ಸಮಸ್ಯೆ ಹೆಚ್ಚು ಕಾಣಿಸಿಕೊಳ್ಳುತ್ತಿಲ್ಲ.
ಚಾಂತಾರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಚಾಂತಾರಿನಲ್ಲಿ 390 ಮತ್ತು ಹೇರೂರು ಗ್ರಾಮದಲ್ಲಿ 450 ನಲ್ಲಿ ಸಂಪರ್ಕ ಕಲ್ಪಿಸಲಾಗಿದೆ. ಇಲ್ಲಿಯೂ ಕೂಡಾ ಬೋರ್‌ವೆಲ್ ಮತ್ತು ತೆರೆದ ಬಾವಿಯಿಂದ ನೀರನ್ನು ನೀಡಲಾಗುತ್ತಿದೆ.
ವರದಾನವಾದ ಮದಗ: ಚಾಂತಾರಿನ ಸುಮಾರು 30 ಎಕರೆ ವ್ಯಾಪ್ತಿ ಪ್ರದೇಶದಲ್ಲಿ ಹಬ್ಬಿಕೊಂಡಿರುವ ಚಾಂತಾರು ಮದಗ ಚಾಂತಾರು ಗ್ರಾಮಕ್ಕೆ ನೀರುಣಿಸುವ ಕೆಲಸ ಮಾಡುತ್ತಿದೆ. ಮದಗದ (ಕೆರೆ) ಪಕ್ಕದಲ್ಲೇ ಗ್ರಾಮ ಪಂಚಾಯಿತಿಯಿಂದ ಬಾವಿ ತೋಡಿ ಅಲ್ಲಿಂದ ಪಂಪ್ ಅಳವಡಿಸಿ ಮನೆ ಮನೆಗೆ ನಲ್ಲಿ ಮೂಲಕ ನೀರನ್ನು ಕೊಡಲಾಗುತ್ತಿದೆ. ಹಲವು ವರ್ಷಗಳಿಂದ ಹೂಳು ತುಂಬಿದ್ದ ಕೆರೆಯನ್ನು ಸುಮಾರು ₹1 ಕೋಟಿಗೂ ಅಧಿಕ ವೆಚ್ಚದಲ್ಲಿ ಹೂಳು ತೆಗೆದ ಕಾರಣ ಇಂದಿಗೂ ಬೇಸಿಗೆಯಲ್ಲೂ ನೀರು ತುಂಬಿರುತ್ತದೆ.
ಬೇಸಿಗೆಯಲ್ಲಿ ಕೆಂಪು ನೀರು: ಚಾಂತಾರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸದ್ಯ ಎರಡು ದಿನಕ್ಕೊಮ್ಮೆ ನೀರು ನೀಡಲಾಗುತ್ತಿದೆ. ಆದರೆ, ಕೆಲವೊಮ್ಮೆ ಕೆಸರು ಮಿಶ್ರಿತ ನೀರು ಬರುತ್ತಿದೆ ಎಂದು ಗ್ರಾಮಸ್ಥರು ದೂರುತ್ತಾರೆ.
ನೀರಿನ ಸಮಸ್ಯೆ ಕಂಡು ಬಂದಲ್ಲಿ ಟ್ಯಾಂಕರ್ ಮೂಲಕ ನೀರು ಒದಗಿಸಲು ಸಿದ್ಧರಿದ್ದೇವೆ. ಈ ಬಗ್ಗೆ ಟೆಂಡರ್ ಪ್ರಕ್ರಿಯೆ ಮಾಡಲು ಸಿದ್ಧತೆ ಮಾಡಲಾಗಿದೆಸತೀಶ ನಾಯಕ್ ಪಿಡಿಒ ಚಾಂತಾರು ಪಂಚಾಯಿತಿ
ಶಾಸಕ ಯಶಪಾಲ್ ಸುವರ್ಣ ಅವರ ನೇತೃತ್ವದಲ್ಲಿ ಈಚೆಗೆ ನಡೆದ ಸಭೆಯಲ್ಲಿ ಕುಡಿಯುವ ನೀರಿನ ಸಮಸ್ಯೆಗೆ ಪಂಚಾಯಿತಿ ಮಟ್ಟದಲ್ಲೇ ಪರಿಹಾರ ಕಂಡುಕೊಳ್ಳಲು ತಿಳಿಸಿದ್ದು ಅದರಂತೆ ಗ್ರಾ.ಪಂ. ಮಟ್ದದಲ್ಲೇ ವ್ಯವಸ್ಥೆ ಮಾಡಲಾಗುತ್ತಿದೆಶ್ರೀಕಾಂತ್ ಹೆಗ್ಡೆ ತಹಶೀಲ್ದಾರ್
ವರದಾನವಾಗಲಿದೆ ಜಲಜೀವನ್ ಮಿಷನ್
ಬ್ರಹ್ಮಾವರ ತಾಲ್ಲೂಕಿನ ಬಹುತೇಕ ಎಲ್ಲ ಗ್ರಾಮ ಪಂಚಾಯಿತಿಗಳಿಗೆ ಜಲಜೀವನ್ ಮಿಷನ್ ಯೋಜನೆಯ ಕಾಮಗಾರಿ ಪೂರ್ಣಗೊಂಡಲ್ಲಿ ವರದಾನವಾಗಲಿದೆ. ವಾರಾಹಿಯಿಂದ ಬರುವ ನೀರು ಸದ್ಯ ಉಡುಪಿ ಮಣಿಪಾಲ ನಗರಕ್ಕೆ ಹೋಗುತ್ತಿದ್ದು ಸದ್ಯದಲ್ಲೇ ಗ್ರಾಮ ಪಂಚಾಯಿತಿಗಳಿಗೂ ಅದು ವಿಸ್ತರಣೆ ಆಗಲಿದೆ. ಇದರಿಂದ ಬಹುತೇಕ ನೀರಿನ ಸಮಸ್ಯೆಗೆ ಪರಿಹಾರ ಸಿಗುತ್ತದೆಯಾದರೂ ನೀರಿನ ಶುಲ್ಕ ಹೆಚ್ಚಳದ ಭೀತಿ ಗ್ರಾಮಸ್ಥರನ್ನು ಕಾಡಬಹುದು ಎನ್ನುವ ಚಿಂತೆ ಸ್ಥಳೀಯರದ್ದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.