
ಬ್ರಹ್ಮಾವರ: ತಾಲ್ಲೂಕು ಕೇಂದ್ರದಿಂದ ಕೇವಲ 3–4 ಕಿ.ಮೀ ದೂರದಲ್ಲಿರುವ ಮಟಪಾಡಿ ಗ್ರಾಮದಲ್ಲಿ 3 ಸಾವಿರಕ್ಕೂ ಅಧಿಕ ಜನಸಂಖ್ಯೆ ಇದ್ದರೂ ಇದುವರೆಗೆ ಬಸ್ ಸಂಪರ್ಕ ಕಲ್ಪಿಸದಿರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.
ಹಂದಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಈ ಗ್ರಾಮದಲ್ಲಿ ಉತ್ತಮ ರಸ್ತೆ ಸೌಲಭ್ಯ ಇದ್ದರೂ ಸರ್ಕಾರಿ ಅಥವಾ ಖಾಸಗಿ ಬಸ್‌ಗಳ ಸೇವೆ ಇಲ್ಲ. ಪರಿಣಾಮ ಗ್ರಾಮಸ್ಥರು, ವಿದ್ಯಾರ್ಥಿಗಳು ದಿನನಿತ್ಯ ನೀಲಾವರ ಅಥವಾ ಬ್ರಹ್ಮಾವರಕ್ಕೆ ನಡೆದುಕೊಂಡೇ ಹೋಗಿ ಅಲ್ಲಿಂದ ಬಸ್ ಮೂಲಕ ತಮ್ಮ ಕೆಲಸ ಕಾರ್ಯಗಳಿಗೆ, ಶಾಲಾ–ಕಾಲೇಜಿಗೆ ತೆರಳಬೇಕಾದ ಸ್ಥಿತಿ ನಿರ್ಮಾಣವಾಗಿದೆ.
ಪರಿಶಿಷ್ಟ ಜಾತಿ–ಪಂಗಡ ಹಾಗೂ ಕೊರಗ ಸಮುದಾಯದ ಕುಟುಂಬಗಳು ಸೇರಿದಂತೆ 3 ಸಾವಿರಕ್ಕೂ ಅಧಿಕ ಜನಸಂಖ್ಯೆ ಇರುವ ಮಟಪಾಡಿ ಗ್ರಾಮವು ನೀಲಾವರ, ಕೂರಾಡಿ, ಬಾರ್ಕೂರು, ಮಂದಾರ್ತಿ, ಕೊಕ್ಕರ್ಣೆ ಸಂಪರ್ಕ ಮಾರ್ಗದಲ್ಲಿದೆ. ಪ್ರಾಥಮಿಕ, ಪ್ರೌಢಶಾಲೆ, ಸಹಕಾರಿ ಬ್ಯಾಂಕ್, ಹಾಲು ಉತ್ಪಾದಕರ ಸಂಘ, ವಿದ್ಯಾರ್ಥಿ ಹಾಸ್ಟೆಲ್ ಸೇರಿದಂತೆ ಮೂಲಸೌಕರ್ಯಗಳಿದ್ದರೂ ಸಾರಿಗೆ ಸೌಲಭ್ಯ ಮಾತ್ರ ಕೊರತೆಯಾಗಿದೆ. ಜನರು ಈ ಕುರಿತಾಗಿ ಹಲವು ವರ್ಷದಿಂದ ಮನವಿ ನೀಡುತ್ತ ಬಂದಿದ್ದರೂ ಬೇಡಿಕೆ ಈಡೇರಿಲ್ಲ.
ರಾಜ್ಯ ಸರ್ಕಾರದ ‘ಶಕ್ತಿ’ ಯೋಜನೆಯಡಿ ಗ್ರಾಮಾಂತರ ಪ್ರದೇಶಗಳಲ್ಲಿ ಬಸ್ ಸಂಚಾರ ಹೆಚ್ಚಿದರೂ ಮಟಪಾಡಿ ಮಾರ್ಗಕ್ಕೆ ಬಸ್ ಸೇವೆ ಇನ್ನೂ ಆರಂಭವಾಗಿಲ್ಲ. ಉಡುಪಿ–ಕೊಕ್ಕರ್ಣೆ ಮಾರ್ಗದಲ್ಲಿ (ವಯಾ ಬ್ರಹ್ಮಾವರ, ಮಟಪಾಡಿ, ನೀಲಾವರ, ಕೂರಾಡಿ, ತಂತ್ರಾಡಿ, ಮಂದಾರ್ತಿ) ಬೆಳಿಗ್ಗೆ ಹಾಗೂ ಸಂಜೆ ಸಮಯದಲ್ಲಿ ಬಸ್ ಸಂಚಾರ ಆರಂಭಿಸಿದರೆ ವಿದ್ಯಾರ್ಥಿಗಳು ಹಾಗೂ ಉದ್ಯೋಗಿಗಳಿಗೆ ಅನುಕೂಲವಾಗಲಿದೆ. ಜೊತೆಗೆ ಸಾರಿಗೆ ನಿಗಮಕ್ಕೂ ಆದಾಯ ದೊರಕಲಿದೆ ಎನ್ನುವುದು ಗ್ರಾಮಸ್ಥರ ಅಭಿಪ್ರಾಯ.
ರೂಟ್ ಬದಲಾವಣೆಗೆ ವಿರೋಧ: ಬ್ರಹ್ಮಾವರ–ಬಾರ್ಕೂರು–ಮಂದಾರ್ತಿ ಮಾರ್ಗದಲ್ಲಿ ಕಳೆದ 9 ವರ್ಷಗಳಿಂದ ಎರಡು ಕೆಎಸ್‌ಆರ್‌ಟಿಸಿ ಬಸ್‌ಗಳು ಯಶಸ್ವಿಯಾಗಿ ಸಂಚರಿಸುತ್ತಿವೆ. ಈ ಮಾರ್ಗದಲ್ಲಿ ಖಾಸಗಿ ಬಸ್‌ಗಳ ಪೈಪೋಟಿಯ ನಡುವೆಯೂ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಸರ್ಕಾರಿ ಬಸ್‌ಗಳನ್ನೇ ಅವಲಂಬಿಸಿದ್ದಾರೆ. ಆದರೆ, ಇದೀಗ ಅಲ್ಲಿ ಓಡಾಟ ನಡೆಸುವ ಒಂದು ಬಸ್‌ನ ಮಾರ್ಗವನ್ನು ಬದಲಿಸಿ, ಮಟಪಾಡಿ ಮೂಲಕ ಕೊಕ್ಕರ್ಣೆಗೆ ಓಡಿಸಲು ಹುನ್ನಾರ ನಡೆಯುತ್ತಿದೆ ಎನ್ನುವ ಮಾತು ಕೇಳಿ ಬರುತ್ತಿದ್ದು, ಇದರಿಂದ ಈ ರೂಟ್‌ನಲ್ಲಿ ಸಂಚರಿಸುವ ಪ್ರಯಾಣಿಕರಿಗೆ ಸಮಸ್ಯೆ ಮತ್ತು ಸಂಸ್ಥೆಗೆ ಆರ್ಥಿಕ ನಷ್ಟವೂ ಉಂಟಾಗುವ ಭೀತಿ ಇದೆ ಎನ್ನಲಾಗಿದೆ.
ಮಿನಿ ಬಸ್ ಬೇಡಿಕೆ: ಬ್ರಹ್ಮಾವರ, ಮಟಪಾಡಿ, ನೀಲಾವರ, ಕೂರಾಡಿ, ತಂತ್ರಾಡಿ, ಮಂದಾರ್ತಿ ಮಾರ್ಗದಲ್ಲಿ ಕೆಲವು ಕಡೆ ಕಿರಿದಾದ ರಸ್ತೆ ಹಾಗೂ ತಿರುವುಗಳಿರುವ ಕಾರಣ ದೊಡ್ಡ ಬಸ್ ಸಂಚಾರ ಸಾಧ್ಯವಿಲ್ಲ. ಹೀಗಾಗಿ ಈ ಮಾರ್ಗಕ್ಕೆ ಪ್ರತ್ಯೇಕವಾಗಿ ಮಿನಿ ಬಸ್ ಸೇವೆ ಆರಂಭಿಸಬೇಕು ಎಂದು ಉಡುಪಿ ಕೆಎಸ್‌ಆರ್‌ಟಿಸಿ ಘಟಕಕ್ಕೆ ಮನವಿ ಸಲ್ಲಿಸಲಾಗಿದೆ. ಆದರೆ, ಖಾಸಗಿ ಬಸ್ ಮಾಲೀಕರ ಒತ್ತಡದಿಂದ ಹೊಸ ಬಸ್ ಸೇವೆ ಆರಂಭಕ್ಕೆ ವಿಳಂಬವಾಗುತ್ತಿದೆ ಎಂಬ ಆರೋಪ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.
ತಾಲ್ಲೂಕು ಮಟ್ಟದ ಗ್ಯಾರಂಟಿ ಯೋಜನೆ ಸಭೆಗಳಲ್ಲಿ ಮಟಪಾಡಿಗೆ ಶಕ್ತಿ ಯೋಜನೆಯಡಿ ಬಸ್ ಸೇವೆ ಆರಂಭಿಸುವಂತೆ ನಿರಂತರ ಒತ್ತಾಯ ವ್ಯಕ್ತವಾಗುತ್ತಿದ್ದು, ಸಾರಿಗೆ ಇಲಾಖೆಯಿಂದ ಅನುಮೋದನೆಯೂ ದೊರೆತಿದೆ ಎನ್ನಲಾಗಿದೆ. ಆದರೂ ಇದುವರೆಗೆ ಬಸ್ ಸಂಚಾರ ಆರಂಭವಾಗಿಲ್ಲ. ಒಟ್ಟಾರೆ ಮಟಪಾಡಿ ಮಾರ್ಗವಾಗಿ ನೀಲಾವರ–ಮಂದಾರ್ತಿಗೆ ಹೊಸ ಮಿನಿ ಬಸ್ ಸೇವೆ ಆರಂಭಿಸಿದರೆ ವಿದ್ಯಾರ್ಥಿಗಳು ಹಾಗೂ ಬ್ರಹ್ಮಾವರ, ಉಡುಪಿ, ಮಣಿಪಾಲಕ್ಕೆ ತೆರಳುವ ಉದ್ಯೋಗಿಗಳಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂಬುದು ಗ್ರಾಮಸ್ಥರ ನಿರೀಕ್ಷೆಯಾಗಿದೆ.
ಮಟಪಾಡಿ ನೀಲಾವರ ಮಂದಾರ್ತಿಗೆ ಬಸ್ ಸಂಚಾರ ಆರಂಭವಾದಲ್ಲಿ ನೀಲಾವರ ಮತ್ತು ಮಂದಾರ್ತಿ ದೇವಸ್ಥಾನಕ್ಕೆ ಹೋಗುವ ಭಕ್ತರಿಗೆ ಹೆಚ್ಚಿನ ಪ್ರಯೋಜನವಾಗುತ್ತದೆ. ಈ ಬಗ್ಗೆ ಅಧಿಕಾರಿಗಳು ಗಮನ ಹರಿಸಿ ಕೂಡಲೇ ಬಸ್ ಸಂಚಾರ ಆರಂಭಿಸಬೇಕುಮಹೇಂದ್ರ ಕುಮಾರ್ ಮಾಜಿ ಅಧ್ಯಕ್ಷ ನೀಲಾವರ ಗ್ರಾ.ಪಂ.
ತಿಂಗಳಾದರೂ ಬಸ್ ಓಡಾಟ ಆರಂಭವಾಗಿಲ್ಲ
ಬ್ರಹ್ಮಾವರ ಮಟಪಾಡಿ ಮಾರ್ಗದಲ್ಲಿ ಬಸ್ ಸಂಚಾರ ಆರಂಭಿಸಲು ಗ್ರಾಮಸ್ಥರು ಅನೇಕ ಬಾರಿ ಮನವಿ ನೀಡಿದ್ದಾರೆ. ಕಳೆದ ಒಂದು ತಿಂಗಳ ಹಿಂದೆಯೂ ಕೆ.ಎಸ್.ಆರ್.ಟಿ.ಸಿಯ ಮಂಗಳೂರು ವಿಭಾಗದ ಮುಖ್ಯಸ್ಥರಲ್ಲಿ ಮನವಿ ಮಾಡಿದ್ದಾಗ ಅವರು ಒಂದು ವಾರದಲ್ಲಿ ಆರಂಭಿಸುತ್ತೇವೆ ಎನ್ನುವ ಭರವಸೆ ನೀಡಿದ್ದರು. ಆದರೆ ಒಂದು ತಿಂಗಳಾದರೂ ಬಸ್ ಓಡಾಟ ಆರಂಭವಾಗಿಲ್ಲ. ಶೀಘ್ರ ಬಸ್ ಸಂಚಾರ ಆರಂಭವಾಗದೇ ಇದ್ದಲ್ಲಿ ಹೋರಾಟ ಮಾಡಲಾಗುವುದು ಎಂದು ಮಹೇಂದ್ರ ಕುಮಾರ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.