ಬ್ರಹ್ಮಾವರ: ಕೃಷಿ ಮೇಳದಲ್ಲಿ ಯುವ ಸಮೂಹವನ್ನು ಸೆಳೆಯುವ ವಿಚಾರ ಗೋಷ್ಠಿಗಳನ್ನು ಆಯೋಜನೆ ಮಾಡಿ ಅವರು ಕೃಷಿಯತ್ತ ಮುಖ ಮಾಡವಂತೆ ಮಾಡಬೇಕಿರುವುದು ನಮ್ಮ ಕರ್ತವ್ಯ ಎಂದು ಶಿವಮೊಗ್ಗದ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಸಚಿವ ಕೆ.ಸಿ. ಶಶಿಧರ ಹೇಳಿದರು.
ಇಲ್ಲಿನ ಕೃಷಿ ವಿಜ್ಞಾನ ಕೇಂದ್ರದಲ್ಲಿ ಎರಡು ದಿನ ನಡೆದ ಕೃಷಿ ಮೇಳದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿ, ಹೊಸ ತಂತ್ರಜ್ಞಾನಗಳ ಮೂಲಕ ಯುವಕರಲ್ಲಿ ಆಸಕ್ತಿ ಮೂಡಿಸಿ ಅವರೇ ಕೃಷಿಯಲ್ಲಿ ಹೊಸ ಆವಿಷ್ಕಾರ ಮಾಡುವಂತಾಗಬೇಕು. ಕೃಷಿ ಮೇಳಗಳು ವಾಣಿಜ್ಯ ಮೇಳಗಳಾಗದೆ ಯುವಕರನ್ನು, ಮಕ್ಕಳನ್ನು ಕೃಷಿಯತ್ತ ಆಕರ್ಷಿಸುವಂತೆ ಮಾಡಬೇಕಿದೆ ಎಂದು ಹೇಳಿದರು.
ಪ್ರಗತಿಪರ ಕೃಷಿಕ ಸತೀಶ ಶೆಟ್ಟಿ ಯಡ್ತಾಡಿ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಸಿಗುವ ಕೃಷಿ ಸೌಲಭ್ಯಗಳ ಕುರಿತು ರೈತರಿಗೆ ಮಾಹಿತಿ ನೀಡಬೇಕು. ಮಕ್ಕಳಲ್ಲಿ ಭೂಮಿಯ ಮಹತ್ವದ ಅರಿವು ಮೂಡಿಸಬೇಕು. ಮನುಷ್ಯನಿಗೆ ಆರೋಗ್ಯ, ನೆಮ್ಮದಿ ಸಿಗುವುದು ಕೃಷಿಯಿಂದ ಮಾತ್ರ ಎಂದು ಹೇಳಿದರು.
ಸಾರ್ವಜನಿಕ ಮುಕ್ತ ಚರ್ಚೆಯಲ್ಲಿ ‘ಕಾಡು ಪ್ರಾಣಿಗಳ ಹಾವಳಿ ತಪ್ಪಿಸಿ ಕೃಷಿ ಉಳಿಸಲು ಸರ್ಕಾರಕ್ಕೆ ಹಕ್ಕೊತ್ತಾಯ ಮಂಡಿಸಬೇಕು’ ಎಂಬ ಆಗ್ರಹ ಕೇಳಿಬಂತು.
ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಧನಂಜಯ, ಹಿರಿಯ ಕ್ಷೇತ್ರ ಅಧೀಕ್ಷಕ ಶಂಕರ್ ಎಂ, ಉಳ್ಳಾಲ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರದ ಮುಖ್ಯಸ್ಥ ಮಾರುತೇಶ್, ಉಡುಪಿ ಸಹಾಯಕ ಕೃಷಿ ನಿರ್ದೇಶಕ ಕಲ್ಲೇಶ್ ಪ್ರಸಾದ್ ಎಚ್.ಎಂ, ಉಡುಪಿ ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕ ಎಲ್. ಹೇಮಂತ ಕುಮಾರ್, ಕೃಷಿ ವಿಜ್ಞಾನಿಗಳಾದ ರೇವಣ್ಣ ರೇವಣ್ಣನವರ್, ಆರತಿ, ಭೂಮಿಕಾ, ಶ್ರೀದೇವಿ ಭಾಗವಹಿಸಿದ್ದರು.
ಕೃಷಿ ಮೇಳದಲ್ಲಿ ಭಾಗವಹಿಸಿದ‌್ದ 253 ಸ್ಟಾಲ್‌ಗಳಲ್ಲಿ ಉತ್ತಮ ಮಳಿಗೆಗಳಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಉಡುಪಿಯ ತೋಟಗಾರಿಕೆ ಇಲಾಖೆ ಸರ್ಕಾರಿ ಇಲಾಖೆಗಳ ವಿಭಾಗದಲ್ಲಿ ಪ್ರಥಮ ಬಹುಮಾನ ಪಡೆಯಿತು. ಕೆವಿಕೆ ಸಹಾಯಕ ಪ್ರಾಧ್ಯಾಪಕ ಚೈತನ್ಯ ಎಚ್.ಎಸ್. ಸ್ವಾಗತಿಸಿದರು. ಕೆ.ವಿ. ಸುಧೀರ್ ಕಾಮತ್ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.