ADVERTISEMENT

ಭ್ರಷ್ಟಾಚಾರ ವಿರೋಧಿ ಜಾಗೃತಿ ಸಪ್ತಾಹ

‘ಸಮಾಜದಲ್ಲಿ ಭ್ರಷ್ಟಾಚಾರದ ವಿರುದ್ಧ ದೃಢ ಮತ್ತು ಜಾಗೃತ ನಿಲುವು ಮೂಡಿಸುವ ಉದ್ದೇಶ’

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2025, 5:16 IST
Last Updated 28 ಅಕ್ಟೋಬರ್ 2025, 5:16 IST
ಜಿಲ್ಲಾ ಪ್ರಧಾನ ವಿಶೇಷ ಮತ್ತು ಸತ್ರ ನ್ಯಾಯಧೀಶ ಕಿರಣ್ ಎಸ್‌. ಗಂಗಣ್ಣವರ್ ಉದ್ಘಾಟಿಸಿದರು.
ಜಿಲ್ಲಾ ಪ್ರಧಾನ ವಿಶೇಷ ಮತ್ತು ಸತ್ರ ನ್ಯಾಯಧೀಶ ಕಿರಣ್ ಎಸ್‌. ಗಂಗಣ್ಣವರ್ ಉದ್ಘಾಟಿಸಿದರು.   

ಬ್ರಹ್ಮಾವರ:  ‘ಭ್ರಷ್ಟಾಚಾರ ವಿರೋಧಿ ಜಾಗೃತಿ ಸಪ್ತಾಹವು ಆಡಳಿತದಲ್ಲಿ ಪಾರದರ್ಶಕತೆ ಸುಧಾರಿಸಲು, ಭ್ರಷ್ಟಾಚಾರ ತಡೆಯಲು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಗುರಿ ಹೊಂದಿದೆ’ ಎಂದು ಜಿಲ್ಲಾ ಪ್ರಧಾನ ವಿಶೇಷ ಮತ್ತು ಸತ್ರ ನ್ಯಾಯಾಧೀಶ ಕಿರಣ್ ಎಸ್‌. ಗಂಗಣ್ಣವರ್ ಹೇಳಿದರು.

ಜಿಲ್ಲಾ ಲೋಕಾಯುಕ್ತ ಪೊಲೀಸ್ ಇಲಾಖೆ ಸಹಯೋಗದಲ್ಲಿ ಇಲ್ಲಿನ ಎಸ್‌.ಎಂ.ಎಸ್‌ ಕಾಲೇಜಿನಲ್ಲಿ ಸೋಮವಾರ ನಡೆದ ಭ್ರಷ್ಟಾಚಾರ ವಿರೋಧಿ ಜಾಗೃತಿ ಸಪ್ತಾಹ ಉದ್ಘಾಟಿಸಿ ಅವರು ಮಾತನಾಡಿದರು.

ಸಮಾಜದಲ್ಲಿ ಭ್ರಷ್ಟಾಚಾರದ ವಿರುದ್ಧ ದೃಢ ಮತ್ತು ಜಾಗೃತ ನಿಲುವು ಮೂಡಿಸುವುದು, ಸಾರ್ವಜನಿಕ ಆಡಳಿತದ ಎಲ್ಲಾ ಕ್ಷೇತ್ರಗಳಲ್ಲಿ ಪಾರದರ್ಶಕ ನೀತಿಗಳನ್ನು ಜಾರಿಗೊಳಿಸಲು ಪ್ರೋತ್ಸಾಹಿಸುವುದು. ಉತ್ತಮ ಆಡಳಿತಕ್ಕಾಗಿ ಸಂಬಂಧಪಟ್ಟ ಎಲ್ಲರನ್ನೂ ಒಗ್ಗೂಡಿಸಿ ಭ್ರಷ್ಟಾಚಾರ ಮುಕ್ತ ಸಮಾಜ ನಿರ್ಮಾಣದಲ್ಲಿ ಅವರ ಪಾಲ್ಗೊಳ್ಳುವಿಕೆಯನ್ನು ಖಚಿತಪಡಿಸುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶ ಎಂದು ತಿಳಿಸಿದರು.

ADVERTISEMENT

ಪ್ರಾಸ್ತಾವಿಕವಾಗಿ ಮಾತನಾಡಿದ ಪೊಲೀಸ್‌ ನಿರೀಕ್ಷಕ ಮಂಜುನಾಥ, ವಿದ್ಯಾರ್ಥಿಗಳಲ್ಲಿ ಕಾನೂನು ಸಂವೇದನೆ ಬೆಳೆಸುವ ಅಗತ್ಯತೆ ಇದೆ. ಆದ್ದರಿಂದ ಇಂತಹ ಜಾಗೃತಿ ಕಾರ್ಯಕ್ರಮಗಳನ್ನು ಕಾಲೇಜುಗಳಲ್ಲಿ ಆಯೋಜಿಸಲಾಗುತ್ತಿದೆ ಎಂದು ತಿಳಿಸಿದರು.

ಹಿರಿಯ ಸಿವಿಲ್‌ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮನು ಪಾಟೀಲ್ ಬಿ.ವೈ. ಕಾನೂನು ಸೇವೆಗಳ ಮಹತ್ವದ ಕುರಿತು ಮಾಹಿತಿ ನೀಡಿದರು. ಪ್ರಾಂಶುಪಾಲ ರಾಬರ್ಟ್‌ ರೊಡ್ರಿಗಸ್‌ ವಿದ್ಯಾರ್ಥಿಗಳಿಗೆ ಕಾನೂನು ಪಾಲನೆ ಮತ್ತು ಸಾಮಾಜಿಕ ನಿಷ್ಠೆಯ ಪ್ರತಿಜ್ಞೆ ಬೋಧಿಸಿದರು. ಕಾಲೇಜಿನ ಸಂಚಾಲಕ ಫಾದರ್ ಎಂ.ಸಿ. ಮಥಾಯ್‌ ಅಧ್ಯಕ್ಷತೆ ವಹಿಸಿದ್ದರು.‌ ಕಾಲೇಜು ವಿಭಾಗದ ಕಾರ್ಯದರ್ಶಿ ಆಲ್ವರಿಸ್‌ ಡಿಸಿಲ್ವ, ಉಪನ್ಯಾಸಕ ಭರತ್‌ರಾಜ್‌ ಎಸ್‌. ಭಾಗವಹಿಸಿದ್ದರು.

ಪೊಲೀಸ್‌ ನಿರೀಕ್ಷಕ ರಾಜೇಂದ್ರ ನಾಯ್ಕ ಎಂ.ಎನ್. ವಂದಿಸಿದರು. ಪ್ರಶಾಂತ ಶೆಟ್ಟಿ ನಿರೂಪಿಸಿದರು.

- ಯುವ ಜನರಲ್ಲಿ ಭ್ರಷ್ಟಾಚಾರ ಕುರಿತ ಜಾಗೃತಿ ಮೂಡಿಸುವ ಮೂಲಕ ಹಾಗೂ ನೈತಿಕ ಸ್ಥೈರ್ಯದೊಂದಿಗೆ ಭ್ರಷ್ಟಾಚಾರ ತಡೆಗಟ್ಟಬಹುದು
ಕಿರಣ್‌ ಎಸ್‌. ಗಂಗಣ್ಣವರ್ ಜಿಲ್ಲಾ ಪ್ರಧಾನ ವಿಶೇಷ ಮತ್ತು ಸತ್ರ ನ್ಯಾಯಾಧೀಶ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.