ADVERTISEMENT

ಬ್ರಹ್ಮಾವರ | ಬೆಳ್ಮಾರು ಸರ್ಕಾರಿ ಶಾಲೆಗೆ ಬಸ್ ಕೊಡುಗೆ

​ಪ್ರಜಾವಾಣಿ ವಾರ್ತೆ
Published 13 ಜನವರಿ 2023, 6:23 IST
Last Updated 13 ಜನವರಿ 2023, 6:23 IST
ಆರೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೆಳ್ಮಾರು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಉಡುಪಿಯ ಭಾರತ್ ಕೇಸರಿ ಟ್ರಸ್ಟ್ ವತಿಯಿಂದ ಮನೋಹರ್ ರಾವ್ ಹಾಗೂ ರಾಜೇಶ್ ರಾವ್ ಸ್ಮರಣಾರ್ಥ ಉಚಿತ ಬಸ್‌ ಸೌಲಭ್ಯಕ್ಕೆ ಜಿಲ್ಲಾಧಿಕಾರಿ ಕೂರ್ಮರಾವ್ ಗುರುವಾರ ಚಾಲನೆ ನೀಡಿದರು
ಆರೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೆಳ್ಮಾರು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಉಡುಪಿಯ ಭಾರತ್ ಕೇಸರಿ ಟ್ರಸ್ಟ್ ವತಿಯಿಂದ ಮನೋಹರ್ ರಾವ್ ಹಾಗೂ ರಾಜೇಶ್ ರಾವ್ ಸ್ಮರಣಾರ್ಥ ಉಚಿತ ಬಸ್‌ ಸೌಲಭ್ಯಕ್ಕೆ ಜಿಲ್ಲಾಧಿಕಾರಿ ಕೂರ್ಮರಾವ್ ಗುರುವಾರ ಚಾಲನೆ ನೀಡಿದರು   

ಬ್ರಹ್ಮಾವರ: ಆರೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೆಳ್ಮಾರು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಉಡುಪಿಯ ಭಾರತ್ ಕೇಸರಿ ಟ್ರಸ್ಟ್ ವತಿಯಿಂದ ಮನೋಹರ್ ರಾವ್ ಹಾಗೂ ರಾಜೇಶ್ ರಾವ್ ಸ್ಮರಣಾರ್ಥ ನೀಡಲಾದ ಉಚಿತ ಬಸ್ ಸೌಲಭ್ಯಕ್ಕೆ ಜಿಲ್ಲಾಧಿಕಾರಿ ಕೂರ್ಮರಾವ್‌ ಗುರುವಾರ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಉಡುಪಿ ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ಸರ್ಕಾರಿ ಶಾಲೆಗೆ ಉಚಿತ ಬಸ್ ಸೌಲಭ್ಯ ನೀಡುತ್ತಿರುವುದು ಸಂತೋಷದ ವಿಷಯ. ಮುಂದಿನ ದಿನಗಳಲ್ಲಿ ಸಂಸ್ಥೆಯಿಂದ ಇನ್ನೂ ಹೆಚ್ಚಿನ ರೀತಿಯಲ್ಲಿ ಶಿಕ್ಷಣಕ್ಕೆ ಪೂರಕವಾದ ವಾತಾವರಣ ನಿರ್ಮಾಣವಾಗಲಿ ಎಂದು ಹಾರೈಸಿದರು.

ಉಡುಪಿಯ ಭಾರತ್ ಕೇಸರಿ ಟ್ರಸ್ಟ್‌ನ ಅಧ್ಯಕ್ಷ ಎಂ.ಕೆ ಭಟ್ ಮಾತನಾಡಿ, ‘ಶಿಕ್ಷಣ ಪ್ರತಿಯೊಂದು ಮಗುವಿನ ಹಕ್ಕು. ಅದಕ್ಕೆ ಪೂರಕವಾದ ವಾತಾವರಣ ನಿರ್ಮಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಭಾರತ್ ಕೇಸರಿ ಟ್ರಸ್ಟ್ ವತಿಯಿಂದ ‘ನಮ್ಮ ಊರು ನಮ್ಮ ಶಾಲೆ’ ಹೆಸರಿನ ಅಭಿಯಾನದ ಅಡಿಯಲ್ಲಿ ಸರ್ಕಾರಿ ಶಾಲೆ ಮಕ್ಕಳ ಸಂಚಾರಕ್ಕೆ ಉಚಿತ ಶಾಲಾ ಬಸ್ ಸೌಲಭ್ಯವನ್ನು ನೀಡುವ ಮಹತ್ವದ ಕಾರ್ಯವನ್ನು ಪ್ರಾರಂಭಿಸಿದ್ದೇವೆ. ಯೋಜನೆಯ ಪ್ರಾರಂಭದಲ್ಲಿ ಬ್ರಹ್ಮಾವರ ತಾಲ್ಲೂಕಿನ ಆರೂರು ಗ್ರಾಮದ ಬೆಳ್ಮಾರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮಕ್ಕಳಿಗೆ ಬಸ್ಸಿನ ಸೌಲಭ್ಯ ನೀಡಲು ಹೊಸ ಬಸ್ ಖರೀದಿಸಿ ನೀಡಲಾಗಿದೆ. ಮುಂದಿನ ದಿನಗಳಲ್ಲಿ ರಾಜ್ಯದಾದ್ಯಂತ ಈ ಯೋಜನೆ ಅಡಿಯಲ್ಲಿ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಗ್ರಾಮೀಣ ಪ್ರದೇಶದಲ್ಲಿ ಸರ್ಕಾರಿ ಶಾಲೆಗಳನ್ನು ಗುರುತಿಸಿ ಭಾರತ್ ಕೇಸರಿ ಟ್ರಸ್ಟ್‌ ನೆರವಿನಿಂದ ಈ ಸೌಲಭ್ಯ ಪ್ರಾರಂಭಿಸಲಾಗುವುದು’ ಎಂದರು.

ADVERTISEMENT

ಪ್ರಸ್ತುತ ಯೋಜನೆಯಲ್ಲಿ ಟ್ರಸ್ಟ್ ವತಿಯಿಂದ ಚಾಲಕನ ವೇತನ ಮತ್ತು ಇಂಧನ ಪೂರೈಕೆ ಖರ್ಚು–ವೆಚ್ಚಗಳನ್ನು ಭರಿಸಲಾಗುತ್ತದೆ. ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡುವ ನಿಟ್ಟಿನಲ್ಲಿ ನಮ್ಮ ಊರು ನಮ್ಮ ಶಾಲೆ ಅಭಿಯಾನ ನಡೆಸಲಾಗುತ್ತದೆ ಎಂದರು. ದಾನಿಗಳಾದ ವಸಂತಿ ರಾವ್ ಮತ್ತು ಅಂಜನ ರಾವ್ ಅವರನ್ನು ಗೌರವಿಸಲಾಯಿತು.

ಆರೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಮತಾ ಸಂತೋಷ್ ಶೆಟ್ಟಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಚ್.ಪ್ರಸನ್ನ, ಡಿಡಿಪಿಐ ಗಣಪತಿ, ಬ್ರಹ್ಮಾವರ ಬಿ.ಇ.ಒ ರಂಗನಾಥ್, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷೆ ನಳಿನಿ ಪ್ರದೀಪ್ ರಾವ್, ಟ್ರಸ್ಟ್‌ ಕಾರ್ಯದರ್ಶಿ ಎಸ್.ಸಂತೋಷ್, ಮುಖ್ಯ ಶಿಕ್ಷಕ ರಜತ್, ಪಂಚಾಯಿತಿ ಸದಸ್ಯ ಗಣೇಶ್ ಪೂಜಾರಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.