ADVERTISEMENT

ವಿದ್ಯಾರ್ಥಿಗಳಿಗೆ ಬಸ್ ಸೌಲಭ್ಯ ಕಲ್ಪಿಸಿ: ಸಾರ್ವಜನಿಕರ ಆಗ್ರಹ

ಬ್ರಹ್ಮಾವರ ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸಭೆಯಲ್ಲಿ ಸಾರ್ವಜನಿಕರ ಆಗ್ರಹ

​ಪ್ರಜಾವಾಣಿ ವಾರ್ತೆ
Published 30 ಜುಲೈ 2025, 6:26 IST
Last Updated 30 ಜುಲೈ 2025, 6:26 IST
<div class="paragraphs"><p>ಪ್ರಾತಿನಿಧಿಕ ಚಿತ್ರ&nbsp;</p></div>

ಪ್ರಾತಿನಿಧಿಕ ಚಿತ್ರ 

   

– ಪ್ರಜಾವಾಣಿ ಚಿತ್ರ

ಬ್ರಹ್ಮಾವರ: ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ವಿಜ್ಞಾನ, ತಾಂತ್ರಿಕ ಶಿಕ್ಷಣ ಪಡೆಯಲು ಪಟ್ಟಣ ಪ್ರದೇಶಗಳಿಗೆ ತೆರಳಲು ಅನೇಕ ಕಡೆ ಇಂದಿಗೂ ಬಸ್‌ ಸೌಕರ್ಯವೇ ಇಲ್ಲದಿರುವುದರಿಂದ ತೀವ್ರ ಸಮಸ್ಯೆಯಾಗಿದ್ದು, ಅಂತಹ ಪ್ರದೇಶಗಳಿಗೆ ಪ್ರಥಮ ಪ್ರಾಶಸ್ತ್ಯ ನೀಡಿ ಸೌಲಭ್ಯ ಕಲ್ಪಿಸಬೇಕು ಎಂಬ ಆಗ್ರಹ ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸಭೆಯಲ್ಲಿ ವ್ಯಕ್ತವಾಯಿತು.

ADVERTISEMENT

ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸದಸ್ಯ ರಮೇಶ ತಿಂಗಳಾಯ, ಸತೀಶ ಆಚಾರ್ಯ, ಗೋಪಿ ನಾಯ್ಕ, ಶ್ರೀನಿವಾಸ ವಡ್ಡರ್ಸೆ, ರೇಖಾ ಸುವರ್ಣ ಮತ್ತಿತರರು  ಮಾತನಾಡಿ, ಅನೇಕ ಪ್ರದೇಶಗಳು ಖಾಸಗಿ ಬಸ್‌ಗಳ ಸೇವೆಯಿಂದಲೂ ವಂಚಿತವಾಗಿದ್ದು, ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಆದ್ಯತೆ ನೀಡಿ ಬಸ್ ಒದಗಿಸಿದರೆ ನಾಗರಿಕರಿಗೂ ಅನುಕೂಲವಾಗಲಿದೆ ಎಂದರು.

ಸಮಿತಿಯ ಅಧ್ಯಕ್ಷೆ ಡಾ.ಸುನಿತಾ ಶೆಟ್ಟಿ ಅವರು ಮಾಬುಕಳ, ಹಂಗಾರಕಟ್ಟೆ, ಕೊಕ್ಕರ್ಣೆ, ಕುಂದಾಪುರ ಸೇರಿದಂತೆ ಬಸ್ ಸೌಕರ್ಯ ಅನಿವಾರ್ಯವಾಗಿರುವ ಪ್ರದೇಶಗಳ ಬಗ್ಗೆ ತುರ್ತು ಕ್ರಮಕ್ಕಾಗಿ ನಿರ್ಣಯದೊಂದಿಗೆ ಪ್ರಸ್ತಾವನೆ ಸಲ್ಲಿಸುವಂತೆ ಸೂಚಿಸಿದರು. ಹಂಗಾರಕಟ್ಟೆ ಪ್ರದೇಶದ ಬಳಿ ಬಾರ್ಜ್ ವ್ಯವಸ್ಥೆಗೆ ಆದ್ಯತೆ ನೀಡಿರುವುದರಿಂದ ಬಸ್ ಸೌಕರ್ಯ ಕಲ್ಪಿಸಿದಲ್ಲಿ ಪ್ರವಾಸಿಗರಿಗೂ ಅನುಕೂಲವಾಗಲಿದೆ ಎಂಬ ಅಭಿಪ್ರಾಯ ವ್ಯಕ್ತವಾಯಿತು. ಕೆಲವು ಬಸ್‌ಗಳು ಒಂದೇ ಬಾಗಿಲು ಹೊಂದಿದ್ದು, ವಿದ್ಯಾರ್ಥಿಗಳ ಸುರಕ್ಷತೆ ದೃಷ್ಟಿಯಿಂದ 2 ಬಾಗಿಲು ಇರುವ ಬಸ್‌ಗಳನ್ನು ಒದಗಿಸಲು ಆಗ್ರಹ ವ್ಯಕ್ತವಾಯಿತು.

ಸಮಿತಿಯ ಸದಸ್ಯ ಸುರೇಶ ಪೂಜಾರಿ ಅವರು ಅಂತ್ಯೋದಯ ಪಡಿತರ ಕಾರ್ಡ್‌ ಕಾರಣ ಸಾಲ ಸೌಲಭ್ಯಕ್ಕೆ ತೊಂದರೆಯಾಗುತ್ತಿರುವ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅಧಿಕಾರಿಗಳು, ಇದರಿಂದ ಸಾಲ ಸೌಲಭ್ಯಕ್ಕೆ ತೊಂದರೆ ಇಲ್ಲ. ಇಲಾಖೆಯನ್ನು ಸಂಪರ್ಕಿಸಿದರೆ ಅಂತ್ಯೋದಯ ಕಾರ್ಡ್‌ಗಳನ್ನು ಬಿಪಿಎಲ್‌ಗೆ ಬದಲಾಯಿಸುವ ಅವಕಾಶವಿದೆ ಎಂದು ಸಭೆಯ ಗಮನಕ್ಕೆ ತಂದರು.

ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷೆ ಡಾ.ಸುನಿತಾ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಎಚ್.ವಿ. ಇಬ್ರಾಹಿಂಪುರ, ಸಹಾಯಕ ನಿರ್ದೇಶಕ ಮಹೇಶ ಕೆ, ಲೆಕ್ಕಾಧಿಕಾರಿ ಮೆಲ್ವಿನ್, ದಿವ್ಯಾ, ಗೋಪಾಲ್, ಅನುಷ್ಠಾನ ಸಮಿತಿ ಸದಸ್ಯರು, ಅನುಷ್ಠಾನದ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.