ADVERTISEMENT

ಬೈಂದೂರು| ನೀರಿನ ಸಮಸ್ಯೆ ಎದುರಾಗುವ ಆತಂಕ: ಜಲಕ್ಷಾಮ ಎದುರಿಸಲು ಸಕಲ ಸಿದ್ಧತೆ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2026, 2:25 IST
Last Updated 20 ಫೆಬ್ರುವರಿ 2026, 2:25 IST
ವತ್ತಿನಣೆಯಲ್ಲಿ ನಿರ್ಮಾಣಗೊಂಡ 50 ಸಾವಿರ ಲೀಟರ್‌ ಸಾಮರ್ಥ್ಯದ ಓವರ್‌ ಹೆಡ್‌ ಟ್ಯಾಂಕ್‌
ವತ್ತಿನಣೆಯಲ್ಲಿ ನಿರ್ಮಾಣಗೊಂಡ 50 ಸಾವಿರ ಲೀಟರ್‌ ಸಾಮರ್ಥ್ಯದ ಓವರ್‌ ಹೆಡ್‌ ಟ್ಯಾಂಕ್‌   

ಬೈಂದೂರು: ಬೈಂದೂರು ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಸದ್ಯ ನೀರಿನ ಸಮಸ್ಯೆ ಇಲ್ಲದಿದ್ದರೂ ಮಾರ್ಚ್‌ ತಿಂಗಳಿನಿಂದ ತಾರಾಪತಿ, ಯಡ್ತರೆ, ಆಲಂದೂರು, ದುರ್ಮಿ, ಗರ್ಜಿನಹಿತ್ಲು, ತೊಂಡೆಮಕ್ಕಿ ಮುಂತಾದೆಡೆ ನೀರಿನ ಸಮಸ್ಯೆ ಉಂಟಾಗುವ ಆತಂಕ ಎದುರಾಗಿದೆ.

ಜಲಜೀವನ್‌ ಮಿಷನ್‌ ಯೋಜನೆಯಡಿ ಈ ಭಾಗದ ಎಲ್ಲಾ ಕಡೆಗಳಲ್ಲಿ ಪೈಪ್‌ಲೈನ್‌ ಮಾಡಲಾಗಿದೆ. ವಾರಾಹಿ, ಹೊಸಂಗಡಿ ನೀರು ಸಂಸ್ಕರಣಾ ಘಟಕದಿಂದ ನೀರು ಸರಬರಾಜು ಆಗಬೇಕಾಗಿದ್ದು ತಾಂತ್ರಿಕ ಕಾರಣಗಳಿಂದಾಗಿ ಇನ್ನೂ ನೀರಿನ ಸಂಪರ್ಕ ನೀಡಿಲ್ಲ.

ಕಳೆದ ವರ್ಷ ವತ್ತಿನಣೆಯಲ್ಲಿ ₹ 6 ಲಕ್ಷ ವೆಚ್ಚದ 50 ಸಾವಿರ ಲೀಟರ್‌ ಸಾಮರ್ಥ್ಯದ ಓವರ್‌ ಹೆಡ್‌ ಟ್ಯಾಂಕ್‌ ನಿರ್ಮಿಸಲಾಗಿದ್ದು, ಈ ವರ್ಷದಿಂದ ಕಾರ್ಯಾರಂಭಗೊಂಡಿದೆ. ಅದರ ನೀರನ್ನು ತುರ್ತು ಸಂದರ್ಭಗಳಲ್ಲಿ ಬಳಸಿಕೊಳ್ಳಲು ಕಾಯ್ದಿರಿಸಿಕೊಂಡು ಪಟ್ಟಣ ಪಂಚಾಯಿತಿಯ ಮೂರು ವಾಹನಗಳಿಗೆ ಎರಡು ಸಾವಿರ ಲೀಟರ್‌ ಸಾಮರ್ಥ್ಯದ ಟ್ಯಾಂಕ್‌ ಅಳವಡಿಸಿ ಅಗತ್ಯವಿರುವಲ್ಲಿ ನೀರನ್ನು ಸರಬರಾಜು ಮಾಡುವ ವ್ಯವಸ್ಥೆ ಮಾಡಿಕೊಳ್ಳಲಾಗಿದೆ.

ADVERTISEMENT

ಬೈಂದೂರು ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಒಟ್ಟು 24,957 ಜನಸಂಖ್ಯೆ ಮತ್ತು 5,320 ಮನೆಗಳಿದ್ದು, ಒಟ್ಟು 1071 ನಳ್ಳಿ ಸಂಪರ್ಕ ಕಲ್ಪಿಸಲಾಗಿದೆ.

5 ಸಾವಿರ ಮನೆಗಳಿಗೆ ನಳ್ಳಿ ಸಂಪರ್ಕದ ಬೇಡಿಕೆ ಇರುವುದರಿಂದ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಗಂಟೆಹೊಳೆ ಪ್ರದೇಶದಲ್ಲಿ ಹರಿಯುವ ಸುಮಾನಾವತಿ ನದಿಯ ಮೂಲವನ್ನು ಗುರುತಿಸಿದ್ದು, ಈ ನದಿಯಲ್ಲಿ ಬೇಸಿಗೆಯಲ್ಲಿ ನೀರು ಲಭ್ಯವಿರುವುದರಿಂದ ಈ ನೀರನ್ನು ವೈಜ್ಞಾನಿಕ ರೀತಿಯಲ್ಲಿ ಸಂಸ್ಕರಿಸಿ ಬಳಸುವ ಸಂಬಂಧ ಯೋಜನೆಯನ್ನು ರೂಪಿಸಲಾಗಿದೆ.

ಈ ಬಗ್ಗೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಪರಿಶೀಲನಾ ವರದಿ ಹಾಗೂ ನಿರಾಕ್ಷೇಪಣಾ ಪತ್ರ ನೀಡಲಾಗಿದೆ. ಆದರೆ ಅರಣ್ಯ ಇಲಾಖೆಯ ನಿರಾಕ್ಷೇಪಣಾ ಪತ್ರ ಅಗತ್ಯವಿದ್ದು ಈಗಾಗಲೇ ಬೈಂದೂರು ವಲಯ ಅರಣ್ಯಾಧಿಕಾರಿಗಳು ವಿಭಾಗೀಯ ಅರಣ್ಯಾಧಿಕಾರಿಗಳಿಗೆ ಪ್ರಸ್ತಾವ ಕಳುಹಿಸಿದ್ದಾರೆ. ನಿರಾಕ್ಷೇಪಣಾ ಪತ್ರಕ್ಕಾಗಿ ಕಾಯಲಾಗುತ್ತಿದೆ. ಈ ಯೋಜನೆಯು ಕಾರ್ಯರೂಪಕ್ಕೆ ಬಂದಲ್ಲಿ ಬೈಂದೂರು ಪಟ್ಟಣ ಪಂಚಾಯಿತಿ ವ್ಯಾಪ್ತಿಗೆ 24 X 7 ಮಾದರಿಯಲ್ಲಿ ಸಮರ್ಪಕ ಕುಡಿಯುವ ನೀರಿನ ವ್ಯವಸ್ಥೆ ಸಾಧ್ಯವಾಗಲಿದೆ.

ಪಟ್ಟಣ ಪಂಚಾಯತಿ ಸಮಿತಿ ರಚನೆಯಾಗದ ಕಾರಣ ಯಾವುದೇ ಹೊಸ ಯೋಜನೆ ರೂಪಿಸಲು ಅನುದಾನ ಬಿಡುಗಡೆಗೊಳ್ಳುತ್ತಿಲ್ಲ.

ತಾರಾಪತಿ, ಯಡ್ತರೆ, ಆಲಂದೂರು, ದುರ್ಮಿ, ಗರ್ಜಿನಹಿತ್ಲು, ತೊಂಡೆಮಕ್ಕಿ ಮುಂತಾದೆಡೆ ನೀರಿನ ಸಮಸ್ಯೆ ಎದುರಾದರೆ ಎರಡು ದಿನಗಳಿಗೊಮ್ಮೆ ನಳ್ಳಿ ಅಥವಾ ಟ್ಯಾಂಕರ್‌ ಮೂಲಕ ನೀರು ಸರಬರಾಜು ಮಾಡಲಾಗುವುದು ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಹೇಳಿದ್ದಾರೆ.

ಸಾರ್ವಜನಿಕರಿಗೆ ನೀರಿನ ತೊಂದರೆಯಾಗದಂತೆ ಈಗಾಗಲೇ ಸಿದ್ಧತೆ ಮಾಡಿಕೊಳ್ಳಲಾಗಿದೆ. ಅಕ್ರಮ ನಳ್ಳಿ ಸಂಪರ್ಕಕ್ಕೆ ಹಾಗೂ ನೀರು ಪೋಲಾಗದಂತೆ ಕ್ರಮ ಕೈಗೊಳ್ಳಲಾಗುವುದು
ಅಜಯ್‌ ಭಂಡಾರ್ಕರ್‌ ಬೈಂದೂರು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.