ADVERTISEMENT

ಬೈಂದೂರು ಉತ್ಸವ ಜನವರಿ ಮೊದಲ ವಾರ

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2025, 5:18 IST
Last Updated 28 ಅಕ್ಟೋಬರ್ 2025, 5:18 IST
ಬೈಂದೂರು ಉತ್ಸವದ ಪೂರ್ವಭಾವಿ ಸಭೆಯು ಶಾಸಕ ಗುರುರಾಜ ಗಂಟಿಹೊಳೆ ಅಧ್ಯಕ್ಷತೆಯಲ್ಲಿ ನಡೆಯಿತು.
ಬೈಂದೂರು ಉತ್ಸವದ ಪೂರ್ವಭಾವಿ ಸಭೆಯು ಶಾಸಕ ಗುರುರಾಜ ಗಂಟಿಹೊಳೆ ಅಧ್ಯಕ್ಷತೆಯಲ್ಲಿ ನಡೆಯಿತು.   

ಬೈಂದೂರು: ಸಾಂಸ್ಕೃತಿಕ ಸಂಭ್ರಮದ ಎರಡನೇ ವರ್ಷದ ಬೈಂದೂರು ಉತ್ಸವ ಜನವರಿ ಮೊದಲ ವಾರ ನಡೆಯಲಿದೆ ಎಂದು ಶಾಸಕ ಗುರುರಾಜ ಗಂಟಿಹೊಳೆ ತಿಳಿಸಿದರು.

ಉಪ್ಪುಂದ ಕಾರ್ಯಕರ್ತ ಕಚೇರಿಯಲ್ಲಿ ನಡೆದ ಉತ್ಸವದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕ್ಷೇತ್ರದಲ್ಲಿ ಸಾಂಸ್ಕೃತಿಕ ವೇದಿಕೆ ಮೂಲಕ ಅಭಿವೃದ್ಧಿ ಪರಿಕಲ್ಪನೆ ಉದ್ದೇಶದಿಂದ ಮತ್ತು ಜಾಗತಿಕ ಮಟ್ಟದಲ್ಲಿ ಬೈಂದೂರು ಕ್ಷೇತ್ರದವರನ್ನು ಒಗ್ಗೂಡಿಸುವ ಚಿಂತನೆಯಲ್ಲಿ ಸಮೃದ್ಧ ಬೈಂದೂರು, ವಿವಿಧ ಸಂಘ ಸಂಸ್ಥೆಗಳು, ತಾಲ್ಲೂಕು ಆಡಳಿತದ ಸಹಭಾಗಿತ್ವದಲ್ಲಿ ಉತ್ಸವ ಆಯೋಜಿಸಲಾಗಿದೆ ಎಂದು ಹೇಳಿದರು.

ಕ್ಷೇತ್ರದ ಪ್ರವಾಸೋದ್ಯಮದ ಅವಕಾಶಗಳನ್ನು ಪರಿಚಯಿಸುವುದು. ಆ ಮೂಲಕ ಜಾಗತಿಕ ಮಟ್ಟದ ಹೂಡಿಕೆದಾರರನ್ನು ಬೈಂದೂರಿಗೆ ಕರೆತರುವುದು. ಕ್ಷೇತ್ರದ ಪ್ರತಿಭೆಗಳಿಗೆ ಅವಕಾಶ ನೀಡುವುದು ಕಾರ್ಯಕ್ರಮದ ಮುಖ್ಯ ಉದ್ದೇಶ. ಪ್ರವಾಸೋದ್ಯಮ, ಧಾರ್ಮಿಕ ಕೇಂದ್ರ, ಶಿಕ್ಷಣ ಕ್ರಾಂತಿ, ನೆಲಮೂಲ ಆಚರಣೆ, ಸರಳ ಸರ್ಕಾರಿ ವ್ಯವಸ್ಥೆ ಇದರ ಆಶಯವಾಗಿದೆ ಎಂದರು.

ADVERTISEMENT

ಉದ್ಯೋಗ, ಆರೋಗ್ಯ, ಕೃಷಿ, ಆಹಾರ, ವಿಜ್ಞಾನ, ಕರಕುಶಲ, ಶಿಕ್ಷಣ ಮೇಳಗಳು, ಸಂಜೀವಿನಿ ಸಂಘದ ಗ್ರಾಮೀಣ ಸಂತೆ, ಕಂಬಳೋತ್ಸವ, ಸನಾತನ ಶಸ್ತ್ರ– ಶಾಸ್ತ್ರದ ಮಾಹಿತಿ, ಸೋಮೇಶ್ವರದಲ್ಲಿ ಬೀಚ್ ಉತ್ಸವ, ಕರಾವಳಿ ಖಾದ್ಯಗಳು, ವಸ್ತು ಪ್ರದರ್ಶನ ಮತ್ತು ಮಾರಾಟ ಮಳಿಗೆಗಳು ಉತ್ಸವದಲ್ಲಿ ಇರಲಿವೆ. ಬ್ಯಾಂಕಿಂಗ್, ಕೈಗಾರಿಕೆ, ಪ್ರವಾಸೋದ್ಯಮ, ಸಹಕಾರಿ ಕ್ಷೇತ್ರ ಸೇರಿದಂತೆ ವಿವಿಧ ಗೋಷ್ಠಿಗಳು, ರಂಗಗೀತೆ, ನೃತ್ಯೋತ್ಸವ, ಗಾನಲೋಕ, ಜಾದೂ, ಯೋಗ, ಭರತನಾಟ್ಯ, ಗೆಜ್ಜೆನಾದ, ಜಾಂಬೂರಿ, ಟ್ಯಾಬ್ಲೊ ಮೇಳ, ದೇಹಧಾರ್ಢ್ಯ ಪ್ರದರ್ಶನ, ನಾದನೂಪುರ, ಕಾರ್ಟೂನ್ ಹಬ್ಬ, ಮನರಂಜನಾ ಪಾರ್ಕ್, ಜನಪದ ಹಬ್ಬ, ಗೋಪೂಜೆ, ದೀಪ ವೈಭವ, ಸ್ಕೂಬಾ ಡೈವ್ ಮುಂತಾದವು  ಉತ್ಸವಕ್ಕೆ ಮೆರುಗು ನೀಡಲಿವೆ ಎಂದರು.

ಬೈಂದೂರು ವಲಯ ಕಂಬಳ ಸಮಿತಿಗೆ ಅಧ್ಯಕ್ಷರಾಗಿ ಆಯ್ಕೆಯಾದ ಸಸಿಹಿತ್ಲು ಮಂಜು ಪೂಜಾರಿ ಅವರನ್ನು ಸನ್ಮಾನಿಸಲಾಯಿತು. ಸಮೃದ್ಧ ಜನಸೇವಾ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಬಿ.ಎಸ್. ಸುರೇಶ ಶೆಟ್ಟಿ, ನಿರ್ದೇಶಕ ಯು. ಪಾಂಡುರಂಗ ಪಡಿಯಾರ್, ಬಿಜೆಪಿ ಮಂಡಲ ಅಧ್ಯಕ್ಷೆ ಅನಿತಾ ಆರ್.ಕೆ., ಉಪ್ಪುಂದ ಗ್ರಾಮ ಪಂಚಾಯಿತಿ ಅಧ್ಯಕ್ಷ ಮೋಹನಚಂದ್ರ, ಕಿರಿಮಂಜೇಶ್ವರ ಗ್ರಾಮ ಪಂಚಾಯಿತಿ ಅಧ್ಯಕ್ಷ ಶೇಖರ ಖಾರ್ವಿ, ನಿವೃತ್ತ ಯೋಧ ಬಿ. ಚಂದ್ರಶೇಖರ ನಾವಡ, ಸಂಜೀವಿನಿ ಒಕ್ಕೂಟದ ತಾಲ್ಲೂಕು ಅಧ್ಯಕ್ಷೆ ಗೀತಾ, ಸುರೇಶ ಬಟವಾಡಿ, ಪುಷ್ಪರಾಜ ಶೆಟ್ಟಿ, ಶ್ಯಾಮಲಾ ಕುಂದರ್, ಜಗನ್ನಾಥ ಉಪ್ಪುಂದ, ಸವಿತಾ ದಿನೇಶ್, ಸಂದೇಶ ಭಟ್ ಭಾಗವಹಿಸಿದ್ದರು. ಉತ್ಸವದ ಸಂಚಾಲಕ ಗಣೇಶ ಗಾಣಿಗ ನಿರ್ವಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.