
ಬೈಂದೂರು: ‘ಗಳಿಕೆಯ ಒಂದಂಶವನ್ನು ದಾನ ಮಾಡಬೇಕೆಂದು ಎಲ್ಲಾ ಧರ್ಮಗಳೂ ಸಾರುತ್ತವೆ. ಉಳ್ಳವರು ಇಲ್ಲದವರಿಗೆ ದಾನ ಮಾಡುವ ಗುಣ ಬೆಳೆಸಿಕೊಳ್ಳಬೇಕು. ಇದರಿಂದ ದಾನ ಪಡೆದವನಿಗಷ್ಟೇ ಅಲ್ಲ ನೀಡಿದವರ ಮನಸ್ಸಿಗೂ ಆನಂದ ಸಿಗುತ್ತದೆ. ನಾವು ನೀಡಿದ ದಾನ ಪುಣ್ಯ ಹೆಚ್ಚಾಗುವಂತೆ ಮಾಡಿ ಕಷ್ಟಕಾಲದಲ್ಲಿ ಸಹಕರಿಸುತ್ತದೆ’ ಎಂದು ಏಕ ಜಾತಿ ಧರ್ಮ ಪೀಠ ದ್ವಾರಕಮಾಯಿ ಮಠ ಶಂಕರಪುರದ ಸಾಯಿ ಈಶ್ವರ ಗುರೂಜಿ ಹೇಳಿದರು.
ಅವರು ಈಚೆಗೆ ಶಿರೂರು ಮೇಲ್ಪಂಕ್ತಿಯಲ್ಲಿ ನಡೆದ ವರಲಕ್ಷ್ಮೀ ಚಾರಿಟಬಲ್ ಟ್ರಸ್ಟ್ ಉಪ್ಪುಂದ ಶೈಕ್ಷಣಿಕ, ಸಾಮಾಜಿಕ, ಸೇವಾ ಸಂಸ್ಥೆ ವತಿಯಿಂದ 18ನೇ ಮನೆ ವರಲಕ್ಷ್ಮೀ ನಿಲಯ ಮನೆ ಹಸ್ತಾಂತರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ವರಲಕ್ಷ್ಮೀ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಡಾ.ಗೋವಿಂದ ಬಾಬು ಪೂಜಾರಿ ಪ್ರಾಸ್ತಾವಿಕವಾಗಿ ಮಾತನಾಡಿ, 12 ವರ್ಷಗಳಿಂದ ಬಡವರಿಗಾಗಿ 17 ಮನೆಗಳನ್ನು ನಿರ್ಮಾಣ ಮಾಡಿ ಹಸ್ತಾಂತರಿಸಲಾಗಿದೆ. ಈ ಬಾರಿ ತಂದೆಯ ಕೋರಿಕೆಯಂತೆ ದುರ್ಗಿ ಪೂಜಾರಿ, ಆಶಾ ಪೂಜಾರಿ ಅವರಿಗೆ 18ನೇ ಮನೆ ನಿರ್ಮಿಸಿಕೊಡಲಾಗಿದೆ ಎಂದು ತಿಳಿಸಿದರು.
ಬಾಬು ಪೂಜಾರಿ ಚಮ್ಮನಹಿತ್ತು, ಬಿಜೂರು ಮಂಜಮ್ಮ ಪೂಜಾರಿ, ಶಿರೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ನಾಗರತ್ನ ಆಚಾರ್ಯ, ಜಿಲ್ಲಾ ಬಿಲ್ಲವರ ಮಹಾಮಂಡಲದ ಅಧ್ಯಕ್ಷೆ ಗೀತಾಂಜಲಿ ಸುವರ್ಣ, ಕಲ್ಯಾಣಪುರ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ರಾಮ ಪೂಜಾರಿ, ಬಿಜೆಪಿ ಮಂಡಲ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ, ಜಿ.ಪಂ. ಮಾಜಿ ಅಧ್ಯಕ್ಷ ಎಸ್. ರಾಜು ಪೂಜಾರಿ ಭಾಗವಹಿಸಿದ್ದರು.
ವರಲಕ್ಷ್ಮೀ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಗೋವಿಂದ ಬಾಬು ಪೂಜಾರಿ ಅವರನ್ನು ಮನೆಯವರು ಸಮ್ಮಾನಿಸಿದರು. ಅರುಣ್ ಕುಮಾರ್ ಶಿರೂರು ನಿರೂಪಿಸಿದರು. ವರಲಕ್ಷ್ಮೀ ಸೌಹಾರ್ದ ಸಹಕಾರಿ ಸಂಘದ ಬೈಂದೂರು ಶಾಖಾ ವ್ಯವಸ್ಥಾಪಕ ನಾಗರಾಜ ಪಿ. ಯಡ್ತರೆ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.