ಉಡುಪಿ: ಕರಾವಳಿ ಪ್ರದೇಶದ ಜನರಿಗೆ ಬೇಸಿಗೆ ಕಾಲದಲ್ಲಿ ಕಿಂಡಿ ಅಣೆಕಟ್ಟುಗಳೇ ಪ್ರಮುಖ ನೀರಿನಾಸರೆ. ಅಂತರ್ಜಲ ವೃದ್ಧಿ ಹಾಗೂ ಕೃಷಿ ಚಟುವಟಿಕೆಗಳಿಗೆ ಇವುಗಳು ಪೂರಕವಾಗಿವೆ.
ಜಿಲ್ಲೆಯಾದ್ಯಂತ 1,500ಕ್ಕೂ ಹೆಚ್ಚು ದೊಡ್ಡ ಹಾಗೂ ಸಣ್ಣ ಕಿಂಡಿ ಅಣೆಕಟ್ಟುಗಳಿವೆ. ಆದರೆ ಅವುಗಳ ನಿರ್ವಹಣೆ ಸಮರ್ಪಕವಾದ ರೀತಿಯಲ್ಲಿ ನಡೆಯುತ್ತಿಲ್ಲ ಎಂಬ ದೂರುಗಳು ರೈತರಿಂದ ಕೇಳಿ ಬರುತ್ತಲೇ ಇವೆ.
ಅಕಾಲಿಕವಾಗಿ ಮಳೆ ಬಾರದೆ ಇದ್ದರೆ ನವೆಂಬರ್, ಡಿಸೆಂಬರ್ ತಿಂಗಳ ಹೊತ್ತಿಗೆ ನದಿ, ಉಪನದಿ, ತೋಡುಗಳಲ್ಲಿ ನೀರಿನ ಪ್ರಮಾಣ ಗಣನೀಯ ಪ್ರಮಾಣದಲ್ಲಿ ಕುಸಿಯುತ್ತದೆ. ಅದಕ್ಕೂ ಮೊದಲು ಕಿಂಡಿ ಅಣೆಕಟ್ಟುಗಳಿಗೆ ಹಲಗೆ ಅಳವಡಿಸಿದರೆ, ಹರಿದು ಹೋಗುವ ನೀರನ್ನು ಸಂಗ್ರಹಿಸಿಡಬಹುದು. ಆದರೆ ಸಂಬಂಧಪಟ್ಟವರು ಹಲಗೆ ಅಳವಡಿಸುವಲ್ಲಿ ವಿಳಂಬ ಧೋರಣೆ ಅನುಸರಿಸುತ್ತಿದ್ದಾರೆ ಎಂಬುದು ಕೃಷಿಕರ ಆರೋಪವಾಗಿದೆ.
ಸಣ್ಣ ನೀರಾವರಿ ಇಲಾಖೆ, ಜಲಾನಯನ ಇಲಾಖೆ, ಜಿಲ್ಲಾ ಪಂಚಾಯಿತಿ ಸೇರಿದಂತೆ ವಿವಿಧ ಇಲಾಖೆಗಳ ಅಧೀನದಲ್ಲಿ ಜಿಲ್ಲೆಯಲ್ಲಿ ಕಿಂಡಿ ಅಣೆಕಟ್ಟುಗಳನ್ನು ನಿರ್ಮಿಸಲಾಗಿದೆ.
ಕೆಲವೆಡೆ ಉಪ್ಪು ನೀರು ಕೃಷಿ ಪ್ರದೇಶಗಳಿಗೆ ನುಗ್ಗದಂತೆ ತಡೆಯುವಲ್ಲಿಯೂ ಈ ಕಿಂಡಿ ಅಣೆಕಟ್ಟುಗಳು ಸಹಕಾರಿಯಾಗಿವೆ. ಆದರೆ ಕಾಲ ಕಾಲಕ್ಕೆ ಹಲಗೆ ಅಳವಡಿಸುವ ಮತ್ತು ತೆಗೆಯುವ ಹಾಗೂ ಇತರ ನಿರ್ವಹಣಾ ಕಾರ್ಯಗಳು ನಡೆಯಬೇಕಾಗಿದೆ.
ಹಿಂದೆ ಬಹುತೇಕ ಕಿಂಡಿ ಅಣೆಕಟ್ಟುಗಳಿಗೆ ಮರದ ಹಲಗೆಗಳನ್ನು ಅಳವಡಿಸಲಾಗುತ್ತಿತ್ತು. ಅವುಗಳು ಕೆಲ ವರ್ಷಗಳು ಮಾತ್ರವೇ ಬಾಳ್ವಿಕೆ ಬರುತ್ತಿತ್ತು. ಈಗ ಹೆಚ್ಚಿನದ್ದಕ್ಕೆ ಫೈಬರ್ ಹಲಗೆಗಳನ್ನು ಅಳವಡಿಸಲಾಗುತ್ತಿದೆ ಅವುಗಳು ದೀರ್ಘಕಾಲ ಬಾಳ್ವಿಕೆ ಬರುತ್ತವೆ ಎನ್ನುತ್ತಾರೆ ಅಧಿಕಾರಿಗಳು.
ಅಕ್ಟೋಬರ್ ತಿಂಗಳ ಕೊನೆಗೆ ಅಥವಾ ನವೆಂಬರ್ ತಿಂಗಳ ಆರಂಭದಲ್ಲಿ ಕಿಂಡಿ ಅಣೆಕಟ್ಟುಗಳಿಗೆ ಹಲಗೆ ಅಳವಡಿಸಬೇಕು ಎಂಬುದು ರೈತರ ಆಗ್ರಹ. ನವೆಂಬರ್, ಡಿಸೆಂಬರ್ ತಿಂಗಳಲ್ಲಿ ಜೋರಾಗಿ ಮಳೆ ಬಂದರೆ, ಕಿಂಡಿ ಅಣೆಕಟ್ಟುಗಳಿಗೆ ಹಲಗೆ ಅಳವಡಿಸಿದರೆ ನೆರೆ ಉಂಟಾಗುವ ಸಾಧ್ಯತೆ ಇದೆ ಎನ್ನುವುದು ಅಧಿಕಾರಿಗಳ ವಾದ.
ಕಾಪು: ಇಲ್ಲಿನ ಪಲಿಮಾರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅವರಾಲು ಶಾಂಭವಿ ನದಿಯಲ್ಲಿ ಕಿಂಡಿ ಅಣೆಕಟ್ಟೆಗೆ ಹಲಗೆ ಅಳವಡಿಸದೆ ಇರುವುದರಿಂದ ಉಪ್ಪು ನೀರಿನ ಸಮಸ್ಯೆ ಉಂಟಾಗಿ ಕೃಷಿಗೆ ಹಾನಿ ಉಂಟಾಗುತ್ತಿದೆ ಎಂದು ರೈತರು ದೂರಿದ್ದಾರೆ.
ಕಿಂಡಿ ಅಣೆಕಟ್ಟುಗಳಲ್ಲಿ ನಿರಂತರವಾಗಿ ನೀರು ಸೋರಿಕೆ ಆಗುತ್ತಿರುವುದರಿಂದ ಏಪ್ರಿಲ್ ಮೇ ತಿಂಗಳಿನಲ್ಲಿ ನೀರಿನ ಬರ ಕಾಣಿಸಿಕೊಳ್ಳುತ್ತದೆ. ಕುಡಿಯುವ ನೀರಿಗೂ ಸಮಸ್ಯೆಯಾಗುತ್ತದೆ. ಇದಕ್ಕೆ ಪರಿಹಾರ ಒದಗಿಸಬೇಕುರಮೇಶ ಕರ್ಕೆರ, ಉಗ್ಗೇಲ್‌ಬೆಟ್ಟು ನಿವಾಸಿ, ಬ್ರಹ್ಮಾವರ ತಾಲ್ಲೂಕು
‘ಶೇ 50ರಷ್ಟು ಹಲಗೆ ಅಳವಡಿಸಿದ್ದೇವೆ’
ಸಣ್ಣ ನೀರಾವರಿ ಇಲಾಖೆಯ ಅಧೀನದಲ್ಲಿ 666 ಕಿಂಡಿ ಅಣೆಕಟ್ಟುಗಳಿವೆ. ಅವುಗಳನ್ನು ಸಮರ್ಪಕವಾಗಿ ನಾವೇ ನಿರ್ವಹಣೆ ಮಾಡುತ್ತೇವೆ. ಶೇ50 ರಷ್ಟು ಅಣೆಕಟ್ಟುಗಳಿಗೆ ಈಗಾಗಲೇ ಹಲಗೆ ಅಳವಡಿಸಿದ್ದೇವೆ. ಈಚೆಗೆ ಜೋರಾಗಿ ಮಳೆ ಬಂದಿರುವುದರಿಂದ ತಡವಾಗಿ ಹಲಗೆ ಅಳವಡಿಸಿ ಎಂದು ಕೆಲವು ರೈತರೇ ಹೇಳುತ್ತಿದ್ದಾರೆ. ಪ್ರತಿ ವರ್ಷವೂ ನಾವು ನೀರಿನ ಒಳ ಹರಿವು ನೋಡಿಕೊಂಡು ಹಲಗೆ ಅಳವಡಿಸುತ್ತೇವೆ. ಬೇಗನೇ ಅಳವಡಿಸಿದರೆ ಅಕಾಲಿಕವಾಗಿ ಮಳೆ ಬಂದಾಗ ಸಮಸ್ಯೆಯಾಗುತ್ತದೆ ಎನ್ನುತ್ತಾರೆ ಸಣ್ಣ ನಿರಾವರಿ ಇಲಾಖೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಅರುಣ್ ಭಂಡಾರಿ.
‘ಎರಡನೇ ಬೆಳೆಗೆ ಆಶ್ರಯ’
ಜಿಲ್ಲೆಯಲ್ಲಿ ಎರಡನೇ ಬೆಳೆಗೆ ಕಿಂಡಿ ಅಣೆಕಟ್ಟುಗಳ ನೀರೇ ಆಶ್ರಯವಾಗಿದೆ. ಅವುಗಳಿಗೆ ಹಲಗೆ ಅಳವಡಿಸುವ ಕಾರ್ಯವನ್ನು ಇನ್ನೂ ವಿಳಂಬ ಮಾಡಿದರೆ ಸಮಸ್ಯೆಯಾಗಲಿದೆ. ಪಂಚಾಯಿತಿಗಳು ಅವುಗಳ ನಿರ್ವಹಣೆಗೆ ಹೆಚ್ಚಿನ ಮುತುವರ್ಜಿ ತೋರಿಸಬೇಕು. ಪ್ರತಿವರ್ಷ ನವೆಂಬರ್ ಅಂತ್ಯದೊಳಗೆ ಹಲಗೆ ಅಳವಡಿಸು ಕಾರ್ಯ ಪೂರ್ಣಗೊಳಿಸಬೇಕು ಎಂದು ಉಡುಪಿ ಜಿಲ್ಲಾ ಕೃಷಿಕ ಸಂಘದ ಪ್ರಧಾನ ಕಾರ್ಯದರ್ಶಿ ಕುದಿ ಶ್ರೀನಿವಾಸ ಭಟ್ ತಿಳಿಸಿದರು.
‘ನಿರ್ವಹಣೆಗೆ ಆದ್ಯತೆ ನೀಡಿ’
ಹಿಂದೆ ಕಿಂಡಿ ಅಣೆಕಟ್ಟುಗಳಿಗೆ ನಿರ್ವಹಣಾ ಸಮಿತಿ ಇತ್ತು. ಆದರೆ ಈಗ ಇಲ್ಲ. ಪಂಚಾಯಿತಿಗಳೂ ಅನುದಾನ ಕೊರತೆಯಿಂದ ಈ ಬಗ್ಗೆ ಮುತುವರ್ಜಿ ವಹಿಸುತ್ತಿಲ್ಲ. ನರೇಗಾ ಯೋಜನೆಯಡಿ ಯಲ್ಲಾದರೂ ಅವುಗಳ ನಿರ್ವಹಣೆ ನಡೆಸಬೇಕು. ನಮ್ಮಲ್ಲಿ ಹೊಸ ಕಿಂಡಿ ಅಣೆಕಟ್ಟುಗಳಿಗೆ ಕೊಡುವ ಅನುದಾನವನ್ನು ಅವುಗಳ ನಿರ್ವಹಣೆಗೆ ನೀಡುವುದಿಲ್ಲ. ಇದರಿಂದ ಸಮಸ್ಯೆಯಾಗಿದೆ ಎನ್ನುತ್ತಾರೆ ಭಾರತೀಯ ಕಿಸಾನ್ ಸಂಘದ ಪ್ರಧಾನ ಕಾರ್ಯದರ್ಶಿ ಸತ್ಯನಾರಾಯಣ ಉಡುಪ.
ದುಃಸ್ಥಿತಿಗೆ ತಲುಪಿದ ಕಿಂಡಿ ಅಣೆಕಟ್ಟು
ಶಿರ್ವ: ಕಾಪು ವಿಧಾನ ಸಭಾ ಕ್ಷೇತ್ರದ ಬೆಳ್ಳೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಾಂಬೂರು ದಿಂಡೊಟ್ಟು ಸಮೀಪ ಪಾಪನಾಶಿನಿ ನದಿಗೆ ನಿರ್ಮಿಸಿರುವ ಕಿಂಡಿ ಅಣೆಕಟ್ಟು ಸಕಾಲದಲ್ಲಿ ನಿರ್ವಹಣೆಯಿಲ್ಲದೆ ದುಃಸ್ಥಿತಿಗೆ ತಲುಪಿದೆ. ಪಶ್ಚಿಮ ಬದಿಯ ತಡೆಗೋಡೆಯ ಮಣ್ಣು ಕುಸಿದು ಅಣೆಕಟ್ಟೆಯ ತಳಪಾಯ ಶಿಥಿಲಗೊಂಡಿದೆ. ಸ್ಥಳೀಯರು ಈ ಕಿಂಡಿ ಅಣೆಕಟ್ಟೆಯ ಮೇಲೆ ಎಚ್ಚರದಿಂದ ಓಡಾಡುವಂತೆ ತಡೆ ಬೇಲಿ ಹಾಕಲಾಗಿದೆ. ಅಪಾಯದಲ್ಲಿರುವ ಕಿಂಡಿ ಅಣೆಕಟ್ಟಿನ ದುರಸ್ತಿ ಅತೀ ಶೀಘ್ರವಾಗಿ ಆಗಬೇಕು ಎಂಬುದು ಸ್ಥಳೀಯರ ಆಗ್ರಹವಾಗಿದೆ.
ಅಳವಡಿಕೆಯಾಗಿಲ್ಲ ಹಲಗೆ
ಹಿರಿಯಡಕ, ಪೆರ್ಡೂರು, ಭೈರಂಪಳ್ಳಿ, ಆತ್ರಾಡಿ, ಹಿರೇಬೆಟ್ಟು, ಕೊಡಿಬೆಟ್ಟು, ಪೆರ್ಣಂಕಿಲ ಭಾಗದ ಗ್ರಾಮೀಣ ಪ್ರದೇಶದಲ್ಲಿ ಕೃಷಿ ಚಟುವಟಿಕೆ ಪ್ರಧಾನವಾಗಿದೆ. ಈಗಾಗಲೇ ಭತ್ತದ ಕೃಷಿ ಮುಗಿದಿದ್ದು, ನೀರಿನ ಲಭ್ಯತೆ ಜಾಸ್ತಿ ಇರುವ ಕಡೆಗಳಲ್ಲಿ ಕೃಷಿಕರು ಮತ್ತೊಮ್ಮೆ ಭತ್ತದ ಕೃಷಿಗೆ ತಯಾರಾಗಿದ್ದರೆ, ಇನ್ನೂ ಕೆಲವೆಡೆ ತರಕಾರಿ ಬೆಳೆಯಲು ಸಿದ್ಧತೆ ನಡೆಸುತ್ತಿದ್ದಾರೆ. ಆದರೆ ಎಲ್ಲಿಯೂ ಕಿಂಡಿ ಅಣೆಕಟ್ಟುಗಳಿಗೆ ಹಲಗೆ ಅಳವಡಿಸುವ ಕಾರ್ಯ ಆರಂಭವಾಗಿಲ್ಲ. ಹಲಗೆ ಅಳವಡಿಸುವ ಜಾಗದಲ್ಲಿ ಗಿಡ ಗಂಟಿಗಳು ಸಿಲುಕಿ ಹಾಕಿಕೊಂಡಿವೆ. ಅವುಗಳನ್ನು ತೆರವುಗೊಳಿಸಿ ಶೀಘ್ರದಲ್ಲಿ ಹಲಗೆ ಅಳವಡಿಸಬೇಕೆಂದು ರೈತರು ಆಗ್ರಹಿಸಿದ್ದಾರೆ.
ನೀರಿನ ಸೋರಿಕೆ ಸಮಸ್ಯೆ
ಬ್ರಹ್ಮಾವರ: ತಾಲ್ಲೂಕಿನ ಉಗ್ಗೇಲ್ ಬೆಟ್ಟು, ಹಾವಂಜೆ, ಬೈಕಾಡಿ, ನೀಲಾವರ, ಕೋಟದ ಕೆಲವೆಡೆ ನದಿಯಲ್ಲಿ ಕಿಂಡಿ ಅಣೆಕಟ್ಟುಗಳನ್ನು ನಿರ್ಮಿಸಲಾಗಿದ್ದು, ನದಿ ತೀರದ ಕೃಷಿಕರಿಗೆ ಅನುಕೂಲವಾಗಿದೆ. ಉಪ್ಪು ನೀರು ಬಾರದಂತೆ ಹಿಂದೆ ಮರದ ದಿಂಡುಗಳನ್ನು ಬಳಸಿ ಮಣ್ಣು ತುಂಬಿ ಕಿಂಡಿ ಅಣೆಕಟ್ಟುಗಳಲ್ಲಿ ನೀರು ಶೇಖರಣೆ ಮಾಡಲಾಗುತ್ತಿತ್ತು ಆದರೆ ಈಗ ಫೈಬರ್ ಹಲಗೆಗಳನ್ನು ಬಳಸಲಾಗುತ್ತಿದೆ. ಇದರಿಂದ ನೀರಿನ ಸೋರಿಕೆ ಮತ್ತು ನಿರ್ವಹಣೆ ವೆಚ್ಚ ಕಡಿಮೆ ಎನ್ನಲಾಗುತ್ತಿದೆ. ಆದರೆ ಕಡಿಮೆ ಬೆಲೆಯ ಟೊಳ್ಳು ಫೈಬರ್ ಬಳಕೆಯಾಗುತ್ತಿರುವುದರಿಂದ ನೀರಿನ ಸೋರಿಕೆ ಹೆಚ್ಚಿದೆ ಎಂದು ಹಲವು ರೈತರ ದೂರುತ್ತಿದ್ದಾರೆ. ಮಡಿಸಾಲು ಹೊಳೆಗೆ ಉಗ್ಗೇಲ್ ಬೆಟ್ಟಿನಲ್ಲಿ ಕಿಂಡಿ ಅಣೆಕಟ್ಟಿಗೆ ಬಳಸುತ್ತಿರುವ ಫೈಬರ್ ಹಲಗೆ ಕಳಪೆ ಗುಣಮಟ್ಟದ್ದಾಗಿದ್ದು, ಇದರಿಂದ ನೀರಿನ ಸೋರಿಕೆಯಾಗುತ್ತಿದೆ ಎಂದು ಕೃಷಿಕರು ದೂರಿದ್ದಾರೆ. ಅನೇಕ ಕಿಂಡಿ ಅಣೆಕಟ್ಟುಗಳು ಗ್ರಾಮಗಳಿಗೆ ಸಂಪರ್ಕ ಕೊಂಡಿಯೂ ಆಗಿದೆ.
‘ಡಿಸೆಂಬರ್ ಅಂತ್ಯದೊಳಗೆ ಪೂರ್ಣ’
ಕಾರ್ಕಳ: ತಾಲ್ಲೂಕಿನ ವ್ಯಾಪ್ತಿಯಲ್ಲಿ 176 ಕಿಂಡಿ ಅಣೆಕಟ್ಟುಗಳಿವೆ. ಅವುಗಳಿಗೆ ಡಿಸೆಂಬರ್ ಅಂತ್ಯದೊಳಗೆ ಹಲಗೆಗಳನ್ನು ಜೋಡಿಸುವ ಕಾರ್ಯ ನಡೆಯಬೇಕಾಗಿದೆ. ಕಳೆದ ಕೆಲವು ದಿನಗಳಿಂದ ತಾಲ್ಲೂಕಿನ ವಿವಿಧೆಡೆ ಧಾರಾಕಾರವಾಗಿ ಮಳೆ ಸುರಿಯುತ್ತಿರುವ ಕಾರಣ ಈಗಾಗಲೇ ಹಲಗೆಗಳನ್ನು ಜೋಡಿಸಿದ ಕೆಲವು ಕಡೆ ನೀರು ಅಧಿಕವಾಗಿ ಜೋಡಿಸಿದ ಹಲಗೆಗಳನ್ನು ತೆರವುಗೊಳಿಸಬೇಕಾಗಿ ಬಂದಿದೆ. ಸಮಯಕ್ಕೆ ಸರಿಯಾಗಿ ಹಲಗೆ ಜೋಡಿಸುವ ಕೆಲಸ ನಡೆಯಲಿದೆ ಎಂದು ಅಧಿಕಾರಿಗಳು ತಿಳಿಸಿದರು.
ಪೂರಕ ಮಾಹಿತಿ: ಪ್ರಕಾಶ್ ಸುವರ್ಣ ಕಟಪಾಡಿ, ರಾಘವೇಂದ್ರ ಹಿರಿಯಡಕ, ಶೇಷಗಿರಿ ಭಟ್, ಹಮೀದ್ ಪಡುಬಿದ್ರಿ, ವಾಸುದೇವ ಭಟ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.