ಕುಂದಾಪುರ: ಸಹಕಾರಿ ತತ್ವದಲ್ಲಿ ಬದ್ಧತೆ ಉಳಿಸಿಕೊಂಡಿರುವ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಬಹುತೇಕ ಸಹಕಾರಿ ಸಂಸ್ಥೆಗಳು ಸ್ವಂತ ಕಟ್ಟಡ ಹೊಂದಿದ್ದು, ರಾಜ್ಯದಲ್ಲಿಯೇ ಮಾದರಿ ಜಿಲ್ಲೆ ಎನಿಸಿಕೊಂಡಿದೆ ಎಂದು ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಡಾ.ಎಂ.ಎನ್. ರಾಜೇಂದ್ರ ಕುಮಾರ್ ಹೇಳಿದರು.
ಶನಿವಾರ ಕರ್ಕುಂಜೆ ಸಹಕಾರಿ ವ್ಯವಸಾಯಿಕ ಸಂಘದ ನೂತನ ಕಟ್ಟಡ ಉದ್ಘಾಟಿಸಿ, ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಕರ್ಕುಂಜೆ ಸೊಸೈಟಿ ಗ್ರಾಹಕರ ವಿಶ್ವಾಸದಿಂದ ಅಭಿವೃದ್ಧಿ ಪಥದಲ್ಲಿ ಮುನ್ನೆಡೆಯುತ್ತಿದೆ. ದ.ಕ, ಉಡುಪಿ ಜಿಲ್ಲೆಗಳ ಸಹಕಾರಿ ಸಂಸ್ಥೆಗಳು ಸದೃಢವಾಗಿವೆ. ಶೇ 100ರಷ್ಟು ಸಾಲ ಮರುಪಾವತಿ ಆಗುತ್ತಿದೆ. ಗ್ರಾಹಕರ, ಗ್ರಾಮಸ್ಥರಿಗೆ ಅನುಕೂಲವಾಗುವಂತೆ ಜಿಲ್ಲೆಗೆ ಮಾದರಿಯಾದ ಕಟ್ಟಡ ಇಲ್ಲಿ ನಿರ್ಮಿಸಲಾಗಿದೆ. ಎಲ್ಲ ಸೌಲಭ್ಯಗಳೊಂದಿಗೆ ಪರಿಪೂರ್ಣತೆ ಕಂಡುಕೊಂಡಿರುವ ಈ ಸದನಕ್ಕೆ ₹15 ಲಕ್ಷ ನೆರವು ನೀಡಲಾಗುವುದು ಎಂದರು.
ಸಭಾಭವನ ಉದ್ಘಾಟಿಸಿದ ಮಾಜಿ ಶಾಸಕ ಬಿ. ಅಪ್ಪಣ್ಣ ಹೆಗ್ಡೆ ಮಾತನಾಡಿ, ಸಂಘದ ಅಧ್ಯಕ್ಷ ಬಾಂಡ್ಯ ಸುಧಾಕರ ಶೆಟ್ಟಿ ಅವರು ಕಟ್ಟಡಕ್ಕೆ ತನ್ನ ಸ್ವಂತ ಜಾಗ ನೀಡುವ ಮೂಲಕ ಹೃದಯ ಶ್ರೀಮಂತಿಕೆ ಮೆರೆದಿದ್ದಾರೆ ಎಂದರು.
ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ ಅವರು ಭದ್ರತಾ ಕೊಠಡಿ, ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ಜಯರಾಮ ರೈ ದುರ್ಗಾಪರಮೇಶ್ವರಿ ಭೋಜನ ಭೂಮಿ, ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ಬ್ಯಾಂಕಿಂಗ್ ವಿಭಾಗ, ಸಹಕಾರಿ ಸಂಘಗಳ ಉಪನಿಬಂಧಕಿ ಲಾವಣ್ಯ ಕೆ.ಆರ್. ಗೋದಾಮು ಉದ್ಘಾಟಿಸಿದರು.
ಸಹಕಾರ ಸಂಘಗಳ ಸಹಾಯಕ ನಿಬಂಧಕಿ ಸುಕನ್ಯಾ, ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕರಾದ ಎಸ್. ರಾಜು ಪೂಜಾರಿ ಬೈಂದೂರು, ಎಂ. ಮಹೇಶ್ ಹೆಗ್ಡೆ ಮೊಳಹಳ್ಳಿ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಮಲ್ಯಾಡಿ ಶಿವರಾಮ ಶೆಟ್ಟಿ, ತಾಲ್ಲೂಕು ಕೃಷಿ ಉತ್ಪನ್ನ ಮಾರಾಟ ಸಹಕಾರಿ ಸಂಘದ ಅಧ್ಯಕ್ಷ ಎಚ್. ಹರಿಪ್ರಸಾದ್ ಶೆಟ್ಟಿ ಕಾನ್ಮಕ್ಕಿ, ದ.ಕ.ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟದ ಮಾಜಿ ನಿರ್ದೇಶಕ ಕೆ. ಬಾಂಡ್ಯ ಸುಬ್ಬಣ್ಣ ಶೆಟ್ಟಿ, ಕರ್ಕುಂಜೆ ಗ್ರಾ.ಪಂ. ಅಧ್ಯಕ್ಷ ಬಿಜ್ರಿ ರಾಜೀವ ಶೆಟ್ಟಿ, ಆಜ್ರಿ ಗ್ರಾ.ಪಂ. ಅಧ್ಯಕ್ಷೆ ಮಲ್ಲಿಕಾ ಶೆಟ್ಟಿ, ಗುಲ್ವಾಡಿ ಗ್ರಾ.ಪಂ. ಅಧ್ಯಕ್ಷೆ ಶೋಭಾ ಎಚ್, ಸಂಘದ ಸಿಇಒ ಸುಭಾಶ್ಚಂದ್ರ ಶೆಟ್ಟಿ, ಬ್ಯಾಂಕ್ ನಿರ್ದೇಶಕರು, ಸಹಕಾರಿ ಪ್ರಮುಖರು ಇದ್ದರು. ಸಂಘದ ಅಧ್ಯಕ್ಷ ಬಾಂಡ್ಯ ಕೆ. ಸುಧಾಕರ ಶೆಟ್ಟಿ ಪ್ರಾಸ್ತಾವಿಕ ಮಾತನಾಡಿದರು. ಸುಬ್ರಹ್ಮಣ್ಯ ಪಡುಕೋಣೆ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.