ADVERTISEMENT

ಉಡುಪಿ| ತೆಂಗಿಗೆ ಕೀಟ ಬಾಧೆ: ಬೇಕಿದೆ ₹791 ಕೋಟಿ

​ಪ್ರಜಾವಾಣಿ ವಾರ್ತೆ
Published 13 ಜನವರಿ 2026, 6:36 IST
Last Updated 13 ಜನವರಿ 2026, 6:36 IST
ತೆಂಗು ಬೆಳೆ ಮಾಹಿತಿ ಕಾರ್ಯಕ್ರಮ ಜರುಗಿತು
ತೆಂಗು ಬೆಳೆ ಮಾಹಿತಿ ಕಾರ್ಯಕ್ರಮ ಜರುಗಿತು   

ಉಡುಪಿ: ತೆಂಗು ಬೆಳೆಗೆ ಕೀಟಗಳ ಬಾಧೆ ಹೆಚ್ಚಾಗಿದ್ದು, ಕೀಟ ಬಾಧೆಯಿಂದಾಗಿ ಹಲವಾರು ರೈತರು ನಷ್ಟ ಅನುಭವಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ತಜ್ಞರ ತಂಡವನ್ನು ಅಧ್ಯಯನಕ್ಕಾಗಿ ನೇಮಿಸಲಾಗಿದ್ದು, ತಂಡದ ವರದಿಯ ಪ್ರಕಾರ ₹791 ಕೋಟಿ ಅನುದಾನದ ಅವಶ್ಯಕತೆ ಇದೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಕೋಟೇಶ್ವರದ ಸರಸ್ವತಿ ಕಲ್ಯಾಣ ಮಂಟಪದಲ್ಲಿ, ತೆಂಗು ಅಭಿವೃದ್ದಿ ಮಂಡಳಿ ಕೊಚ್ಚಿ, ತೋಟಗಾರಿಕೆ ಇಲಾಖೆ ಉಡುಪಿ, ಕೃಷಿ ಇಲಾಖೆ, ಭಾರತೀಯ ಕಿಸಾನ್ ಸಂಘ ಕರ್ನಾಟಕ ಪ್ರದೇಶ ಉಡುಪಿ ಸಂಯುಕ್ತ ಆಶ್ರಯದಲ್ಲಿ ಸೋಮವಾರ ನಡೆದ ತೆಂಗು ಅಭಿವೃದ್ದಿ ಮಂಡಳಿಯ ಸ್ಥಾಪನಾ ದಿನಾಚರಣೆ ಹಾಗೂ ತೆಂಗು ಬೆಳೆ ಮಾಹಿತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಅನುದಾನಕ್ಕಾಗಿ ಈಗಾಗಲೇ ಕೇಂದ್ರ ಕೃಷಿ ಸಚಿವಾಲಯಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ರಾಜ್ಯಸರ್ಕಾರವೂ ತೆಂಗು ಬೆಳೆಗಾರರ ಸಮಸ್ಯೆಗಳ ಬಗ್ಗೆ ಗಮನ ಹರಿಸಿದಲ್ಲಿ ಕೃಷಿಕರ ಬವಣೆ ದೂರಾವಾಗಲಿದೆ ಎಂದರು.

ADVERTISEMENT

ಇತರ ಎಲ್ಲ ಬೆಳೆ ಬೆಳೆಯುವ ರೈತರಿಗಿಂತ ತೆಂಗು ಬೆಳೆ ಬೆಳೆಯುವ ರೈತ ಎನ್ನುವ ಹೆಮ್ಮೆಗೆ ತೆಂಗು ಕೃಷಿಕರು ಪಾತ್ರರಾಗಬೇಕು. ತೆಂಗು ಬೆಳೆಗಾರರಿಗೆ ಶಕ್ತಿ ನೀಡುವ ಇಂತಹ ಕಾರ್ಯಕ್ರಮಗಳು ಪ್ರತಿವರ್ಷವೂ ನಡೆಯಬೇಕು ಎಂದು ಹೇಳಿದರು.

ಪ್ರಪ್ರಥಮ ಬಾರಿಗೆ ಉಡುಪಿ ಜಿಲ್ಲೆಯಲ್ಲಿ ತೆಂಗು ಬೆಳೆ ಮಾಹಿತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ರಾಜ್ಯದಲ್ಲಿ ಅಂದಾಜು 6.50 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ತೆಂಗು ಕೃಷಿ ನಡೆಯುತ್ತಿದೆ ಎಂದರು.

ತೆಂಗು ಕೃಷಿಗೆ ಹಲವಾರು ಸಮಸ್ಯೆ ಮತ್ತು ಸವಾಲುಗಳೂ ಇವೆ. ತೆಂಗು ಕೃಷಿಕರ ಸಮಸ್ಯೆಗಳಿಗೆ ಪರಿಹಾರ ದೊರಕಿಸುವ ಹಾಗೂ ಸಮಗ್ರ ತೆಂಗು ಉತ್ಪನ್ನಗಳಿಗೆ ಬೃಹತ್ ಮಾರುಕಟ್ಟೆ ಒದಗಿಸುವ ನಿಟ್ಟಿನಲ್ಲಿ ಮಾಹಿತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

ಇತ್ತೀಚಿನ ದಿನಗಳಲ್ಲಿ ತೆಂಗಿನ ಗೆರಟೆಗಳಿಗೂ ಬೇಡಿಕೆ ಇದ್ದು ಜನರ ಮನೆಗೇ ಬಂದು ಗೆರಟೆಗಳನ್ನು ಕೊಂಡುಹೋಗುವಂತಾಗಿದೆ. ತೆಂಗು ಬೆಳೆಯ ಉತ್ಪನ್ನಗಳಿಗಿರುವ ಪ್ರಾಮುಖ್ಯತೆಯನ್ನು ಇದು ಸೂಚಿಸುತ್ತದೆ ಎಂದರು.

ಕರಾವಳಿ ಅಭಿವೃದ್ದಿ ಮಂಡಳಿ ಅಧ್ಯಕ್ಷ ಎಂ.ಎ.ಗಫೂರ್ ಮಾತನಾಡಿ, ಕೃಷಿಕರು ಇತರ ಬೆಳೆಗಳಿಗೆ ಪರ್ಯಾಯವಾಗಿ ತೆಂಗು ಬೆಳೆಯುವ ಬಗ್ಗೆ ಆಸಕ್ತಿ ಹೊಂದಿ ಕೌಶಲಾಧಾರಿತವಾಗಿ ತೆಂಗಿನ ಉತ್ಪನ್ನಗಳನ್ನು ಮಾರುಕಟ್ಟೆಗೆ ತಂದಲ್ಲಿ ನಿರುದ್ಯೋಗ ಸಮಸ್ಯೆಗೂ ಮುಕ್ತಿ ಸಿಗಲಿದೆ ಎಂದು ಹೇಳಿದರು.

ತೆಂಗು ಕೃಷಿಯಲ್ಲಿ ಸಾಧನೆ ಮಾಡಿದ ಐವರು ಸಾಧಕರನ್ನು ಸನ್ಮಾನಿಸಲಾಯಿತು. ಬೀಜಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಪ್ರಕಾಶ್ ಪೂಜಾರಿ, ಕೋಟೇಶ್ವರ ಗ್ರಾ.ಪಂ ಅಧ್ಯಕ್ಷೆ ರಾಗಿಣಿ ದೇವಾಡಿಗ, ತೆಂಗು ಅಭಿವೃದ್ದಿ ಮಂಡಳಿಯ ಅಧ್ಯಕ್ಷ ಶುಭ ನಾಗರಾಜನ್, ಕಾಸರಗೋಡು ಸಿ.ಪಿ.ಸಿ.ಆರ್.ಐ ನಿರ್ದೇಶಕ ಕೆ.ಬಿ.ಹೆಬ್ಬಾರ್, ತೆಂಗು ಅಭಿವೃದ್ದಿ ಮಂಡಳಿಯ ವಲಯ ನಿರ್ದೇಶಕಿ ರಶ್ಮಿ, ಭಾರತೀಯ ಕಿಸಾನ್ ಸಂಘದ ಅಧ್ಯಕ್ಷ ನವೀನ್ ಚಂದ್ರ ಜೈನ್, ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಅಶೋಕ್ ಕುಮಾರ್ ಕೊಡ್ಗಿ
ಭಾಗವಹಿಸಿದ್ದರು.

ತೆಂಗು ಅಭಿವೃದ್ದಿ ಮಂಡಳಿಯ ಮುಖ್ಯ ತೆಂಗು ಅಭಿವೃದ್ದಿ ಅಧಿಕಾರಿ ಹನುಮಂತ ಗೌಡ ಬಿ. ಪ್ರಾಸ್ತಾವಿಕವಾಗಿ ಮಾತನಾಡಿದರು. ತೋಟಗಾರಿಕೆ ಇಲಾಖೆ ನಿರ್ದೇಶಕಿ ಕ್ಷಮಾ ಪಾಟೀಲ್ ಸ್ವಾಗತಿಸಿದರು. ಚಂದ್ರಶೇಖರ್ ಬೀಜಾಡಿ ನಿರೂಪಿಸಿದರು. ಸತ್ಯನಾರಾಯಣ ಉಡುಪ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.