
ಉಡುಪಿ: ಅಶ್ಲೀಲ ಸಿಡಿ ಬಿಡುಗಡೆ ಪ್ರಕರಣದಲ್ಲಿ ಸರ್ಕಾರ ಹಾಗೂ ತನಿಖಾ ಸಂಸ್ಥೆಯು ಸಂತ್ರಸ್ತ ಮಹಿಳೆಯ ಪರವಾಗಿ ನಿಲ್ಲುವ ಬದಲು ಆಕೆಯ ಕುಟುಂಬ ಸದಸ್ಯರಿಗೆ ಕಿರುಕುಳ ನೀಡುತ್ತಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನು ಪ್ರಕರಣದಲ್ಲಿ ಅನವಶ್ಯಕವಾಗಿ ಎಳೆದು ತರಲಾಗಿದೆ ಎಂದು ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಟೀಕಿಸಿದರು.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಂತ್ರಸ್ತ ಮಹಿಳೆ ನೆರವು ಕೋರಿದ ಹಿನ್ನೆಲೆಯಲ್ಲಿ ಡಿ.ಕೆ.ಶಿವಕುಮಾರ್ ಸಹಾಯ ಮಾಡಿದ್ದಾರೆ. ಆದರೆ, ಸಿಡಿ ಪ್ರಕರಣದಲ್ಲಿ ಡಿಕೆಶಿ ಅವರನ್ನು ಸಿಲುಕಿಸುವ ಪ್ರಯತ್ನ ನಡೆದಿದೆ. ಮಾಜಿ ಸಚಿವ ರಮೇಶ್ ಜಾರಕಿಹೊಳಿ ಡಿಕೆಶಿ ವಿರುದ್ಧ ಕೀಳುಮಟ್ಟದ ಪದ ಬಳಕೆ ಮಾಡಿರುವುದು ಖಂಡನೀಯ ಎಂದರು.
ಜಾರಕಿಹೊಳಿಯವರದ್ದು ಎನ್ನಲಾದ ಸಿಡಿ ಬಿಡುಗಡೆಯಾಗುತ್ತಿದ್ದಂತೆ ಇತರ 6 ಶಾಸಕರು ಸಿಡಿ ಬಿಡುಗಡೆ ಮಾಡದಂತೆ ಹೈಕೋರ್ಟ್ನಿಂದ ತಡೆಯಾಜ್ಞೆ ತಂದಿರುವ ಉದ್ದೇಶವನ್ನು ತಿಳಿಸಬೇಕು. ಸಂತ್ರಸ್ತ ಮಹಿಳೆಯ ಹೋರಾಟ ನ್ಯಾಯಯುತವಾಗಿದ್ದರೆ ಕಾಂಗ್ರೆಸ್ ಬೆಂಬಲ ನೀಡುತ್ತದೆ. ಆಕೆಗೆ ಕಿರುಕುಳ ನೀಡಿದರೆ ಬೀದಿಗಿಳಿದು ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಜಿಲ್ಲಾ ವಕ್ತಾರ ಬಿಪಿನ್ ಚಂದ್ರಪಾಲ್ ನಕ್ರೆ ಮಾತನಾಡಿ, ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗ ಸಿಡಿ ಹಗರಣಗಳು ಬಯಲಾಗುತ್ತವೆ. ಅನೈತಿಕತೆ ಬಿಜೆಪಿಗೆ ರಾಜಕಾರಣದ ಅನಿವಾರ್ಯವಾಗಿದೆ. ಸಿಡಿ ಸತ್ಯಾಸತ್ಯತೆಯನ್ನು ತನಿಖೆ ನಡೆಸಬೇಕಾದ ಸರ್ಕಾರ ಸಿಡಿ ಬಹಿರಂಗ ಮಾಡಿದ್ದು ಯಾರು ಎಂದು ವಿಚಾರಣೆ ನಡೆಸುತ್ತಿರುವುದು ಪ್ರಕರಣವನ್ನು ಮುಚ್ಚಿಹಾಕಲು ಸರ್ಕಾರ ನಡೆಸಿರುವ ತಂತ್ರವಾಗಿ ಕಾಣುತ್ತಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ವಕ್ತಾರರಾದ ಭಾಸ್ಕರ್ ರಾವ್ ಕಿದಿಯೂರು, ಪದಾಧಿಕಾರಿಗಳಾದ ಕುಶಲ್ ಶೆಟ್ಟಿ, ಅಬಿಬ್ ಅಲಿ, ಸತೀಶ್ ದೇವಾಡಿಗ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.