ADVERTISEMENT

‘ಏಕತೆಯ ಭಾರತ ನಿರ್ಮಾಣದ ಶಕ್ತಿ ವಲ್ಲಭಬಾಯಿ ಪಟೇಲ್‌’‌

ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು

​ಪ್ರಜಾವಾಣಿ ವಾರ್ತೆ
Published 31 ಅಕ್ಟೋಬರ್ 2020, 14:41 IST
Last Updated 31 ಅಕ್ಟೋಬರ್ 2020, 14:41 IST
ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಶನಿವಾರ ಸರ್ದಾರ್ ವಲ್ಲಭಬಾಯಿ ಪಟೇಲ್‌ ಜನ್ಮದಿನಾಚರಣೆ, ಇಂದಿರಾಗಾಂಧಿ ಪುಣ್ಯಸ್ಮರಣೆ ಹಾಗೂ ಕಿಸಾನ್ ಅಧಿಕಾರ್ ದಿವಸ ಕಾರ್ಯಕ್ರಮ ನಡೆಯಿತು.
ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಶನಿವಾರ ಸರ್ದಾರ್ ವಲ್ಲಭಬಾಯಿ ಪಟೇಲ್‌ ಜನ್ಮದಿನಾಚರಣೆ, ಇಂದಿರಾಗಾಂಧಿ ಪುಣ್ಯಸ್ಮರಣೆ ಹಾಗೂ ಕಿಸಾನ್ ಅಧಿಕಾರ್ ದಿವಸ ಕಾರ್ಯಕ್ರಮ ನಡೆಯಿತು.   

ಉಡುಪಿ: ದೇಶವನ್ನು ಗುಲಾಮಗಿರಿಯಿಂದ ಮುಕ್ತಗೊಳಿಸಿ ಪ್ರಜಾಪ್ರಭುತ್ವ ರಾಷ್ಟ್ರವಾಗಿ ಏಕ ಭಾರತ ನಿರ್ಮಾಣವಾಗಿಸಲು ಸರ್ದಾರ್ ವಲ್ಲಭಬಾಯಿ ಪಟೇಲರ ಕೊಡುಗೆ ದೊಡ್ಡದು ಎಂದು ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಹೇಳಿದರು.

ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಶನಿವಾರ ಸರ್ದಾರ್ ವಲ್ಲಭಬಾಯಿ ಪಟೇಲ್‌ ಜನ್ಮದಿನಾಚರಣೆ, ಇಂದಿರಾಗಾಂಧಿ ಪುಣ್ಯಸ್ಮರಣೆ ಹಾಗೂ ಕಿಸಾನ್ ಅಧಿಕಾರ್ ದಿವಸ ಕಾರ್ಯಕ್ರಮದಲ್ಲಿ ಮಾತನಾಡಿದರು.

ಹಿಂದುಳಿದ ವರ್ಗದವರಿಗೆ ಆರ್ಥಿಕ ಸ್ವಾತಂತ್ರ್ಯವನ್ನು ಕೊಟ್ಟ ಧೀಮಂತ ಮಹಿಳೆ ಇಂದಿರಾಗಾಂಧಿ ಅವರನ್ನು ಸ್ಮರಿಸಬೇಕಾಗಿರುವುದು ಎಲ್ಲರ ಕರ್ತವ್ಯ. ಹಾಗೆಯೇ, ಕೇಂದ್ರ ಸರ್ಕಾರದ ರೈತ ವಿರೋಧಿ ನೀತಿ ಖಂಡಿಸಿ ‘ಕಿಸಾನ್ ಅಧಿಕಾರ್ ದಿವಸ್’ ಕಾರ್ಯಕ್ರಮ ನಡೆಸಲಾಗುತ್ತಿದ್ದು, ಮುಂದೆ, ರೈತ ವಿರೋಧಿ ನೀತಿಯ ವಿರುದ್ಧ ಬೃಹತ್ ಸಹಿ ಸಂಗ್ರಹ ಅಭಿಯಾನ ನಡೆಸಲಾಗುವುದು ಎಂದರು.

ADVERTISEMENT

ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಮಾತನಾಡಿ, ದೇಶದ ಏಕತೆ, ಭದ್ರತೆ ಹಾಗೂ ಸಮಗ್ರತೆಗೆ ಸರ್ದಾರ್ ವಲ್ಲಭಭಾಯಿ ಪಟೇಲರ ಕೊಡುಗೆ ಅಪಾರ. ಸ್ವಾತಂತ್ರ್ಯ ಚಳವಳಿಯಲ್ಲಿ ಬ್ರಿಟಿಷರ ದಬ್ಬಾಳಿಕೆಯ ವಿರುದ್ಧ ಗಾಂಧೀಜಿಗೆ ಬೆನ್ನೆಲುಬಾಗಿ ನಿಂತು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ರಾಷ್ಟ್ರದ ಏಕತೆಯ ಬಗ್ಗೆ ಅವರಿಗಿದ್ದ ಬಲವಾದ ಬದ್ದತೆಯನ್ನು ದೇಶ ಎಂದೂ ಮರೆಯುವುದಿಲ್ಲ ಎಂದರು.

15 ವರ್ಷ ಪ್ರಧಾನಿಯಾಗಿ ಕ್ರಾಂತಿಕಾರಿಕ ಯೋಜನೆಗಳ ಜಾರಿಯ ಮೂಲಕ ಸರ್ವರ ಅಭಿವೃದ್ಧಿಗೆ ಕಾರಣರಾದ ಇಂದಿರಾಗಾಂಧಿ ಪುಣ್ಯತಿಥಿಯಂದು ಅವರ ಸ್ಮರಣೆ ಅಗತ್ಯ. ಬಡವರ ಮಕ್ಕಳು ಮಾನಸಿಕ, ಶೈಕ್ಷಣಿಕ, ದೈಹಿಕವಾಗಿ ಬೆಳೆಯಬೇಕು ಎಂಬ ಉದ್ದೇಶದಿಂದ ಅಂಗನವಾಡಿ ಶಾಲೆಗಳನ್ನು ಆರಂಭಿಸಿ, ಬಡತನ ನಿರ್ಮೂಲನೆಗೆ ಪಡಿತರ, ಮಾಸಾಶನ ಹಾಗೂ ಭೂ ಮಸೂದೆಯಂತಹ ಕ್ರಾಂತಿಕಾರಿಕ ಯೋಜನೆಗಳನ್ನು ಇಂದಿರಾ ಜಾರಿಗೆ ತಂದರು ಎಂದರು.

ಕುಂದಾಪುರ ಕಿಸಾನ್ ಘಟಕದ ಅಧ್ಯಕ್ಷರಾದ ಭಾಸ್ಕರ್ ಶೆಟ್ಟಿ ಕುಂದಾಪುರ, ಉಡುಪಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಗೀತಾ ವಾಗ್ಳೆ, ಮಾಜಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಭುಜಂಗ ಶೆಟ್ಟಿ ಮಾತನಾಡಿದರು.

ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಪ್ರಖ್ಯಾತ್ ಶೆಟ್ಟಿ ಸ್ವಾಗತಿಸಿದರು. ಪ್ರದಾನ ಕಾರ್ಯದರ್ಶಿ ವೈ.ಸುಕುಮಾರ್ ವಂದಿಸಿದರು, ಅಣ್ಯಯ್ಯ ಶೇರಿಗಾರ್ ಕಾರ್ಯಕ್ರಮ ನಿರೂಪಿಸಿದರು. ಮಾಜಿ ಶಾಸಕ ಗೋಪಾಲ ಪೂಜಾರಿ, ಮುಖಂಡರಾದ ಬಿ. ನರಸಿಂಹ ಮೂರ್ತಿ, ವೆರೋನಿಕಾ ಕರ್ನೇಲಿಯೋ, ಭಾಸ್ಕರ್ ರಾವ್ ಕಿದಿಯೂರು, ಹರೀಶ್ ಕಿಣಿ, ಶಬ್ಬೀರ್ ಅಹ್ಮದ್, ಕಿಶನ್ ಹೆಗ್ಡೆ ಕೊಳ್ಕೆಬೈಲ್, ಹಬೀಬ್ ಆಲಿ, ರಮೇಶ್ ಕಾಂಚನ್, ರೋಶನಿ ಒಲಿವರ್, ಜ್ಯೋತಿ ಹೆಬ್ಬಾರ್, ಚಂದ್ರಿಕಾ ಶೆಟ್ಟಿ, ಮೀನಾಕ್ಷಿ ಮಾಧವ ಬನ್ನಂಜೆ, ಇಸ್ಮಾಯಿಲ್ ಆತ್ರಾಡಿ, ಉದ್ಯಾವರ ನಾಗೇಶ್ ಕುಮಾರ್, ವಿಶ್ವಾಸ್ ಅಮೀನ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.