ADVERTISEMENT

‘ಅಧಿಕಾರಿಗಳಿಂದ ಸರ್ಕಾರಕ್ಕೆ ಕೆಟ್ಟ ಹೆಸರು’

ಕೋಟೆ ಗ್ರಾಮ ಪಂಚಾಯಿತಿ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 9 ಜುಲೈ 2025, 6:35 IST
Last Updated 9 ಜುಲೈ 2025, 6:35 IST
ಕಾಪು ಬ್ಲಾಕ್ ಕಾಂಗ್ರೆಸ್ ಸಮಿತಿ ವ್ಯಾಪ್ತಿಯ ವಿವಿಧ ಗ್ರಾಮ ಪಂಚಾಯಿತಿ ಕಚೇರಿಗಳ ಎದುರುಗಡೆ ಹಮ್ಮಿಕೊಳ್ಳಲಾಗಿರುವ ಸರಣಿ ಪ್ರತಿಭಟನಾ ಸಭೆಗಳ ಪ್ರಯುಕ್ತ ಕೋಟೆ ಗ್ರಾ.ಪಂ. ಕಚೇರಿ ಮುಂಭಾಗದಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾಜಿ ಸಚಿವ ವಿನಯಕುಮಾರ್ ಸೊರಕೆ ಮಾತನಾಡಿದರು
ಕಾಪು ಬ್ಲಾಕ್ ಕಾಂಗ್ರೆಸ್ ಸಮಿತಿ ವ್ಯಾಪ್ತಿಯ ವಿವಿಧ ಗ್ರಾಮ ಪಂಚಾಯಿತಿ ಕಚೇರಿಗಳ ಎದುರುಗಡೆ ಹಮ್ಮಿಕೊಳ್ಳಲಾಗಿರುವ ಸರಣಿ ಪ್ರತಿಭಟನಾ ಸಭೆಗಳ ಪ್ರಯುಕ್ತ ಕೋಟೆ ಗ್ರಾ.ಪಂ. ಕಚೇರಿ ಮುಂಭಾಗದಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾಜಿ ಸಚಿವ ವಿನಯಕುಮಾರ್ ಸೊರಕೆ ಮಾತನಾಡಿದರು   

ಶಿರ್ವ: ಬಡ ಕುಟುಂಬಗಳಿಗೆ ಮನೆಯ ಹಕ್ಕುಪತ್ರ ನೀಡದೆ ವಿಳಂಬ ನೀತಿ ಅನುಸರಿಸಿ, ಜನರನ್ನು ಸತಾಯಿಸುತ್ತಿರುವ ಅಧಿಕಾರಿಗಳಿಂದಾಗಿ ರಾಜ್ಯ ಸರ್ಕಾರಕ್ಕೆ ಕೆಟ್ಟ ಹೆಸರು ಬರುತ್ತಿದೆ ಎಂದು ಕಾಂಗ್ರೆಸ್‌ ಮುಖಂಡ ವಿನಯಕುಮಾರ್ ಸೊರಕೆ ಹೇಳಿದರು.

ಕಾಪು ಬ್ಲಾಕ್ ಕಾಂಗ್ರೆಸ್ ಸಮಿತಿ ವ್ಯಾಪ್ತಿಯ ವಿವಿಧ ಗ್ರಾಮ ಪಂಚಾಯಿತಿ ಕಚೇರಿಗಳ ಎದುರು ಹಮ್ಮಿಕೊಳ್ಳಲಾಗಿರುವ ಸರಣಿ ಪ್ರತಿಭಟನಾ ಸಭೆಗಳ ಪ್ರಯುಕ್ತ ಕೋಟೆ ಗ್ರಾಮ ಪಂಚಾಯಿತಿ ಕಚೇರಿ ಮುಂಭಾಗದಲ್ಲಿ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.

ಭೂ ಮಂಜೂರಾತಿಗೆ ರಾಜ್ಯ ಸರ್ಕಾರದ ಆದೇಶವಿದ್ದರೂ ಏಳು ವರ್ಷದಿಂದ ಕಾಪು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಒಂದೇ ಒಂದು ಮನೆ ನಿವೇಶನ ನೀಡಲು ಸಾಧ್ಯವಾಗದ ಜನಪ್ರತಿನಿಧಿಗಳು, ಅಕ್ರಮ - ಸಕ್ರಮ ಯೋಜನೆಯಡಿ ಹಕ್ಕುಪತ್ರ ಮತ್ತು ಮನೆ ನಿವೇಶನ ನೀಡುವ ಬಗ್ಗೆ ಅನುಸರಿಸುತ್ತಿರುವ ತಾರತಮ್ಯ ಧೋರಣೆಯನ್ನು ಕಾಂಗ್ರೆಸ್ ಖಂಡಿಸುತ್ತದೆ ಎಂದರು.

ADVERTISEMENT

ಬಡ ಜನರು ನಮ್ಮಲ್ಲಿ ಬಂದು ಸಮಸ್ಯೆ ತಿಳಿಸಿ, ಅಳಲು ತೋಡಿಕೊಂಡಾಗ ಅದಕ್ಕೆ ಸ್ಪಂದಿಸುವುದು ನಮ್ಮ ಕರ್ತವ್ಯವೆಂದು ಭಾವಿಸಿ, ತಹಶೀಲ್ದಾರ್‌ ಅವರನ್ನು ಭೇಟಿಯಾಗಿ ಸಮಸ್ಯೆ ಬಗೆಹರಿಸಿ ಕೊಡಲು ಕ್ರಮ ಕೈಗೊಳ್ಳುವಂತೆ ಪ್ರಯತ್ನಪಟ್ಟರೆ, ನಮ್ಮ ಮೇಲೆಯೇ ಕ್ಷುಲ್ಲಕ ಆರೋಪ ಮಾಡುತ್ತಿರುವುದು ಶಾಸಕರ ಅಸಹಾಯಕತೆ ಎತ್ತಿ ತೋರಿಸುತ್ತದೆ ಎಂದು ಅವರು ಹೇಳಿದ್ದಾರೆ.

ನನ್ನ ಶಾಸಕತ್ವದ ಅವಧಿಯಲ್ಲಿ ಸರ್ಕಾರದಿಂದ 8 ಸಾವಿರ ಮನೆ, ನಿವೇಶನಗಳನ್ನು ಕೊಡಿಸಿದ್ದೆ. ಇದೀಗ ಸಾವಿರಾರು ಅರ್ಜಿಗಳು ಇಂದಿಗೂ ಬಾಕಿಯಿದ್ದು, ಶಾಸಕರು ಯಾಕೆ ಅವುಗಳ ವಿಲೇವಾರಿಗೆ ಆಸಕ್ತಿ ತೋರಿಸುತ್ತಿಲ್ಲ. ಹಕ್ಕುಪತ್ರ ನೀಡಲು ಯಾಕೆ ನಿರ್ಲಕ್ಷ್ಯತೆ ನೀತಿ ಅನುಸರಿಸುತ್ತಿದ್ದಾರೆ? ಶಾಸಕರಿಗೆ ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸಲಾಗದಿದ್ದರೆ ಆ ಸ್ಥಾನದಲ್ಲಿರಲು ತಾನು ಅರ್ಹನೇ ಎಂದು ತನ್ನನ್ನು ತಾನೇ ಪ್ರಶ್ನಿಸಿಕೊಳ್ಳಬೇಕು ಎಂದರು.

9/11 ಪ್ರಕ್ರಿಯೆಯ ಗೊಂದಲ, ವೃದ್ಧಾಪ್ಯ ವೇತನ, ಸಂಧ್ಯಾ ಸುರಕ್ಷಾ, ಪಿಂಚಣಿ ಯೋಜನೆಗಳ ಬಗ್ಗೆ ಜನರಿಗೆ ಸುಳ್ಳು ಮಾಹಿತಿ ಹರಡಿಸಿ, ಬಿಜೆಪಿ ಸರ್ಕಾರದ ಆಡಳಿತದಲ್ಲಿರುವ ಸಂದರ್ಭದಲ್ಲಿ ಆದಂತಹ ಆದೇಶಗಳು ಹಾಗೂ ಈಗಿನ ಕೇಂದ್ರ ಸರ್ಕಾರದ ಆದೇಶಗಳನ್ನೆಲ್ಲ ತಿರುಚಿ ಕಾಂಗ್ರೆಸ್ ಸರ್ಕಾರದ ಆದೇಶವೆಂದು ಅಪಪ್ರಚಾರ ಮಾಡುತ್ತಾ, ಕಾಂಗ್ರೆಸ್‌ ಮೇಲೆ ಗೂಬೆ ಕೂರಿಸಲು ಪ್ರಯತ್ನಿಸುತ್ತಿರುವುದು ಹಾಸ್ಯಾಸ್ಪದ ಎಂದರು.

ಬಿಜೆಪಿಯವರು ಸುಳ್ಳು ಸುದ್ದಿ ಮತ್ತು ಅಪಪ್ರಚಾರವನ್ನೇ ತಮ್ಮ ಕಾಯಕವನ್ನಾಗಿ ಮಾಡಿಕೊಂಡಿದ್ದಾರೆ. ಅವರ ಸುಳ್ಳುಗಳಿಗೆ ಪ್ರತ್ಯುತ್ತರ ನೀಡಲು ಹಾಗೂ ಸತ್ಯ ವಿಚಾರವನ್ನು ಜನರಿಗೆ ಮನವರಿಕೆ ಮಾಡಿಕೊಡುವ ನಿಟ್ಟಿನಲ್ಲಿ ಜಿಲ್ಲೆಯ ಎಲ್ಲಾ ಸ್ಥಳೀಯಾಡಳಿತ ಸಂಸ್ಥೆಗಳ ಎದುರು ಪ್ರತಿಭಟನಾ ಸಭೆ ಹಮ್ಮಿಕೊಂಡಿದ್ದೇವೆ ಎಂದು ತಿಳಿಸಿದರು.

ಮುಖಂಡರಾದ ಪ್ರಮೀಳಾ ಜತ್ತನ್ನ, ದಯಾನಂದ್ ಬಂಗೇರ, ಕಿಶೋರ್ ಅಂಬಾಡಿ, ಸರಸು ಡಿ. ಬಂಗೇರ, ಪ್ರಭಾ ಬಿ. ಶೆಟ್ಟಿ, ಸುಗುಣ, ಪ್ರಶಾಂತ್ ಜತ್ತನ್ನ, ಸುನಿಲ್ ಡಿ. ಬಂಗೇರ, ಸುಶೀಲ್ ಬೋಳಾರ್, ಅಮೀರ್ ಕಾಪು, ನಿಯಾಜ್ ಪಡುಬಿದ್ರೆ, ಗೌರೀಶ್ ಕೋಟ್ಯಾನ್, ನಯೀಮ್ ಕಟಪಾಡಿ, ವಿದ್ಯಾ, ಶಾಲಿನಿ, ಸುಲೋಚನಾ, ಸುಮನ್ ಬೋಳಾರ್, ಪ್ರವೀಣ್ ಫುರ್ತಾಡೊ, ರೋಷನ್, ಅಶೋಕ್ ನಾಯರಿ, ಹಮೀದ್, ಯೂಸುಫ್, ಪ್ರಭಾಕರ್ ಆಚಾರ್ಯ, ಲಿತೇಶ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.