
ಉಡುಪಿ: ಕೇಂದ್ರ ಸರ್ಕಾರವು ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಸ್ವರೂಪವನ್ನು ಬದಲಾಯಿಸುವ ಮೂಲಕ ಬಡವರ ಹಕ್ಕನ್ನು ಕಸಿಯಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ಮಣಿಪಾಲದ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಮಂಗಳವಾರ ಪ್ರತಿಭಟನೆ ನಡೆಯಿತು.
ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ವಿನಯ ಕುಮಾರ್ ಸೊರಕೆ ಮಾತನಾಡಿ, ‘ಮನರೇಗಾ ಯೋಜನೆಯ ಸ್ವರೂಪವನ್ನು ಬದಲಾಯಿಸುವ ಮೂಲಕ ಕೇಂದ್ರ ಸರ್ಕಾರವು ಗ್ರಾಮ ಪಂಚಾಯಿತಿಗಳ ಹಕ್ಕನ್ನು ಕಸಿಯುವ ಪ್ರಯತ್ನ ಮಾಡುತ್ತಿದೆ. ಪಂಚಾಯಿತಿಗಳಿಗೆ ಆದಷ್ಟು ಬೇಗ ಬಾಗಿಲು ಹಾಕಬೇಕೆಂಬ ಉದ್ದೇಶ ಇದರ ಹಿಂದಿದೆ’ ಎಂದು ಆರೋಪಿಸಿದರು.
‘ಮನರೇಗಾ ಯೋಜನೆಯು ಕೇವಲ ರಾಷ್ಟ್ರೀಯ ಹೆದ್ದಾರಿ, ರೈಲ್ವೆ ಕಾಮಗಾರಿಗಳಿಗಷ್ಟೇ ಸೀಮಿತವಾಗುವ ಸಾಧ್ಯತೆ ಇದೆ. ಈ ಯೋಜನೆಯನ್ನು ಗುತ್ತಿಗೆದಾರರ ಕೈಗೆ ನೀಡಲಾಗುತ್ತಿದೆ’ ಎಂದು ಹೇಳಿದರು.
‘ಮಹಾತ್ಮ ಗಾಂಧಿ ಅವರ ಹೆಸರನ್ನು ಇತಿಹಾಸದಿಂದಲೇ ತೆಗೆಯಬೇಕೆನ್ನುವ ಉದ್ದೇಶದಿಂದ ಪದೇ ಪದೇ ಅವರನ್ನು ಅವಮಾನಿಸುವ ಕೆಲಸ ನಡೆಯುತ್ತಿದೆ’ ಎಂದರು.
‘ನಮ್ಮ ದೇಶವನ್ನು ಅಮೆರಿಕಕ್ಕೆ ಒತ್ತೆ ಇಡುವ ಕೆಲಸ ನಡೆಯುತ್ತಿದ್ದು, ವಿಕಸಿತ ಭಾರತ ಎಂದು ಹೇಳಿ ಚೀನಾ ಉತ್ಪನ್ನಗಳ ಮೇಲೆ ಲೇಬಲ್ ಹಚ್ಚಲಾಗುತ್ತಿದೆ. ದೇಶದ ಬಡವರನ್ನು ಇನ್ನಷ್ಟು ಬಡವರನ್ನಾಗಿಸುವ ಮತ್ತು ಶ್ರೀಮಂತರನ್ನು ಇನ್ನಷ್ಟು ಶ್ರೀಮಂತರನ್ನಾಗಿಸುವ ಪ್ರಯತ್ನಗಳು ನಡೆಯುತ್ತಿವೆ’ ಎಂದು ಅವರು ದೂರಿದರು.
‘ಬಡವರ ಹಕ್ಕುಗಳನ್ನು ಕಿತ್ತು ತೆಗೆಯುವ, ಅವರ ಮೇಲೆ ತೆರಿಗೆ ಭಾರ ಹೊರಿಸಲಾಗುತ್ತಿದೆ. ಜನರ ಪ್ರತಿಭಟಿಸುವ ಹಕ್ಕನ್ನೂ ಕಸಿದುಕೊಳ್ಳಲಾಗುತ್ತಿದೆ’ ಎಂದು ಆರೋಪಿಸಿದರು.
ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಪ್ರಮುಖರಾದ ಎಂ.ಎ. ಗಫೂರ್, ಉದಯ್ ಕುಮಾರ್ ಶೆಟ್ಟಿ, ಪ್ರಸಾದ್ ರಾಜ್ ಕಾಂಚನ್, ರಮೇಶ್ ಕಾಂಚನ್, ಕಿಶನ್ ಹೆಗ್ಡೆ ಕೊಳ್ಕೆಬೈಲ್, ಜ್ಯೋತಿ ಹೆಬ್ಬಾರ್, ವೆರೋನಿಕಾ ಕರ್ನೆಲಿಯೊ, ದಿನೇಶ್ ಪುತ್ರನ್, ಬಿ. ನರಸಿಂಹಮೂರ್ತಿ, ಹರೀಶ್ ಕಿಣಿ, ಭಾಸ್ಕರ ರಾವ್ ಕಿದಿಯೂರ್, ಶಬ್ಬಿರ್ ಆಹ್ಮದ್, ಪ್ರಖ್ಯಾತ್ ಶೆಟ್ಟಿ, ಭಾಗವಹಿಸಿದ್ದರು.
ಕೇಂದ್ರ ಸರ್ಕಾರವು ಯೋಜನೆಗಳ ಸ್ವರೂಪವನ್ನು ಬದಲಾವಣೆ ಮಾಡುವ ಮೂಲಕ ಅವುಗಳಿಗೆ ನೀಡುವ ಅನುದಾನವನ್ನೂ ನಿಲ್ಲಿಸುವ ಪ್ರಯತ್ನ ಮಾಡುತ್ತಿದೆಜಯಪ್ರಕಾಶ್ ಹೆಗ್ಡೆ ಕಾಂಗ್ರೆಸ್ ಮುಖಂಡ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.