ಕುಂದಾಪುರ: ‘ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ನೇತೃತ್ವದಲ್ಲಿ ಹಲವಾರು ಸಮಾಜಮುಖಿ ಯೋಜನೆಗಳ ಮೂಲಕ ಕಾಂಗ್ರೆಸ್
ಜನರನ್ನು ತಲುಪುತ್ತಿದೆ’ ಎಂದು ಮುಖಂಡ ಕೆ. ಗೋಪಾಲ ಪೂಜಾರಿ ಹೇಳಿದರು.
ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗುಲ್ವಾಡಿ ಗ್ರಾಮ ಪಂಚಾಯಿತಿ ಎದುರು ವಂಡ್ಸೆ ಬ್ಲಾಕ್ ಕಾಂಗ್ರೆಸ್ ನೇತೃತ್ವದಲ್ಲಿ ನಡೆದ ‘ಬಿಜೆಪಿ ಸುಳ್ಳುಗಳ ವಿರುದ್ದ ಕಾಂಗ್ರೆಸ್ ಸತ್ಯದರ್ಶನ’ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.
ಕಾಂಗ್ರೆಸ್ ಸಾಧನೆಯನ್ನು ಕಾಣುತ್ತಿರುವ ಬಿಜೆಪಿ ಹತಾಷೆಯಿಂದ, ತನ್ನ ನೇತೃತ್ವದ ಸರ್ಕಾರದ ಆಡಳಿತದಲ್ಲಿ ನಡೆದ ತಪ್ಪನ್ನು ಕಾಂಗ್ರೆಸ್ ಮೇಲೆ ಹಾಕಿ ಜನರನ್ನು ಗೊಂದಲಕ್ಕೀಡು ಮಾಡುತ್ತಿದೆ. ಆಶ್ರಯ ಮನೆ, 94ಸಿ, 53–57 ಅಕ್ರಮ ಸಕ್ರಮ, ಪಿಂಚಣಿ ರದ್ದು ಸಮಸ್ಯೆ ಯಾರ ಕಾಲದಲ್ಲಿ ಆರಂಭವಾಗಿದ್ದು ಎಂಬುದನ್ನು ಬಿಜೆಪಿ ಪುನರ್ ಪರಾಮರ್ಶೆ ಮಾಡಬೇಕು ಎಂದರು.
ಬಿಜೆಪಿಗರು ರಾಜಕೀಯ ಲಾಭಕ್ಕಾಗಿ ಗೋಮಾತೆ ಅನ್ನುತ್ತಾರೆ. ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಜಾನುವಾರು ಸಾಕಿ ಸಲಹಿದ, ಹೈನುಗಾರಿಕೆ ಮಾಡುತ್ತಿರುವ ಅನೇಕ ಉದಾಹರಣೆಗಳಿವೆ ಎಂದರು. ಪುತ್ತೂರು ಪ್ರಕರಣದಲ್ಲಿ ಸಂತ್ರಸ್ತ ಯುವತಿಗೆ ನ್ಯಾಯ ಒದಗಿಸಿ ಬಿಜೆಪಿ ನೈತಿಕತೆ ತೋರಬೇಕು. ರಾಜ್ಯ ಸರ್ಕಾರ ನೀಡಿದ ಅನುದಾನದಲ್ಲಿ ನಡೆಯುವ ಕಾಮಗಾರಿಗೆ ಕೇಂದ್ರ ನಾಯಕರ ಭಾವಚಿತ್ರಗಳಿರುವ ಫ್ಲೆಕ್ಸ್ ಅಳವಡಿಕೆ ಎಷ್ಟು ಸರಿ. ಈ ಬಗ್ಗೆ ಅಗತ್ಯ ಬಿದ್ದಲ್ಲಿ ಪ್ರತಿಭಟನೆ ಅನಿವಾರ್ಯ ಎಂದರು.
ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಆಡಳಿತದಲ್ಲಿ, ಬ್ಯಾಂಕ್‌ಗಳು, ವಿಮಾನ ನಿಲ್ದಾಣ ಸಹಿತ ಬೇರೆ ಬೇರೆ ಸಂಸ್ಥೆಗಳು ಬಂಡವಾಳಶಾಹಿಗಳ ಪರವಾಗಿ ನಿಂತು ಖಾಸಗಿಕರಣದತ್ತ ಹೋಗುತ್ತಿದೆ. ಇದರಿಂದ ಮಧ್ಯಮ ವರ್ಗ, ಬಡವರು ಕಷ್ಟಪಡಬೇಕಾಗಿದೆ. ಬಿಎಸ್‌ಎನ್‌ಎಲ್ ಇಂದು ಅತಂತ್ರವಾಗಿದೆ. ದೇಶದ ಆಸ್ತಿ ಮಾರುವ ಯೋಚನೆ, ಯೋಜನೆ ಇದಾಗಿದೆ ಎಂದು ಅವರು ಆರೋಪಿಸಿದರು.
ವಂಡ್ಸೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರದೀಪ್ ಕುಮಾರ್ ಶೆಟ್ಟಿ ಗುಡಿಬೆಟ್ಟು ಮಾತನಾಡಿದರು. ಅಲ್ಪಸಂಖ್ಯಾತ ಘಟಕದ ರಾಜ್ಯ ಕಾರ್ಯದರ್ಶಿ ಜಿ.ಪಿ. ಮಹಮ್ಮದ್, ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ಪ್ರಶಾಂತ್ ಪೂಜಾರಿ ಕರ್ಕಿ, ಗುಲ್ವಾಡಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಚಂದ್ರ ಪೂಜಾರಿ, ಮಾಜಿ ಅಧ್ಯಕ್ಷ ಸುದೇಶ್ ಕುಮಾರ್ ಶೆಟ್ಟಿ, ಸದಸ್ಯರಾದ ಸಲಾಂ, ಹಂಜಾ, ವಂಡ್ಸೆ ಬ್ಲಾಕ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಇರ್ಫಾನ್, ಕಾಂಗ್ರೆಸ್ ಮುಖಂಡರಾದ ಹನೀಫ್ ಗುಲ್ವಾಡಿ, ರಾಜು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.